ಬೆಂಗಳೂರು,ಮೇ9- 2023-24ನೇ ಸಾಲಿನ ಎಸೆಸ್ಸೆಲ್ಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು, ಕಳೆದ ವರ್ಷಕ್ಕಿಂತಲೂ ಸುಮಾರು 10ರಷ್ಟು ಕುಸಿತ ಕಂಡಿದೆ.ಈ ವರ್ಷ ಶೇ.73.40ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಎಂದಿನಂತೆ ಬಾಲಕೀಯರೇ ಮೇಲಗೈ ಸಾಧಿಸಿದ್ದಾರೆ. ವಿಶೇಷವೆಂದರೆ ನಗರಪ್ರದೇಶದವರನ್ನು ಹಿಂದಿಕ್ಕಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಹೆಚ್ಚು ಫಲಿತಾಂಶ ಪಡೆದಿದ್ದಾರೆ. ಕರಾವಳಿ, ಮಲೆನಾಡಿನ ಶೈಕ್ಷಣಿಕ ಜಿಲ್ಲೆಗಳು ಹಿಂದಿನ ಹಿನ್ನಡೆಯನ್ನು ಸರಿಗಟ್ಟಿ ಮುಂಚೂಣಿಗೆ ಬಂದಿವೆ. ವಿದ್ಯಾರ್ಥಿಗಳ ಶ್ರೇಯಾಂಕದಲ್ಲಿ ಸಾಕಷ್ಟು ಏರುಪೇರು ಕಂಡು ಬಂದಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ವೌಲ್ಯ ನಿರ್ಣಯ ಮಂಡಳಿಯ ಅಧ್ಯಕ್ಷೆ ಮಂಜುಶ್ರೀ ಇಂದು ಪತ್ರಿಕಾ ಗೋಷ್ಠಿಯಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಪ್ರಕಟಿಸಿದರು. 2022-23ನೇ ಸಾಲಿನಲ್ಲಿ ಶೇ.83.89ರಷ್ಟು ಫಲಿತಾಂಶ ಬಂದಿತ್ತು. ಈ ಬಾರಿ 8,59,967 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, 6,31,204 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.73.40ರಷ್ಟು ಫಲಿತಾಂಶ ಬಂದಿದೆ.
2018ರಿಂದ-20ರ ನಡುವೆ ಕೋವಿಡ್ ಅವಧಿಯಲ್ಲಿ ಕಡಿಮೆ ಫಲಿತಾಂಶ ದಾಖಲಾಗಿತ್ತು. ಆ ಬಳಿಕ ಈ ವರ್ಷವೇ ಫಲಿತಾಂಶದಲ್ಲಿ ಕುಸಿತ ಕಂಡಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನಕಾರ್ಯದರ್ಶಿ ರಿತೇಶ್‌ಕುಮಾರ್ ಸಿಂಗ್ ಮಾತನಾಡಿ, ಈ ಬಾರಿ ಬಹುತೇಕ ಶಾಲೆಗಳಲ್ಲಿ ವೆಬ್ ಕಾಸ್ಟಿಂಗ್ ಮೂಲಕ ಪರೀಕ್ಷಾ ಕೇಂದ್ರದಲ್ಲಿನ ಚಟುವಟಿಕೆಗಳನ್ನು ಸಿಸಿಟಿವಿ ಮೂಲಕ ನೇರ ನಿಗಾವಣೆ ವಹಿಸಲಾಗಿತ್ತು. ಫಲಿತಾಂಶ ಕುಸಿಯಲು ಇದು ಕಾರಣವಾಗಿರಬಹುದು ಎಂದು ಹೇಳಿದರು.
ಸದ್ಯಕ್ಕೆ ವಿದ್ಯಾರ್ಥಿಗಳು ಅನುತ್ತೀರ್ಣರಾಗಿದ್ದರೂ ಕೂಡ ಆತಂಕಪಡುವ ಅಗತ್ಯವಿಲ್ಲ. ಪರೀಕ್ಷೆ 2 ಮತ್ತು 3ನೇ ಹಂತದಲ್ಲಿ ಉತ್ತೀರ್ಣರಾಗಲು ಅವಕಾಶವಿದೆ. ವೆಬ್ ಕಾಸ್ಟಿಂಗ್ ತಾತ್ಕಾಲಿಕವಾಗಿ ಪರೀಕ್ಷೆಯನ್ನು ಅತ್ಯಂತ ಶಿಸ್ತುಬದ್ದವಾಗಿ ನಡೆಸಿದೆ ಎನಿಸಿದರೂ ಕೂಡ ಪರೀಕ್ಷೆಯಲ್ಲಿನ ಭವಿಷ್ಯದ ಪಾವಿತ್ರ್ಯತೆ ಮತ್ತು ಸಮಗ್ರತೆ ಪಾಲನೆಗೆ ಸಹಕಾರಿಯಾಗಲಿದೆ ಎಂದು ವಿವರಿಸಿದರು.
ಕಳೆದ ವರ್ಷ ವಿದ್ಯಾರ್ಥಿಗಳಿಗೆ ಶೇ.10ರಷ್ಟು ಹೆಚ್ಚುವರಿ ಅಂಕ(ಗ್ರೇಸ್ ಮಾರ್ಕ್ಸ್) ನೀಡಲಾಗಿತ್ತು. ಈ ಬಾರಿ 25ರಿಂದ 35ರಷ್ಟು ಕಡಿಮೆ ಅಂಕ ಪಡೆದವರಿಗೆ ಶೇ.20ರಷ್ಟು ಗ್ರೇಸ್ ಮಾರ್ಕ್‌್ಸ ನೀಡಲಾಗಿದೆ. ಇಲ್ಲದೆ ಹೋಗಿದ್ದರೆ ಫಲಿತಾಂಶದಲ್ಲಿ ಇನ್ನು ಶೇ.30ರಷ್ಟು ಕುಸಿವಾಗುವ ಸಾಧ್ಯತೆ ಇತ್ತು ಎಂದು ಹೇಳಿದರು.
ಈ ವರ್ಷಕ್ಕೆ ಮಾತ್ರ ಗ್ರೇಸ ಮಾರ್ಕ್ಸ್ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಮುಂದಿನ ವರ್ಷ ಶೇ.10ರಷ್ಟೇ ಪ್ರಮಾಣವನ್ನು ಮುಂದುವರೆಸಲಾಗುವುದು ಎಂದು ರಿತೇಶ್ ಸಿಂಗ್ ಸ್ಪಷ್ಟಪಡಿಸಿದರು.
ಬಾಲಕಿಯರ ಮೇಲುಗೈ:
ಪ್ರಸಕ್ತ ಸಾಲಿನಲ್ಲಿ 4,36,138 ಬಾಲಕರು ಪರೀಕ್ಷೆಗೆ ಹಾಜರಾಗಿದ್ದು, 2,87,416 ಮಂದಿ ಉತ್ತೀರ್ಣರಾಗುವ ಮೂಲಕ ಶೇ.65.90ರಷ್ಟು ಫಲಿತಾಂಶ ಪಡೆದಿದ್ದಾರೆ. 4,23,829 ಬಾಲಕಿಯರು ಹಾಜರಾಗಿ 3,43,788 ಮಂದಿ ಉತ್ತೀರ್ಣರಾಗಿ ಶೇ.81.11ರಷ್ಟು ತೇರ್ಗಡೆಯಾಗಿದ್ದಾರೆ.
ನಗರದಪ್ರದೇಶದಲ್ಲಿ 4,93,900 ವಿದ್ಯಾರ್ಥಿಗಳು ಹಾಜರಾಗಿ 3,59,703 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.72.83ರಷ್ಟು ಫಲಿತಾಂಶ ಗಳಿಸಿದ್ದರೆ, ಗ್ರಾಮೀಣ ಭಾಗದಲ್ಲಿ 3,66, 067 ವಿದ್ಯಾರ್ಥಿಗಳು ಹಾಜರಾಗಿ 2,71,501 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ.74.17ರಷ್ಟು ಫಲಿತಾಂಶ ಪಡೆದಿದ್ದಾರೆ.
ಪ್ರಸಕ್ತ ವರ್ಷದ ಶಾಲಾ ವಿದ್ಯಾರ್ಥಿಗಳ ಪೈಕಿ ಶೇ.76.91ರಷ್ಟು, ಖಾಸಗಿ ಅಭ್ಯರ್ಥಿಗಳ ಪೈಕಿ ಶೇ.10.95, ಪುನರಾವರ್ತಿತ ಶಾಲಾ ವಿದ್ಯಾರ್ಥಿಗಳ ಪೈಕಿ ಶೇ.33.26ರಷ್ಟು ಉತ್ತೀರ್ಣರಾಗಿದ್ದಾರೆ.
ಈ ಬಾರಿಯು ಅನುದಾನರಹಿತ ಶಾಲೆಗಳೇ ಫಲಿತಾಂಶದಲ್ಲಿ ಮುಂದಿವೆ. ಶೇ.86.46ರಷ್ಟು ಫಲಿತಾಂಶ ಗಳಿಸಿವೆ. ಸರ್ಕಾರಿ ಶಾಲೆ ಶೇ.72.46ರಷ್ಟು ಫಲಿತಾಂಶ ಗಳಿಸಿವೆ ಅನುದಾನಿತ ಶಾಲೆಗಳಿಂತಲೂ(ಶೇ.72.22) ಒಂದು ಹೆಜ್ಜೆ ಮುಂದೇ ಇದೆ.
ಅಂಕಿತ ಬಸಪ್ಪ ರಾಜ್ಯಕ್ಕೆ ಪ್ರಥಮ :
ಎಸ್‌ಎಸ್‌ಎಲ್‌ಸಿಯಲ್ಲಿ 625ಕ್ಕೆ 625 ಅಂಕಗಳನ್ನು ಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿ ಬಾಗಲಕೋಟೆ ಜಿಲ್ಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿನಿ ಅಂಕಿತ ಬಸಪ್ಪ ಕೊಣ್ಣೂರ ಅವರಿಗೆ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಅವರು ಅಭಿನಂದಿಸಿದ್ದಾರೆ.
ಮುಧೋಳ ತಾಲೂಕಿನ ಮೆಳ್ಳಿಗಿರಿ ಮೊರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿನಿ ಅಂಕಿತ ಅವರು ರೈತ ಕುಟುಂಬದಲ್ಲಿ ಜನಸಿ ಉತ್ತಮವಾಗಿ ಅಭ್ಯಾಸ ಮಾಡುವ ಮೂಲಕ ಸಾಧನೆ ಮಾಡಿರುವುದು ಶ್ಲಾಘನೀಯ . ಶಾಲೆಗೆ, ಪೋಷಕರಿಗೆ, ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ. ಈ ವಿದ್ಯಾರ್ಥಿನಿಯ ಭವಿಷ್ಯ ಉಜ್ವಲವಾಗಲಿ ಎಂದು ಹಾರೈಸಿದ್ದಾರೆ.
ಜಿ.ಪಂ. ಸಿಇಓ ಶಶಿಧರ್ ಕುರೇರಾ, ಶಾಲಾ ಮುಖ್ಯೋಪಾಧ್ಯಾಯರು ಸೇರಿದಂತೆ ಅನೇಕ ಗಣ್ಯರು ವಿದ್ಯಾರ್ಥಿನಿಗೆ ಅಭಿನಂದನೆ ಸಲ್ಲಿಸಿದ್ದಾರೆ.
ಜಿಲ್ಲಾವಾರು ಫಲಿತಾಂಶ
ಉಡುಪಿ – 94
ದಕ್ಷಿಣಕನ್ನಡ, -92.12
ಶಿವಮೊಗ್ಗ – 98.67
ಕೊಡುಗು- 88.67
ಉತ್ತರಕನ್ನಡ- 86.54
ಹಾಸನ- 86.28
ಮೈಸೂರು- 85.05
ಶಿರಸಿ- 84.64
ಬೆಂಗಳೂರು ಗ್ರಾಮಾಂತರ – 83.67
ಚಿಕ್ಕಮಗಳೂರು – 83.39
ವಿಜಯಪುರ- 79.82
ಬೆಂಗಳೂರು ದಕ್ಷಿಣ – 79
ಬಾಗಲಕೋಟೆ- 77.92
ಬೆಂಗಳೂರು ಉತ್ತರ 77.08
ಹಾವೇರಿ – 75.85
ತುಮಕೂರು- 75.16
ಗದಗ-74.76
ಚಿಕ್ಕಬಳ್ಳಾಪುರ- 73.51
ಮಂಡ್ಯ- 73.59
ಕೋಲಾರ- 73.57
ಚಿತ್ರದುರ್ಗ -72.85
ಧಾರವಾಡ -72.57
ದಾವಣಗೆರೆ 77.48
ಚಾಮರಾಜನಗರ 71.59
ಚಿಕ್ಕೋಡಿ – 69.82
ರಾಮನಗರ -69.53
ವಿಜಯನಗರ -65.61
ಬಳ್ಳಾರಿ- 64.90
ಬೆಳಗಾವಿ -64.93
ಮೂಡಗೆರೆ- 62.44
ರಾಯಚೂರು – 61.2
ಕೊಪ್ಪಳ – 61.16
ಬೀದರ್- 57.52
ಕಲಬುರುಗಿ – 53.04
ಯಾದಗಿರಿ- 50.59