ನವದೆಹಲಿ, ಸೆ.14- ಕುಟುಂಬ ರಾಜಕಾರಣದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನ ಪಡೆದುಕೊಂಡಿದೆ. ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸೌ ಸಂಸ್ಥೆ ಬಿಡುಗಡೆ ಮಾಡಿರುವ ವರದಿಯಲ್ಲಿ ಈ ಅಂಶ ಬಹಿರಂಗಗೊಂಡಿದೆ.
ದೇಶದಲ್ಲಿ ಕುಟುಂಬ ರಾಜಕಾರಣ ಎಷ್ಟು ಬೇರೂರಿದೆ ಎಂಬುದರ ಮೇಲೆ ಬೆಳಕು ಚೆಲ್ಲಿರುವ ಈ ವರದಿ ದೇಶದಲ್ಲಿ ಶೇ. 21 ರಷ್ಟು ಸಂಸದರು, ಶಾಸಕರು ಕುಟುಂಬ ರಾಜಕಾರಣದ ಹಿನ್ನೆಲೆ ಹೊಂದಿದವರು ಎನ್ನುವುದನ್ನು ಬಯಲು ಮಾಡಿದೆ.
ಕುಟುಂಬ ರಾಜಕಾರಣದಲ್ಲಿ ಕರ್ನಾಟಕ ನಾಲ್ಕನೇ ಸ್ಥಾನದಲ್ಲಿದೆ. ರಾಜ್ಯದಲ್ಲಿ 94 ಮಂದಿ ವಂಶಪಾರಂಪರ್ಯದಿಂದ ಅಧಿಕಾರಕ್ಕೆ ಬಂದವರಿದ್ದಾರೆ. ಉತ್ತರ ಪ್ರದೇಶದಲ್ಲಿ 141 ಮಂದಿ, ಮಹಾರಾಷ್ಟ್ರದಲ್ಲಿ 129 ಮಂದಿ, ಬಿಹಾರದಲ್ಲಿ 96 ಮಂದಿ ಇದ್ದಾರೆ. ಕೊನೆಯ ಸ್ಥಾನದಲ್ಲಿ ಅಸ್ಸಾಂ ಇದ್ದು, ಇಲ್ಲಿ ಕೇವಲ 9 ಮಂದಿ ಇದ್ದಾರೆ.
ಪ್ರಸ್ತುತ ದೇಶಾದ್ಯಂತ ಸಂಸದರು, ಶಾಸಕರು, ಎಂಎಲ್‌ಸಿಗಳಲ್ಲಿ ಐದರಲ್ಲಿ ಒಬ್ಬರು ಕುಟುಂಬ ರಾಜಕಾರಣದಿಂದ ಬಂದವರಿದ್ದಾರೆ ಎಂದು ವರದಿ ಹೇಳಿದೆ. ದಕ್ಷಿಣ ಭಾರತದಲ್ಲಿ ಕರ್ನಾಟಕ ಮತ್ತು ಆಂಧ್ರಪ್ರದೇಶದಲ್ಲಿ ವಂಶಾಡಳಿತ ಬಲವಾಗಿ ಬೇರೂರಿದೆ ಎಂದು ಈ ವರದಿ ಬಹಿರಂಗಪಡಿಸಿದೆ.