ಬೆಂಗಳೂರು,ಜು.8-ಬಿಡುಗಡೆಯಾಗದ ಬಾಕಿ ಹಣಕ್ಕೆ ಒತ್ತಾಯಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪಡಿತರ ಸಾಗಣೆ ಲಾರಿ ಮಾಲಿಕರು ಇಂದಿನಿಂದ ಮುಷ್ಕರ ಕೈಗೊಂಡಿದ್ದು, ಅನ್ನಭಾಗ್ಯ ಪಡಿತರ ಸಾಗಾಣಿಕೆಗೆ ತೊಂದರೆ ಉಂಟಾಗಿದೆ.
ಸುಮಾರು 4 ಸಾವಿರಕ್ಕೂ ಹೆಚ್ಚು ಲಾರಿಗಳು ಸಾಗಾಣಿಕೆಯನ್ನು ಸ್ಥಗಿತಗೊಳಿಸಿ ರಾಜ್ಯಾದ್ಯಂತ ಮುಷ್ಕರ ಕೈಗೊಂಡಿದ್ದು, ಪಡಿತರ ವಿತರಣೆಯಲ್ಲಿ ವ್ಯತ್ಯಾಸವಾಗುವ ಸಾಧ್ಯತೆಯಿದೆ.ಬಾಕಿ ಬಿಲ್‌ಗಳ ಹಣ ಬಿಡುಗಡೆಯಾಗದೆ ಒಂದೆಡೆ ಗುತ್ತಿಗೆದಾರರು ಸರ್ಕಾರದ ವಿರುದ್ಧ ಸಿಡಿದೆದ್ದಿರುವ ಬೆನ್ನಲ್ಲೇ ಸುಮಾರು 260 ಕೋಟಿ ರೂ.ಗಳಷ್ಟು ಬಾಕಿ ರೂ. ಹಣ ಬಿಡುಗಡೆಗೆ ಆಗ್ರಹಿಸಿ ಪಡಿತರ ಸಾಗಣೆ ಲಾರಿ ಮಾಲೀಕರು ಮುಷ್ಕರಕ್ಕಿಳಿದಿರುವುದು ಸರ್ಕಾರವನ್ನು ಮತ್ತೆ ಮುಜುಗರಕ್ಕೆ ಉಂಟುಮಾಡಿದೆ.
ಕಳೆದ ಫೆಬ್ರವರಿಯಿಂದ ಜೂನ್‌ವರೆಗೆ ಪಡಿತರ ಸಾಗಿಸಿದ್ದಕ್ಕೆ ಪಾವತಿಸಬೇಕಾಗಿದ್ದ ಸುಮಾರು 260 ಕೋಟಿ ರೂ.ಗಳನ್ನು ಆಹಾರ ಇಲಾಖೆ ಈವರೆಗೆ ಬಿಡುಗಡೆ ಮಾಡಿಲ್ಲ. ಸರ್ಕಾರಕ್ಕೆ ಹಲವಾರು ಬಾರಿ ಮನವಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಪ್ರತಿಭಟನೆಗಿಳಿದಿದ್ದೇವೆ. ನಮ್ಮ ಬಾಕಿ ಹಣ ಬಿಡುಗಡೆ ಮಾಡಿದರಷ್ಟೇ ನಾವು ಪ್ರತಿಭಟನೆಯನ್ನು ಹಿಂಪಡೆದು ಪಡಿತರ ಸಾಗಾಣಿಕೆ ಮುಂದುವರೆಸುತ್ತೇವೆ. ಇಲ್ಲದಿದ್ದರೆ ಪ್ರತಿಭಟನೆ ಅನಿರ್ದಿಷ್ಟ ಕಾಲ ಮುಂದುವರೆಯಲಿದೆ ಎಂದು ಅವರು ಹೇಳಿದರು.
ರಾಜ್ಯದ ಅನ್ನಭಾಗ್ಯ ಹಾಗೂ ಕೇಂದ್ರದ ಪ್ರಧಾನಮಂತ್ರಿ ಗರೀಬ್ ಕಲ್ಯಾಣ್ ಯೋಜನೆಯಡಿ ಗೋದಾಮುಗಳಿಂದ ಸಗಟು ಮಳಿಗೆಗಳಿಗೆ ಮತ್ತು ಸಗಟು ಮಳಿಗೆಗಳಿಂದ ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ತಿಂಗಳು 4.5 ಲಕ್ಷ ಮೆಟ್ರಿಕ್ ಟನ್ ಆಹಾರ ಪದಾರ್ಥ ಸಾಗಾಣಿಕೆಯಾಗುತ್ತದೆ.
ಕಳೆದ 5 ತಿಂಗಳಿನಿಂದ 20 ಲಕ್ಷ ಮೆಟ್ರಿಕ್ ಟನ್ ಆಹಾರವನ್ನು ಸಾಗಿಸಲಾಗಿದ್ದು, ಇದರ ಬಾಕಿ ಸುಮಾರು 260 ಕೋಟಿ ರೂ. ಬರಬೇಕಾಗಿದ್ದು, ಲಾರಿಗಳಿಗೆ ಡೀಸೆಲ್, ಸಿಬ್ಬಂದಿಗೆ ವೇತನ ಪಾವತಿಸಲು ಸಾಧ್ಯವಾಗುತ್ತಿಲ್ಲ.
ಸರ್ಕಾರದ ಮುಂದೆ ಅಹವಾಲು ಸಲ್ಲಿಸಿದರೂ ಅವರು ಕೇಳುತ್ತಿಲ್ಲ. ಹೀಗಾಗಿ ಸುಮಾರು 4 ಸಾವಿರ ಲಾರಿಗಳು ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗಿಳಿದಿವೆ ಎಂದು ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಓನರ್ಸ್ ಅಂಡ್ ಏಜೆಂಟ್ ಅಸೋಸಿಯೇಷನ್ ಅಧ್ಯಕ್ಷ ಜಿ.ಆರ್ ಷಣ್ಮುಗಪ್ಪ ತಿಳಿಸಿದ್ದಾರೆ.
ಸಾಲಸೋಲ ಮಾಡಿ ಲಾರಿಗಳನ್ನು ಖರೀದಿಸಿರುತ್ತೇವೆ. ಸಾಲದ ಕಂತು ಕಟ್ಟಬೇಕಾಗಿರುತ್ತದೆ. ಅಲ್ಲದೆ ಕೆಲಸಗಾರರಿಗೆ ವೇತನ ಪಾವತಿಸಬೇಕಾಗಿರುತ್ತದೆ. ಇಷ್ಟು ಪ್ರಮಾಣದಲ್ಲಿ ಸರ್ಕಾರ ಬಾಕಿ ಉಳಿಸಿಕೊಂಡರೆ ನಾವು ನಿರ್ವಹಿಸುವುದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ.
- ಎಲ್ಪಿಜಿ ಟ್ಯಾಂಕ್ ಸ್ಫೋಟಗೊಂಡು 7 ಮಂದಿ ಸಜೀವ ದಹನ
- ಬೈಕ್ಗೆ ಕಾರು ಡಿಕ್ಕಿಯಾಗಿ ಸೇತುವೆಯಿಂದ ಬಿದ್ದು ಮಹಿಳೆ ಸಾವು
- ವಾಯು ರಕ್ಷಣಾ ಶಸ್ತ್ರಾಸ್ತ್ರ ಹಾರಾಟ ಪರೀಕ್ಷೆ ಯಶಸ್ವಿ
- ಮನೆಯಲ್ಲೇ ಎಸ್ಐಟಿಯಿಂದ ಸುಜಾತ ಭಟ್ ವಿಚಾರಣೆ
- ಮಕ್ಕಳಿಗೆ ವಿಷವುಣಿಸಿ ಆತ್ಮಹತ್ಯೆಗೆ ಶರಣಾದ ತಾಯಿ