ಕಲಬುರಗಿ, ಜೂ.24- ಇಲ್ಲಿನ ವಿಮಾನನಿಲ್ದಾಣ ಸ್ಫೋಟಿಸುವುದಾಗಿ ಅನಾಮಧೇಯ ವ್ಯಕ್ತಿ ಇ-ಮೇಲ್ ಮಾಡಿದ್ದು ಕೆಲಕಾಲ ಆತಂಕ ಸೃಷ್ಟಿಯಾಗಿತ್ತು.ವಿಮಾನ ನಿಲ್ದಾಣದ ಕಟ್ಟಡದಲ್ಲಿ ಬಾಂಬ್ ಇಡಲಾಗಿದೆ ಎಂದು ವಿಮಾನ ನಿಲ್ದಾಣ ನಿರ್ದೇಶಕ ಚಿಲಕಾ ಮಹೇಶ್ ಅವರಿಗೆ ಇ ಮೇಲ್ ಬಂದಿದೆ.
ಸುದ್ದಿ ತಿಳಿಯುತ್ತಿದ್ದಂತೆ ರಾಜ್ಯ ಕೈಗಾರಿಕಾ ಭದ್ರತಾ ಪಡೆ ಸಿಬ್ಬಂದಿ, ಬಾಂಬ್ ನಿಷ್ಕ್ರಿಯ ದಳ, ಶ್ವಾನದಳದೊಂದಿಗೆ ಸ್ಥಳಕ್ಕೆ ದೌಡಾಯಿಸಿ ವಿಮಾನನಿಲ್ದಾಣವನ್ನು ಪರಿಶೀಲಿಸಿದರಾದರೂ ಯಾವುದೇ ಬಾಂಬ್ ಪತ್ತೆಯಾಗಿಲ್ಲ.
ಇದು ಹುಸಿ ಸಂದೇಶವೆಂದು ಅರಿತು ನಿಟ್ಟುಸಿರು ಬಿಡುವಂತಾಯಿತು. ಇದರಿಂದಾಗಿ ಕೆಲಕಾಲ ವಿಮಾನ ಪ್ರಯಾಣಿಕರಲ್ಲೂ ಸಹ ಗೊಂದಲ ಉಂಟಾಯಿತು. ಅಲ್ಲದೆ, ವಿಮಾನ ಪ್ರಯಾಣಿಕರ ಬ್ಯಾಗ್‌ಗಳನ್ನೂ ಸಹ ಸಿಬ್ಬಂದಿ ತಪಾಸಣೆ ನಡೆಸಿದರು.
ಈ ಹಿಂದೆಯೂ ಈ ರೀತಿಯ ಹುಸಿ ಸಂದೇಶಗಳು ಬೆಂಗಳೂರಿನ ವಿಮಾನನಿಲ್ದಾಣ, ಆಸ್ಪತ್ರೆಗಳು, ಶಾಲಾ-ಕಾಲೇಜುಗಳಿಗೆ ಬಂದಿದ್ದವು. ಕಳೆದ ತಿಂಗಳು ಬೆಂಗಳೂರಿನ ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹುಸಿ ಬಾಂಬ್ ಬೆದರಿಕೆ ಇ-ಮೇಲ್ ಸಂದೇಶ ಬಂದಿತ್ತು.