ಬೆಂಗಳೂರು, ಮಾ.1- ಅವೈಜ್ಞಾನಿಕ ಗ್ಯಾರಂಟಿಗಳಿಂದ ಹಿಮಾಚಲ ಪ್ರದೇಶವನ್ನು ದಿವಾಳಿಯಂಚಿಗೆ ತಳ್ಳಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತಿರುವಾಗ ಅದೇ ಹಾದಿಯಲ್ಲಿ ಸಾಗುತ್ತಿರುವ ಸಿಎಂ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಕರ್ನಾಟಕವನ್ನು ಅಧೋಗತಿಗೆ ತಳ್ಳುತ್ತಿದ್ದು, ಕರ್ನಾಟಕವೂ ಶೀಘ್ರದಲ್ಲೇ ದಿವಾಳಿ ಆಗಲಿದೆ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್ .ಆಶೋಕ್ ಎಚ್ಚರಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ರಾಜ್ಯದಲ್ಲೂ ಆರ್ಥಿಕ ಸ್ಥಿತಿ ಬಿಗಾಡಾಯಿಸಿದ್ದು, ಸರ್ಕಾರ ಐಸಿಯುನಲ್ಲಿದೆ! ಎಂದು ವಾಗ್ದಾಳಿ ನಡೆಸಿದ್ದಾರೆ. ಸ್ವಾರ್ಥಕ್ಕಾಗಿ ಅಂಗೈನಲ್ಲಿ ಆಕಾಶ ತೋರಿಸಿ, ಜನರ ಕಣ್ಣಿಗೆ ಮಂಕುಬೂದಿ ಎರಚಿ ಅಧಿಕಾರ ಹಿಡಿದ ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರ ದಿವಾಳಿಯತ್ತ ಸಾಗಿದೆ.
ಶಾಸಕರು, ಸಚಿವರಿಗೆ ಸಂಬಳ ಕೊಡುವುದಕ್ಕೂ ಸರ್ಕಾರದ ಬಳಿ ದುಡ್ಡಿಲ್ಲದೆ ದೇವರ ಹುಂಡಿಗೆ ಕೈ ಹಾಕುವ ಪಾಪದ ಕೆಲಸ ಮಾಡುತ್ತಿದೆ ಎಂದು ಅಶೋಕ್ ಸರ್ಕಾರದ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.