ಬೆಂಗಳೂರು, ಆ.1– ವಾಹನ ಚಾಲಕರೇ ಎಚ್ಚರ… ರೋಡ್ ಚೆನ್ನಾಗಿದೆ ಎಂದು ವೇಗವಾಗಿ ವಾಹನ ಚಲಾಯಿಸಿದರೆ ಪ್ರಕರಣ ದಾಖಲಾಗುತ್ತೆ. ಮೈಸೂರು, ಬೆಂಗಳೂರು, ಎಕ್ಸ್ ಪ್ರೆಸ್ ವೇ ನಲ್ಲಿ ಹೆಚ್ಚಾಗಿ ಅಪಘಾತ ಪ್ರಕರಣಗಳು ಸಂಭವಿಸಿ ಅನೇಕ ಸಾವು-ನೋವುಗಳು ಸಂಭವಿಸಿದ್ದವು. ಎಚ್ಚೆತ್ತ ಹೆದ್ದಾರಿ ಪ್ರಾಧಿಕಾರ ಹಾಗೂ ಸಂಚಾರಿ ಪೊಲೀಸರು ರಸ್ತೆಯಲ್ಲಿ ಎಐ ಕ್ಯಾಮೆರಾ ಅಳವಡಿಸಿದ್ದರಿಂದ ಗಣನೀಯವಾಗಿ ಅಪಘಾತಗಳು ಇಳಿಮುಖವಾಗಿವೆ.
ಕಳೆದ ಕೆಲದಿನಗಳ ಹಿಂದೆ ಅಷ್ಟೇ ನೈಸ್ ರಸ್ತೆಯಲ್ಲಿ ಕಾರೊಂದು ಅತಿ ವೇಗವಾಗಿ ಚಲಾಯಿಸಿ ಅಪಘಾತವಾಗಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದರು. ಹೀಗಾಗಿ ವೇಗಕ್ಕೆ ಕಡಿವಾಣ ಹಾಕಲು ಇಂದಿನಿಂದ ರಾಜ್ಯಾದ್ಯಂತ ಹೈವೆಗಳಲ್ಲಿ ಗಂಟೆಗೆ 130 ಕಿಲೋ ಮೀಟರ್ ವೇಗಕ್ಕಿಂತ ಹೆಚ್ಚು ವೇಗದಲ್ಲಿ ವಾಹನ ಚಲಾಯಿಸಿದರೆ ಮಾಲೀಕರ ಮೇಲೆ ಪ್ರಕರಣ ದಾಖಲಾಗಲಿದೆ.
ಜೊತೆಗೆ ಎರಡು ಸಾವಿರ ದಂಡ ಮತ್ತು ಗರಿಷ್ಠ ಆರು ತಿಂಗಳು ಜೈಲು ವಿಧಿಸಲಾಗುವುದು. ಜೊತೆಗೆ ಚಾಲನ ಪರವಾನಗಿಯನ್ನು ಕೂಡ ರದ್ದು ಪಡಿಸಲು ಪ್ರಾದೇಶಿಕ ಸಾರಿಗೆ ಕೇಂದ್ರಕ್ಕೆ ಪೊಲೀಸರು ಪತ್ರ ಬರೆಯಲಿದ್ದಾರೆ. ಇಲ್ಲಿಯವರೆಗೂ ನಿಗದಿ ಪಡಿಸಿದ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ವಾಹನ ಚಲಾಯಿಸಿದರೆ ಕೇವಲ ದಂಡ ವಿಧಿಸಲಾಗುತ್ತಿತ್ತು.
ಆದರೆ ಇಂದಿನಿಂದ ಹಾಗಾಗುವುದಿಲ್ಲ. ದಂಡದ ಜೊತೆಗೆ ಪ್ರಕರಣವನ್ನು ಸಹ ದಾಖಲಿಸಲಾಗುವುದು ಎಂದು ರಾಜ್ಯ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ಸಾಮಾಜಿಕ ಜಾಲತಾಣ-ಎಕ್ಸ್ ನಲ್ಲಿ ತಿಳಿಸಿದ್ದಾರೆ.
ಎಕ್ಸ್ ಪ್ರೆಸ್ ಹೈವೆನಲ್ಲಿ ವಾಹನಗಳ ವೇಗ ನಿಯಂತ್ರಣಕ್ಕೆ ಪೊಲೀಸರು ಆರ್ಟಿಫಿಷಲ್ ಇಂಟಲಿಜೆಂಟ್ಸ್ ಮೊರೆ ಹೋಗಿದ್ದು, ಹೆದ್ದಾರಿಗಳಲ್ಲಿ ಕ್ಯಾಮೆರಾ ಅಳವಡಿಕೆ ಮಾಡಿದ್ದಾರೆ. ಈ ಕ್ಯಾಮೆರಾ ಸ್ವಯಂ ಚಾಲಿತ ನಂಬರ್ ಪ್ಲೇಟ್ ಗುರುತಿಸುವುದರೊಂದಿಗೆ ವಾಹನಗಳ ಮಾಹಿತಿಯನ್ನು ಕಂಟ್ರೋಲ್ ರೂಂಗೆ ರವಾನಿಸಿ ನಂತರ ಆರ್‌ಟಿಓ ಸಂಪರ್ಕ ಪಡೆದು ವಾಹನ ಮಾಲೀಕರಿಗೆ ದಂಡದ ನೊಟೀಸ್ ನೀಡಲಾಗುತ್ತದೆ. ಇದರಿಂದ ವಾಹನಗಳ ವೇಗ ತಗ್ಗಲಿದ್ದು, ಅಪಘಾತಗಳ ಸಂಖ್ಯೆ ಇಳಿಮುಖವಾಗುವ ಸಾಧ್ಯತೆ ಇದೆ.