ಬೆಂಗಳೂರು,ಡಿ.20- ಕೋವಿಡ್ ಸೋಂಕಿತ ವ್ಯಕ್ತಿಯೊಬ್ಬರು ತೀವ್ರ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು. ಕೇಂದ್ರ ಸಚಿವರು ನಡೆಸಿದ ವಿವಿಧ ಎಲ್ಲಾ ರಾಜ್ಯಗಳ ಆರೋಗ್ಯ ಸಚಿವರ ಸಭೆಯಲ್ಲಿ ವರ್ಚುಯಲ್ ಮೂಲಕ ಭಾಗವಹಿಸಿದ ದಿನೇಶ್ ಗುಂಡೂರಾವ್ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಬೆಂಗಳೂರಿನ ಚಾಮರಾಜಪೇಟೆಯ 64 ವರ್ಷದ ಪುರುಷರೊಬ್ಬರು ಅಸ್ತಮಾ, ಉಸಿರಾಟದ ಸಮಸ್ಯೆ, ಕ್ಷಯ ರೋಗದಿಂದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಡಿ.15 ರಂದು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಪರೀಕ್ಷೆ ನಡೆಸಿದಾಗ ಅವರಲ್ಲಿ ಕೋವಿಡ್ ಸೋಂಕು ಇರುವುದು ಪತ್ತೆಯಾಗಿದೆ. ಅವರಿಗೆ ರೂಪಾಂತರ ತಳಿ ಜೆಎನ್-1 ಸೋಂಕಿತ್ತೇ ಎನ್ನುವುದು ಇನ್ನೂ ಖಚಿತವಾಗಿಲ್ಲ ಎಂದರು.
ಮಿಮಿಕ್ರಿ ಮಾಡಿ ಉಪರಾಷ್ಟ್ರಪತಿಗಳಿಗೆ ಕಾಂಗ್ರೆಸ್ ಅಪಮಾನ, ಪ್ರಧಾನಿ ಮೋದಿ ಬೇಸರ
ಕೋವಿಡ್‍ನ ರೂಪಾಂತರ ಉಪತಳಿ ಜೆಎನ್-1 ಸೋಂಕು ಅಪಾಯಕಾರಿಯಲ್ಲ ಎಂದು ಹೇಳಲಾಗುತ್ತಿದೆ. ಕಳೆದ ಎರಡು ವಾರಗಳಲ್ಲಿ ದೇಶಾದ್ಯಂತ 16 ಸಾವುಗಳಾಗಿವೆ. ಕೇರಳದಲ್ಲಿ ನಿನ್ನೆವರೆಗೂ 5 ಮಂದಿ ಮೃತಪಟ್ಟಿದ್ದಾರೆ. ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರ ಪ್ರಕಾರ, ಮೃತಪಟ್ಟವರೆಲ್ಲರೂ ಗಂಭೀರ ಸ್ವರೂಪದ ಬೇರೆಬೇರೆ ರೀತಿಯ ಆರೋಗ್ಯ ಸಮಸ್ಯೆಗಳನ್ನು ಹೊಂದಿದ್ದರು. ಮೃತಪಟ್ಟ ವೇಳೆ ಕೋವಿಡ್ ಸೋಂಕಿಗೂ ಗುರಿಯಾಗಿದ್ದರು ಎಂದು ತಿಳಿಸಿದ್ದಾರೆ. ಈವರೆಗಿನ ಮಾಹಿತಿಯ ಪ್ರಕಾರ, ಜೆಎನ್-1 ಸೋಂಕು ಪ್ರಾಣಾಂತಿಕವಲ್ಲ ಎಂಬ ವರದಿ ಇದೆ ಎಂದರು.