ಬೆಂಗಳೂರು,ಫೆ.15– ಕರ್ನಾಟಕದ ಪರಂಪರೆ, ಸಂಸ್ಕೃತಿ ಹಿರಿಮೆ ಶ್ರೀಮಂತವಾಗಿದ್ದು, ಬಂಡವಾಳ ಹೂಡಿಕೆಗೆ ಪೂರಕವಾದ ವಾತಾವರಣ ಇದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ತಿಳಿಸಿದ್ದಾರೆ.
ಇನ್ವೆಸ್ಟ್ ಕರ್ನಾಟಕದ ಕಾರ್ಯಕ್ರಮದ ಹಿನ್ನೆಲೆಯಲ್ಲಿ ನಡೆದ ಪ್ರವಾಸೋದ್ಯಮ ಇಲಾಖೆಯ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಜನಸ್ನೇಹಿ ರಾಜ್ಯವಾಗಿದ್ದು, ಇದಕ್ಕೆ ಪೂರಕವಾಗಿ ನೂತನವಾಗಿ ಬಿಡುಗಡೆ ಮಾಡಿರುವ ಪ್ರವಾಸೋದ್ಯಮ ನೀತಿಯ ಬಗ್ಗೆ ತಿಳಿಸುತ್ತಾ, ಈಗಾಗಲೇ ನೂತನ ನೀತಿಯಡಿ 793 ಕೋಟಿ ರೂ. ಮೊತ್ತದ 27 ಯೋಜನೆಗಳಿಗೆ ಅನುಮೋದನೆ ನೀಡಿರುವ ಬಗ್ಗೆ ಪಿಪಿಪಿ ಯೋಜನೆಗಳಲ್ಲಿ ಮತ್ತು ಕರಾವಳಿ ಭಾಗದಲ್ಲಿ ಹೂಡಿಕೆಗೆ ಇರುವ ಅಪರಿಮಿತ ಅವಕಾಶಗಳ ಬಗ್ಗೆ ತಿಳಿಸಿದರು.
ಕೆಎಸ್‌ಡಿಸಿ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಪ್ರವಾಸೋದ್ಯಮ ನಿಗಮದ ಮೂಲಕ ಕೈಗೊಳ್ಳುತ್ತಿರುವ ಉಪಕ್ರಮಗಳ ಬಗ್ಗೆ ಹಾಗೂ ನಿಗಮದ ಮುಂದಿನ ಯೋಜನೆಗಳ ಬಗ್ಗೆ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆಯ ಕಾರ್ಯದರ್ಶಿಗಳು ಹಾಗೂ ನಿರ್ದೇಶಕರು ಇಲಾಖೆಯ ನೀತಿಯ ಬಗ್ಗೆ ಧೈಯೋದ್ದೇಶಗಳ ಬಗ್ಗೆ ಸವಿಸ್ತಾರವಾಗಿ ತಿಳಿಸುತ್ತಾ, ರಾಜ್ಯದಲ್ಲಿ ಹೂಡಿಕೆ ಮಾಡಲು ಮುಕ್ತ ಆಹ್ವಾನ ನೀಡಿದರು. ಸಭೆಯಲ್ಲಿ ಹೂಡಿಕೆದಾರರು ಹಾಗೂ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.