ನವದೆಹಲಿ, ಸೆ.4- ದೇಶದದ್ಯಾಂತ ಭಾರೀ ಸದ್ದು ಮಾಡಿರುವ ಧರ್ಮಸ್ಥಳ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐಎ) ಗೆ ವಹಿಸಬೇಕೆಂದು ಒತ್ತಾಯಿಸಿ, ಕರ್ನಾಟಕದ ಸನಾತನ ಸಂತರ ನಿಯೋಗವು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಮನವಿ ಸಲ್ಲಿಸಿದೆ. ಪಂಚಮಸಾಲಿ ಲಿಂಗಾಯತ ಮಠದ ವಚನಾನಂದ ಸ್ವಾಮೀಜಿ ನೇತೃತ್ವದ ಈ ನಿಯೋಗದಲ್ಲಿ, ಮಂಗಳೂರಿನ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಸೇರಿದಂತೆ ವಿವಿಧ ಪೀಠಗಳ ಒಟ್ಟು ಎಂಟು ಸ್ವಾಮೀಜಿಗಳು ಭಾಗವಹಿಸಿದ್ದರು.
ಈ ಭೇಟಿಯ ಸಂದರ್ಭದಲ್ಲಿ, ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಮತ್ತು ಅಪಪ್ರಚಾರದ ಕುರಿತು ಸುದೀರ್ಘ ಚರ್ಚೆ ನಡೆದಿವೆ. ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾದ ಶವ ಹೂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಕರ್ನಾಟಕ ಸರ್ಕಾರವು ರಚಿಸಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆಯ ಬಗ್ಗೆ ಸ್ವಾಮೀಜಿಗಳಿಗೆ ಯಾವುದೇ ಆಕ್ಷೇಪವಿಲ್ಲ. ಆದರೆ, ಈ ಪ್ರಕರಣವನ್ನು ಎನ್‌ಐಎಗೆ ವಹಿಸಿದರೆ ಹೆಚ್ಚು ಪಾರದರ್ಶಕವಾಗಿ ಮತ್ತು ಸಮಗ್ರವಾಗಿ ತನಿಖೆ ನಡೆಯಲಿದೆ ಎಂದು ಸ್ವಾಮೀಜಿಗಳ ತಂಡ ಒತ್ತಾಯಿಸಿದೆ.
ಧರ್ಮಸ್ಥಳದ ಬಾಹುಬಲಿ ಬೆಟ್ಟದವರೆಗೆ ತಲುಪಿರುವ ಉತ್ಖನನ ಕಾರ್ಯಾಚರಣೆಯ ಬಗ್ಗೆ ಸ್ವಾಮೀಜಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಈ ಉತ್ಖನನವು ಶ್ರೀ ಕ್ಷೇತ್ರ ಧರ್ಮಸ್ಥಳದ ಆಧ್ಯಾತಿಕ ಮಹತ್ವವನ್ನು ಕೆಡವುತ್ತಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಈ ಪ್ರಕರಣದ ಹಿಂದೆ ದೊಡ್ಡ ಷಡ್ಯಂತ್ರವಿದೆ ಎಂದು ಆರೋಪಿಸಿದ ಸ್ವಾಮೀಜಿಗಳು, ಈ ಷಡ್ಯಂತ್ರದ ಸತ್ಯಾಂಶವನ್ನು ಬಯಲಿಗೆ ತರಬೇಕೆಂದು ಒತ್ತಾಯಿಸಿದ್ದಾರೆ.
ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ನಡೆದ ಚರ್ಚೆಯಲ್ಲಿ, ಸ್ವಾಮೀಜಿಗಳು ಧರ್ಮಸ್ಥಳದ ವಿರುದ್ಧ ನಡೆಯುತ್ತಿರುವ ಅಪಪ್ರಚಾರದ ಕುರಿತು ವಿವರವಾಗಿ ಮಾಹಿತಿ ನೀಡಿದ್ದಾರೆ. ಧರ್ಮಸ್ಥಳವು ಲಕ್ಷಾಂತರ ಭಕ್ತರ ಆಧ್ಯಾತಿಕ ಕೇಂದ್ರವಾಗಿದ್ದು, ಇದರ ವಿರುದ್ಧ ಯೋಜಿತ ರೀತಿಯಲ್ಲಿ ಷಡ್ಯಂತ್ರ ನಡೆಯುತ್ತಿದೆ ಎಂದು ಅವರು ಆರೋಪಿಸಿದ್ದಾರೆ. ಶಬರಿಮಲೆ ಮತ್ತು ತಿರುಪತಿಯಂತಹ ಇತರ ಪವಿತ್ರ ಧಾರ್ಮಿಕ ಕ್ಷೇತ್ರಗಳ ಬಳಿಕ, ಈಗ ಧರ್ಮಸ್ಥಳವನ್ನು ಗುರಿಯಾಗಿಸಲಾಗಿದೆ ಎಂದು ಸ್ವಾಮೀಜಿಗಳು ಗೃಹ ಸಚಿವರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.
- ಧರ್ಮಸ್ಥಳ ಪ್ರಕರಣ NIAಗೆ ವಹಿಸಿ: ಸಂತರಿಂದ ಅಮಿತ್‌ಶಾಗೆ ಮನವಿ
- ಜಾಗತಿಕ ಮಾದರಿಯ ಏಕರೂಪ ಜಿಎಸ್ಟಿಗೆ ಗೃಹ ಸಚಿವ ಪರಮೇಶ್ವರ್ ಆಗ್ರಹ
- ಮಾವೋವಾದಿಗಳ ಗುಂಡೇಟಿಗೆ ಇಬ್ಬರು ಯೋಧರು ಬಲಿ
- ನಕಲಿ ಹಣಕಾಸು ಸಂಸ್ಥೆಯಿಂದ ಹೂಡಿಕೆದಾರರಿಗೆ 93 ಕೋಟಿ ವಂಚನೆ
- ಕ್ರಿಕೆಟಿಗ ಶಿಖರ್ ಧವನ್ಗೆ ಇಡಿ ಸಮನ್ಸ್
ಹಿಂದೂ ಧರ್ಮ ಕ್ಷೇತ್ರಗಳನ್ನು ಸಂಶಯದಿಂದ ನೋಡುವಂತೆ ಮಾಡುವ ಷಡ್ಯಂತ್ರವಿದು. ಜನರು ದೇವಸ್ಥಾನಗಳಿಗೆ ಹೋಗದಂತೆ ತಡೆಯುವ ದುರುದ್ದೇಶ ಇದರ ಹಿಂದಿದೆ ಎಂದು ನಿಯೋಗವು ಆರೋಪಿಸಿದೆ.
ಸ್ವಾಮೀಜಿಗಳ ನಿಯೋಗವು ಈ ಪ್ರಕರಣವನ್ನು ಎನ್‌ಐಎಗೆ ಶೀಘ್ರವಾಗಿ ವಹಿಸಬೇಕೆಂದು ಮನವಿ ಮಾಡಿದೆ. ಈ ಆರೋಪಗಳ ಹಿಂದೆ ರಾಷ್ಟ್ರವಿರೋಧಿ ಶಕ್ತಿಗಳ ಕೈವಾಡವಿದೆ ಎಂದು ಸ್ವಾಮೀಜಿಗಳು ಆರೋಪಿಸಿದ್ದಾರೆ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ ಎಂದು ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದ್ದಾರೆ.
ಈ ಪ್ರಕರಣದ ಗಂಭೀರತೆಯನ್ನು ಅರಿತಿರುವ ಶಾ, ಕೇಂದ್ರ ಸರ್ಕಾರವು ಈ ವಿಷಯದಲ್ಲಿ ಗಂಭೀರವಾಗಿ ಕ್ರಮ ಕೈಗೊಳ್ಳಲಿದೆ ಎಂದು ಸೂಚಿಸಿದ್ದಾರೆ. ಸ್ವಾಮೀಜಿಗಳು ಈ ಷಡ್ಯಂತ್ರವು ಕೇವಲ ಧರ್ಮಸ್ಥಳಕ್ಕೆ ಸೀಮಿತವಾಗಿಲ್ಲ, ಬದಲಿಗೆ ಇತರ ಹಿಂದೂ ಧಾರ್ಮಿಕ ಕ್ಷೇತ್ರಗಳನ್ನೂ ಗುರಿಯಾಗಿಸುತ್ತಿದೆ ಎಂದು ಅಮಿತ್ ಶಾ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ. ಈ ಪ್ರಕರಣವು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಬಿಜೆಪಿಯು ಈ ಆರೋಪಗಳನ್ನು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ಎಂದು ಕರೆದು, ಎನ್‌ಐಎ ತನಿಖೆಗೆ ಒತ್ತಾಯಿಸಿದೆ. ಕಾಂಗ್ರೆಸ್ ಸರ್ಕಾರವು ಎಸ್‌ಐಟಿ ತನಿಖೆಯನ್ನು ಸಮರ್ಥವಾಗಿ ನಡೆಸುತ್ತಿದೆ ಎಂದು ಹೇಳಿದ್ದು, ಎನ್‌ಐಎಗೆ ವಹಿಸುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.
ಆದರೆ, ಈ ವಿಷಯದಲ್ಲಿ ರಾಜಕೀಯ ಒತ್ತಡ ಹೆಚ್ಚಾಗುತ್ತಿದ್ದು, ಧರ್ಮಸ್ಥಳದ ಧಾರ್ಮಿಕ ಮಹತ್ವವನ್ನು ಕಾಪಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಮಧ್ಯಪ್ರವೇಶಕ್ಕೆ ಒತ್ತಡ ಹೆಚ್ಚುತ್ತಿದೆ.
ಸ್ವಾಮೀಜಿಗಳ ನಿಯೋಗ ನೇರವಾಗಿ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿರುವುದು ಪ್ರಕರಣವನ್ನು ಎನ್‌ಐಎಗೆ ವಹಿಸುವ ಸಾಧ್ಯತೆಯನ್ನುಹೆಚ್ಚಿಸಿದೆ.