Sunday, September 8, 2024
Homeರಾಜ್ಯಯುಜಿಸಿ ಹೊಸ ನಿಯಮ ಪಾಲನೆ ಅಸಾಧ್ಯ : ಕೇಂದ್ರಕ್ಕೆ ಸೆಡ್ಡು ಹೊಡೆದ ರಾಜ್ಯಸರ್ಕಾರ

ಯುಜಿಸಿ ಹೊಸ ನಿಯಮ ಪಾಲನೆ ಅಸಾಧ್ಯ : ಕೇಂದ್ರಕ್ಕೆ ಸೆಡ್ಡು ಹೊಡೆದ ರಾಜ್ಯಸರ್ಕಾರ

ಬೆಂಗಳೂರು,ಜು.11– ರಾಷ್ಟ್ರೀಯ ಶಿಕ್ಷಣ ನೀತಿಗೆ ಸಡ್ಡು ಹೊಡೆದು ರಾಜ್ಯ ಶಿಕ್ಷಣ ನೀತಿ ಜಾರಿಗೆ ಮುಂದಾಗಿರುವ ರಾಜ್ಯ ಸರ್ಕಾರ, ಇದೀಗ ದ್ವೈವಾರ್ಷಿಕ ಪ್ರವೇಶಾತಿ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ನೀಡಿದ್ದ ಸೂಚನೆ ಪಾಲಿಸುವುದಿಲ್ಲ ಎಂದು ಹೇಳುವುದರೊಂದಿಗೆ ಕೇಂದ್ರದೊಂದಿಗೆ ಮತ್ತೊಂದು ಸಂಘರ್ಷಕ್ಕಿಳಿದಿದೆ.

ಈ ಹಿಂದಿನ ಬಿಜೆಪಿ ಸರ್ಕಾರ, ರಾಜ್ಯದಲ್ಲಿ ಜಾರಿಗೆ ತಂದಿದ್ದ ಪದವಿ ಶಿಕ್ಷಣದವರೆಗಿನ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಕೈಬಿಟ್ಟು ರಾಜ್ಯ ಶಿಕ್ಷಣ ನೀತಿ ರಚಿಸುತ್ತಿರುವ ಕಾಂಗ್ರೆಸ್‌‍ ಸರ್ಕಾರ, ಇದೀಗ ಉನ್ನತ ಶಿಕ್ಷಣದಲ್ಲಿಯೂ ಯುಜಿಸಿ ನಿರ್ದೇಶನದ ವಿರುದ್ಧ ನಿಲುವು ತಳೆದಿದೆ.

ಪ್ರತಿ ಶೈಕ್ಷಣಿಕ ವರ್ಷಾರಂಭದ ನಂತರ ಜುಲೈ-ಆಗಸ್ಟ್‌ ಮತ್ತು ಜನವರಿ ಫೆಬ್ರವರಿ ದ್ವೈವಾರ್ಷಿಕ ಪ್ರವೇಶಾತಿ ಮಾದರಿಯನ್ನು ಅಳವಡಿಸಿಕೊಳ್ಳುವಂತೆ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಯುಜಿಸಿ ಸೂಚಿಸಿತ್ತು. ಹೊಸ ಮಾದರಿಯ ಪ್ರವೇಶಾತಿಗಳು 2024-25ನೇ ಶೈಕ್ಷಣಿಕ ವರ್ಷದಿಂದ ಅನುಷ್ಠಾನಕ್ಕೆ ಬರಲಿದೆ ಎಂದಿತ್ತು. ಆದರೆ, ಇದು ಸಾಧ್ಯವಿಲ್ಲ ಎಂದು ರಾಜ್ಯ ಸರ್ಕಾರ, ಯುಜಿಸಿಗೆ ಪತ್ರ ಬರೆಯಲು ನಿರ್ಧರಿಸಿದೆ.

ದ್ವೈವಾರ್ಷಿಕ ಪ್ರವೇಶಾತಿ ಏಕೆ? ಯುಜಿಸಿ ಹೇಳುವುದೇನು?:
ಉನ್ನತ ಶಿಕ್ಷಣ ಅಧ್ಯಯನಕ್ಕೆ ಪ್ರವೇಶ ಪಡೆಯಲು ಅರ್ಹತೆ ಹೊಂದಿಯೂ ಯಾವುದಾದರೂ ಕಾರಣದಿಂದ ಜುಲೈ-ಆಗಸ್ಟ್‌ನಲ್ಲಿ ಉನ್ನತ ಶಿಕ್ಷಣ ಪ್ರವೇಶಾವಕಾಶ ತಪ್ಪುವ ಸಾಧ್ಯತೆ ಇರುವ ವಿದ್ಯಾರ್ಥಿಗಳಿಗೆ ಹೊಸ ಪದ್ಧತಿಯಂತೆ ವರ್ಷಕ್ಕೆರಡು ಬಾರಿ ಪ್ರವೇಶಾತಿ ಸೌಲಭ್ಯ ದೊರೆಯುವ ತನ್ನ ನಿಲುವನ್ನು ಯುಜಿಸಿ ಸಮರ್ಥಿಸಿಕೊಂಡಿದೆ. ಜಗತ್ತಿನಾದ್ಯಂತ ಹಲವು ವಿವಿಗಳು ಈಗಾಗಲೇ ವರ್ಷಕ್ಕೆ ಎರಡು ಬಾರಿ ಪ್ರವೇಶಾತಿ ನಿಯಮ ಅನುಸರಿಸುತ್ತಿವೆ.

ಅದನ್ನು ಅಳವಡಿಸಿಕೊಂಡರೆ ಭಾರತೀಯ ಉನ್ನತ ಶಿಕ್ಷಣ ಸಂಸ್ಥೆಗಳು ಜಾಗತಿಕ ಸಹಯೋಗ ಮತ್ತು ವಿದ್ಯಾರ್ಥಿ ವಿನಿಮಯ ಹೆಚ್ಚಿಸಲು ನೆರವಾಗುತ್ತದೆ ಎಂದು ಯುಜಿಸಿ ಅಭಿಪ್ರಾಯಪಟ್ಟಿದೆ.

ಉನ್ನತ ಶಿಕ್ಷಣ ಸಚಿವರ ಪ್ರತಿಕ್ರಿಯೆ: ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ದಾಖಲಾತಿ ಪ್ರಮಾಣವನ್ನು 2035ಕ್ಕೆ ಈಗಿರುವ ಪ್ರಮಾಣಕ್ಕಿಂತ ಶೇ.50ರಷ್ಟು ಹೆಚ್ಚಿಸುವ ಗುರಿ ಸಾಧಿಸಲು ಎಲ್ಲ ಕಾಲೇಜುಗಳಲ್ಲಿಯೂ ವರ್ಷಕ್ಕೆ ಎರಡು ಬಾರಿ ಪ್ರವೇಶ ನೀಡಬೇಕೆನ್ನುವ ಸೂಚನೆ ಪಾಲಿಸಲು ಸಾಧ್ಯವಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದ್ದಾರೆ.

ಸರ್ಕಾರಿ, ಖಾಸಗಿ ಕಾಲೇಜುಗಳು ಅಧ್ಯಾಪಕರು ಸೇರಿದಂತೆ ಮೂಲ ಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಈಗಿರುವ ಪದ್ಧತಿ ಪ್ರಕಾರವೇ ಉನ್ನತ ಶಿಕ್ಷಣ ನೀಡುವುದು ಕಠಿಣ. ಹಾಗಾಗಿ, ಯಜಿಸಿಯ ಹೊಸ ನಿಯಮ ಪಾಲನೆ ಅಸಾಧ್ಯ ಎಂದು ಪತ್ರ ಬರೆಯಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

RELATED ARTICLES

Latest News