ಬೆಂಗಳೂರು, ಅ.15-ಪ್ರಸಕ್ತ 2025-26ನೇ ಶೈಕ್ಷಣಿಕ ಸಾಲಿನಿಂದ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪರೀಕ್ಷೆಯಲ್ಲಿ ತೇರ್ಗಡೆಯ ಅಂಕಗಳನ್ನು ಕಡಿತಗೊಳಿಸಲಾಗಿದ್ದು, ಶೇ.33ರಷ್ಟು ಅಂಕ ಪಡೆದವರನ್ನು ತೇರ್ಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಎಸ್. ಮಧುಬಂಗಾರಪ್ಪ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಒಟ್ಟಾರೆ ಶೇ.33ರಷ್ಟು ಅಂಕಗಳನ್ನು ಪಡೆದು 625 ಅಂಕಗಳಿಗೆ ಕನಿಷ್ಠ 206 ಅಂಕಗಳನ್ನು ಗಳಿಸಬೇಕು. ಆಯಾ ವಿಷಯದ ಒಟ್ಟು ಅಂಕಗಳಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಪಡೆದ ಅಭ್ಯರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಕನಿಷ್ಠ ಶೇ.30 ಅಂಕಗಳನ್ನು ಪಡೆಯಬೇಕು. ಪ್ರತಿ ವಿಷಯದಲ್ಲೂ ಲಿಖಿತ/ಪ್ರಾಯೋಗಿಕ/ಆಂತರಿಕ ಅಂಕಗಳು ಸೇರಿ ಕನಿಷ್ಠ 30 ಅಂಕಗಳನ್ನು ಪಡೆಯಬೇಕು. ಒಟ್ಟು 600 ಅಂಕಗಳಿಗೆ 198 ಅಂಕಗಳನ್ನು ಪಡೆದ ವಿದ್ಯಾರ್ಥಿಯನ್ನು ಉತ್ತೀರ್ಣ ಎಂದು ಘೋಷಿಸಲಾಗುವುದು. ಈ ನಿಯಮವು ಪ್ರಸಕ್ತ ಶೈಕ್ಷಣಿಕ ಸಾಲಿನಿಂದ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಹೊಸ ವಿದ್ಯಾರ್ಥಿಗಳು, ಪುನರಾವರ್ತಿತ ಹಾಗೂ ಖಾಸಗಿ ಅಭ್ಯರ್ಥಿಗಳು ಅನ್ವಯ ಆಗುತ್ತದೆ ಎಂದು ಅವರು ಮಾಹಿತಿ ನೀಡಿದರು.
ಸಿಬಿಎಸ್‌ಇ ಮತ್ತು ನೆರೆ ರಾಜ್ಯಗಳಲ್ಲಿ ಉತ್ತೀರ್ಣತೆ ಅಂಕಗಳಿಗೆ ಸಂಬಂಧಪಟ್ಟಂತೆ ಎಲ್ಲಾ ವಿಷಯಗಳಲ್ಲೂ ಹಾಗೂ ಪ್ರತಿ ವಿಷಯದಲ್ಲಿ ಕನಿಷ್ಠ ಶೇ.33 ಅಂಕಗಳನ್ನು ಪಡೆಯಬೇಕೆಂಬ ಮಾನದಂಡಗಳನ್ನು ಅಳವಡಿಸಿಕೊಳ್ಳಲಾಗಿದೆ. ರಾಜ್ಯ ಆಡಳಿತ ಸುಧಾರಣಾ ಆಯೋಗವು ಕೂಡ ಉತ್ತೀರ್ಣತಾ ಅಂಕಗಳನ್ನು ಕಡಿಮೆ ಮಾಡಲು ಶಿಫಾರಸು ಮಾಡಿತ್ತು. ಇದುವರೆಗೂ ಎಸ್‌ಎಸ್ ಎಲ್‌ಸಿ ಮತ್ತು ದ್ವಿತೀಯ ಪಿಯುಸಿಯಲ್ಲಿ ತೇರ್ಗಡೆಯಾಗಲು ಕನಿಷ್ಠ ಶೇ.35ರಷ್ಟು ಅಂಕಗಳನ್ನು ಪಡೆಯಬೇಕೆಂಬ ನಿಯಮವಿತ್ತು ಎಂದು ಅವರು ಹೇಳಿದರು.
ಈ ಬದಲಾವಣೆಯು ರಾಜ್ಯದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಸಕಾರಾತಕ ಪರಿಣಾಮ ಬೀರಲಿದ್ದು, ಮುಂದಿನ ದಿನಗಳಲ್ಲಿ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಮತ್ತಷ್ಟು ವಿವರಗಳನ್ನು ಒದಗಿಸಲಿದೆ ಎಂದರು.
ತೇರ್ಗಡೆಯ ಕನಿಷ್ಠ ಅಂಕಗಳನ್ನು ಕಡಿತ ಮಾಡುವುದಕ್ಕೆ ಸಾರ್ವಜನಿಕ ಸಲಹೆ-ಸೂಚನೆಗೆ ಅವಕಾಶ ಕಲ್ಪಿಸಲಾಗಿತ್ತು. ಶೇ. 33ರಷ್ಟು ಅಂಕಗಳ ಪರವಾಗಿ 701 ಪತ್ರಗಳು ಬಂದಿದ್ದವು. ಶೇ. 35 ರಷ್ಟು ಅಂಕಗಳ ಪರವಾಗಿ ಕೇವಲ 8 ಪತ್ರಗಳು ಬಂದಿದ್ದವು. ಹೀಗಾಗಿ ಶೇ.33ರಷ್ಟು ಅಂಕಗಳನ್ನು ತೇರ್ಗಡೆಗೆ ಪರಿಗಣಿಸಲು ತೀರ್ಮಾನಿಸಲಾಗಿದೆ ಎಂದರು.
ಪರೀಕ್ಷೆಯ ವ್ಯವಸ್ಥೆಯಲ್ಲಿ ಸುಧಾರಣೆ ತರುವುದು ಅತಿ ಮುಖ್ಯವಾಗುತ್ತದೆ. ಇದರ ಬಗ್ಗೆ ಸಾಕಷ್ಟು ಚರ್ಚೆಗಳು ಆಗುತ್ತಿದ್ದವು. ವಿದ್ಯಾರ್ಥಿಗಳು ಬೇರೆ ವ್ಯವಸ್ಥೆಯಲ್ಲಿ ಉತ್ತೀರ್ಣರಾದರೆ ಮುಂದೆ ತೊಂದರೆಯಾಗುತ್ತದೆ. ಹೀಗಾಗಿ ವೆಬ್‌ಕಾಸ್ಟಿಂಗ್ ಮೂಲಕ ಪರೀಕ್ಷೆ ನಡೆಸುತ್ತಿದ್ದೇವೆ. ವಾರ್ಷಿಕ ಮೂರು ಪರೀಕ್ಷೆಗಳನ್ನು ಜಾರಿಗೆ ತರಲಾಗಿದೆ ಎಂದು ಅವರು ಹೇಳಿದರು.
ಸರ್ಕಾರಿ ಶಾಲೆಗಳಲ್ಲಿ ಒಳ್ಳೆ ಶಿಕ್ಷಕರಿದ್ದಾರೆ. ಆದರೆ, ಅವರ ಸೇವೆ ಬಳಸಿಕೊಳ್ಳುವುದರಲ್ಲಿ ಇಲಾಖೆ ಎಡವುತ್ತಿತ್ತು. ಶಿಕ್ಷಕರು ಅದನ್ನು ಸರಿಪಡಿಸಿಕೊಂಡು ಪಾಠ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕೂಡ ಗ್ರೇಸ್ ಅಂಕಗಳನ್ನು ನೀಡಬಾರದು ಎಂದು ಹೇಳಿದ್ದರು. ನಮಗೆ ಶೇ. 75ರಷ್ಟು ಗುರಿ ನೀಡಿದ್ದರು. ಈ ವರ್ಷ ನಾವು ಶೇ.79 ರಷ್ಟು ಫಲಿತಾಂಶ ಪಡೆದಿದ್ದೇವೆ ಎಂದರು.
ರಾಜ್ಯಾದ್ಯಂತ 800 ಸರ್ಕಾರಿ ಶಾಲೆಗಳನ್ನು ಒಂದೇ ಬಾರಿಗೆ ಉನ್ನತೀಕರಿಸಿ ಕರ್ನಾಟಕ ಪಬ್ಲಿಕ್ ಶಾಲೆಗಳನ್ನಾಗಿ ಪರಿವರ್ತಿಸಲು ಯೋಜನೆ ರೂಪಿಸಲಾಗಿದ್ದು, 400 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುವುದು. ಈ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ತರಗತಿಯಿಂದ ದ್ವಿತೀಯ ಪಿಯುಸಿವರೆಗೆ ಒಂದೇ ಸೂರಿನಡಿ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಲಾಗುವುದು. ಏಷ್ಯಾ ಅಭಿವೃದ್ಧಿ ಬ್ಯಾಂಕ್‌ನ ಸಹಯೋಗದೊಂದಿಗೆ ರಾಜ್ಯ ಸರ್ಕಾರದ ವತಿಯಿಂದ 500 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಉನ್ನತೀಕರಿಸಲಾಗುವುದು. ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ನಿಧಿಯ ಮೂಲಕ 200 ಶಾಲೆಗಳನ್ನು ಕೆಪಿಎಸ್ ಶಾಲೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ತಿಳಿಸಿದರು.
ಗಣಿ ಪರಿಸರ ಪುನಶ್ಚೇತನ ನಿಗಮದ ವತಿಯಿಂದ 10 ತಾಲ್ಲೂಕುಗಳಲ್ಲಿ 100 ಕೆಪಿಎಸ್ ಶಾಲೆಗಳನ್ನು ಉನ್ನತೀಕರಿಸಿ ಪ್ರತ್ಯೇಕ ಡಿಪಿಎಆರ್ ತಯಾರಿಸಲಾಗುವುದು. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ 2ರಿಂದ 3 ಕೆಪಿಎಸ್ ಶಾಲೆಗಳು, ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರತಿ ತಾಲ್ಲೂಕಿನಲ್ಲಿ 4ರಿಂದ 5 ಶಾಲೆಗಳನ್ನು ಉನ್ನತೀಕರಿಸಲಾಗುವುದು ಎಂದರು.
ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಲ್ಲಿ ಶಿಕ್ಷಕರು ಭಾಗವಹಿಸುತ್ತಿದ್ದಾರೆ. ಅವರಿಗೆಲ್ಲಾ ಧನ್ಯವಾದಗಳನ್ನು ಸಲ್ಲಿಸುವುದಾಗಿ ಹೇಳಿದ ಅವರು, ನಿನ್ನೆಯವರೆಗೆ ಜಿಬಿಎ ಹೊರತುಪಡಿಸಿ ಶೇ.91.46ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದರು.
ಶಿಕ್ಷಕರೊಬ್ಬರು ಸಾವನ್ನಪ್ಪಿದ್ದಾರೆ. ಸಾಕಷ್ಟು ಶಿಕ್ಷಕರಿಗೆ ಸಾರ್ವಜನಿಕರು ತೊಂದರೆ ಕೊಟ್ಟಿದ್ದಾರೆ. ಆದರೂ ಕೂಡ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾರೆ. ಮಕ್ಕಳಿಗೆ ವಿಶೇಷ ತರಗತಿಗಳ ಮೂಲಕ ಪಾಠ ಮಾಡುತ್ತಾರೆ. ಹೀಗಾಗಿ ಮಕ್ಕಳಿಗೆ ಪಾಠದ ವಿಚಾರದಲ್ಲಿ ತೊಂದರೆ ಆಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಬೆಂಗಳೂರಿನಲ್ಲೂ ನಿಗದಿತ ಸಮಯದಲ್ಲಿ ಸಮೀಕ್ಷೆ ಪೂರ್ಣಗೊಳಿಸುವ ವಿಶ್ವಾಸವಿದೆ. ಸಣ್ಣಪುಟ್ಟ ತಾಂತ್ರಿಕ ಸಮಸ್ಯೆ, ಒತ್ತಡದ ಮಧ್ಯೆಯೂ ಶಿಕ್ಷಕರು ತುಂಬ ಪ್ರಾಮಾಣಿಕವಾಗಿ ಸಮೀಕ್ಷೆ ನಡೆಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಲಾ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ರಶಿ ಮಹೇಶ್, ಆಯುಕ್ತ ಸೂರಳ್ಕರ್ ವಿಕಾಸ್ ಕಿಶೋರ್, ಸಮಗ್ರ ಶಿಕ್ಷಣ ಕರ್ನಾಟಕ ಯೋಜನಾ ನಿರ್ದೇಶಕರಾದ ವಿದ್ಯಾಕುಮಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.