Home ಇದೀಗ ಬಂದ ಸುದ್ದಿ ರಾಷ್ಟ್ರೀಯ ಸರಾಸರಿಗಿಂತಲೂ ರಾಜ್ಯದ ಆರ್ಥಿಕತೆ ಚೇತರಿಕೆ

ರಾಷ್ಟ್ರೀಯ ಸರಾಸರಿಗಿಂತಲೂ ರಾಜ್ಯದ ಆರ್ಥಿಕತೆ ಚೇತರಿಕೆ

0
ರಾಷ್ಟ್ರೀಯ ಸರಾಸರಿಗಿಂತಲೂ ರಾಜ್ಯದ ಆರ್ಥಿಕತೆ ಚೇತರಿಕೆ

ಬೆಂಗಳೂರು,ಅ.21- ವರ್ಷಾರಂಭದಲ್ಲಿ ಭೀಕರ ಬರಗಾಲ ಹಾಗೂ ಅಂತಾರಾಷ್ಟ್ರೀಯ ಮಾಹಿತಿ ತಂತ್ರಜ್ಞಾನ ಉದ್ಯಮದ ಕುಸಿತದಂತಹ ಸವಾಲುಗಳ ನಡುವೆಯೂ ರಾಜ್ಯದ ಆರ್ಥಿಕತೆ ರಾಷ್ಟ್ರೀಯ ಸರಾಸರಿಗಿಂತಲೂ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ರಾಷ್ಟ್ರೀಯ ಸಾಂಖ್ಯಿಕ ಅಂದಾಜು ಸಂಸ್ಥೆ ತಿಳಿಸಿದೆ.

ಕೇಂದ್ರ ಸರ್ಕಾರದ ಸಾಂಖ್ಯಿಕ ಮತ್ತು ಯೋಜನಾ ಅನುಷ್ಠಾನ ಮಂತ್ರಾಲಯ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ಕರ್ನಾಟಕದ ಆರ್ಥಿಕ ಬೆಳವಣಿಗೆ ಚೇತರಿಕೆಯ ಹಂತದಲ್ಲಿದ್ದು, 2023-24ನೇ ಸಾಲಿಗೆ ಶೇ.10.2 ರಷ್ಟು ಜಿಎಸ್ಡಿಪಿ ಬೆಳವಣಿಗೆ ಕಂಡಿದೆ.
ರಾಷ್ಟ್ರೀಯ ಸರಾಸರಿ ಶೇ.8.2 ರಷ್ಟಿದೆ. ಮುಂದಿನ ದಿನಗಳಲ್ಲಿ ಶೇ.4 ರಷ್ಟು ಹೆಚ್ಚುವರಿ ಬೆಳವಣಿಗೆಯ ದರವನ್ನು ಎನ್ಎಸ್ಇ ಸಂಸ್ಥೆ ಅಂದಾಜಿಸಿದೆ. ಹೀಗಾಗಿ ವರ್ಷಾಂತ್ಯಕ್ಕೆ ರಾಜ್ಯದ ಜಿಎಸ್ಡಿಪಿ ಶೇ.13.1ರಷ್ಟಾಗುವ ನಿರೀಕ್ಷೆಯಿದೆ.

ಬರ ಪರಿಸ್ಥಿತಿಯಿಂದಾಗಿ ರಾಜ್ಯದ ಕೃಷಿ ಕ್ಷೇತ್ರ ನಕಾರಾತಕ ಬೆಳವಣಿಗೆಯನ್ನು ಕಂಡಿತ್ತು. ಇದರ ನಡುವೆ ಮಾಹಿತಿ ತಂತ್ರಜ್ಞಾನ, ಹಾರ್ಡ್ವೇರ್ ಕ್ಷೇತ್ರ ಜಾಗತಿಕ ಮಟ್ಟದಲ್ಲಿ ಶೇ.28ಕ್ಕೆ ಕುಸಿದಿತ್ತು. ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕೂಡ 2022 ರಲ್ಲಿ ಶೇ.15.5 ರಷ್ಟು ಬೆಳವಣಿಗೆಯ ದರದಿಂದ 2023ರಲ್ಲಿ ಶೇ.8 ರಷ್ಟು ಹಿನ್ನಡೆ ಕಂಡಿತ್ತು.

ಈ ಸವಾಲಿನ ನಡುವೆಯೂ ರಾಜ್ಯದ ಆರ್ಥಿಕ ಸ್ಥಿತಿ ಸಮೃದ್ಧಿಯತ್ತ ಹೆಜ್ಜೆ ಹಾಕಿದೆ. ವೈವಿಧ್ಯಮಯ ಬೆಳವಣಿಗೆ ಚಾಲನೆ ಮತ್ತು ತಾಂತ್ರಿಕ ಆಡಳಿತದ ಪರಿಣಾಮ ಹಾಗೂ ಕೈಗಾರಿಕೆಗಳ ಸಹಕಾರದಿಂದ ಕರ್ನಾಟಕದ ಅಭಿವೃದ್ಧಿ ಏರುಗತಿಯಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿನಂದನೆ ಸಲ್ಲಿಸಿದ್ದಾರೆ.

2024-25ನೇ ಸಾಲಿನಲ್ಲಿ ಜಿಎಸ್ಡಿಪಿ ಶೇ.9.4 ರಷ್ಟಾಗಬಹುದು ಮತ್ತು ರಾಷ್ಟ್ರೀಯ ಬೆಳವಣಿಗೆಯ ಸರಾಸರಿಗಿಂತ ತುಸು ಕಡಿಮೆ ಇರಬಹುದು ಎಂದು ಅಂದಾಜಿಸಿತ್ತು. ಆದಾಗ್ಯೂ ಶೇ.10.5 ರಷ್ಟು ಬೆಳವಣಿಗೆಯನ್ನು ದಾಖಲಿಸಲಾಗಿದೆ.

ಹಣಕಾಸು ಇಲಾಖೆಯ ವಾಸ್ತವ ಅಂಕಿ ಅಂಶಗಳ ಪ್ರಕಾರ ಶೇ.14 ರಷ್ಟು ಬೆಳವಣಿಗೆಯಾಗಿದೆ. 2024 ರ ಸೆ. ನಲ್ಲಿ ಶೇ.10 ರಷ್ಟು ದಾಖಲೆಯಾಗಿದೆ. ರಾಜ್ಯದಲ್ಲಿ ವರ್ಷದಿಂದ ವರ್ಷಕ್ಕೆ ಜಿಎಸ್ಟಿ ಸಂಗ್ರಹ ಹೆಚ್ಚಾಗುತ್ತಿದೆ.ಸ್ಟ್ಯಾಂಪ್ ಡ್ಯೂಟಿ ಆದಾಯ ಶೇ.24 ರಷ್ಟು ಉಲ್ಭಣಗೊಂಡಿದೆ. ಇದು ಕರ್ನಾಟಕ ಆರೋಗ್ಯಕರ ಆರ್ಥಿಕ ಹಾದಿಯಲ್ಲಿರುವುದರ ಮುನ್ಸೂಚನೆ ಎಂದು ಮುಖ್ಯಮಂತ್ರಿ ಸಚಿವಾಲಯ ಶ್ಲಾಘಿಸಿದೆ.

ಕರ್ನಾಟಕದ ತಲಾ ಆದಾಯ ದೇಶದಲ್ಲೇ ಹೆಚ್ಚಿದೆ. ಜೊತೆಗೆ ಕಾಂಗ್ರೆಸ್ ಆಡಳಿತವಿರುವ ತೆಲಂಗಾಣದಲ್ಲೂ ಉತ್ತಮ ಅಭಿವೃದ್ಧಿ ದಾಖಲಾಗಿದೆ. ರಾಜ್ಯದಲ್ಲಿ ಜನಪರವಾದ ನೀತಿಗಳು, ಪಂಚಖಾತ್ರಿ ಯೋಜನೆಗಳು, ಎಲ್ಲಾ ವರ್ಗದ ಜನರಿಗೂ ಸರ್ಕಾರದ ಸೌಲಭ್ಯಗಳನ್ನು ತಲುಪಿಸುವುದು, ಅಭಿವೃದ್ಧಿ ಮತ್ತು ಸಮರ್ಥನೀಯ ಒಳಗೊಳ್ಳುವಿಕೆಯ ಪರಿಣಾಮವಾಗಿದೆ ಎಂದು ವಿಶ್ಲೇಷಿಸಿದ್ದಾರೆ.

ಕರ್ನಾಟಕ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯಲ್ಲಿ ಹೆಜ್ಜೆ ಹಾಕಿದೆ. ದೇಶದ ಹಣಕಾಸು ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿದೆ. ತನ್ನ ಅನ್ವೇಷಣಾತಕ ನೀತಿಗಳು, ವ್ಯವಹಾರ ಸ್ನೇಹಿ ಪರಿಸರ ಮತ್ತು ಸವಾಲುಗಳನ್ನು ನಿಭಾಯಿಸುವ ಸಾಮರ್ಥ್ಯದಿಂದಾಗಿ ಸುಸ್ಥಿರ ಅಭಿವೃದ್ಧಿಯಲ್ಲಿ ಮಾದರಿಯಾಗಿವೆ.

ಕೈಗಾರಿಕಾ ವಲಯದ ತಜ್ಞರು ಕರ್ನಾಟಕ ಬಂಡವಾಳ ಆಕರ್ಷಣೆಯ ತನ್ನ ಸಾಮರ್ಥ್ಯವನ್ನು ಮುಂದುವರೆಸಲಿದೆ. ಭಾರತದಲ್ಲಿ ವಿಸ್ತೃತ ಅವಕಾಶವಿರುವ ಡಿಜಿಟಲ್ ಆರ್ಥಿಕತೆಯಲ್ಲಿ ತನ್ನ ಪಾತ್ರವನ್ನು ಮುಂದುವರೆಸಲಿದೆ ಎಂದು ತಿಳಿಸಲಾಗಿದೆ.