ಚೆನ್ನೈ,ಅ.26- ಭಾರೀ ವಿವಾದ ಸೃಷ್ಟಿಸಿರುವ ತಮಿಳುನಾಡಿನ ಕರೂರಿನಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣ ಸಂಬಂಧ ಮೃತರ ಕುಟುಂಬಸ್ಥರನ್ನು ನಟ, ಟಿಎಂಕೆ ಮುಖ್ಯಸ್ಥ ವಿಜಯ್ ನಾಳೆ ಭೇಟಿಯಾಗಲಿದ್ದಾರೆ.ಈ ಘಟನೆ ನಡೆದು ಒಂದು ತಿಂಗಳ ಬಳಿಕ ನಟ ಹಾಗೂ ರಾಜಕಾರಣಿ ವಿಜಯ್ ಸೋಮವಾರರಂದು ಸಂತ್ರಸ್ತರ ಕುಟುಂಬಗಳನ್ನು ಭೇಟಿಯಾಗಲು ನಿರ್ಧರಿಸಿದ್ದಾರೆ.
ನಾಳೆ ಚೆನ್ನೈ ಸಮೀಪದ ಮಹಾಬಲಿಂಪುರದಲ್ಲಿ ಖಾಸಗಿ ರೆಸಾರ್ಟ್‌ನಲ್ಲಿ ಮೃತರ ಕುಟುಂಬಸ್ಥರನ್ನು ನಟ ಭೇಟಿ ಮಾಡಲಿದ್ದಾರೆ. ಈ ಹಿನ್ನೆಲೆ ಖಾಸಗಿ ರೆಸಾರ್ಟ್‌ನಲ್ಲಿ 50 ರೂಮ್‌ಗಳನ್ನು ಕಾಯ್ದಿರಿಸಲಾಗಿದೆ.ಸ್ಥಳಕ್ಕೆ ಬರಲು ಮೃತರ ಕುಟುಂಬಸ್ಥರಿಗೆ ಬಸ್ ವ್ಯವಸ್ಥೆ ಮಾಡಲಾಗಿದೆ.ಕಳೆದ ಕೆಲವು ವಾರದ ಹಿಂದೆ ವಿಡಿಯೋ ಕಾಲ್ ಮಾಡಿಯೂ ವಿಜಯ್ ಮಾತನಾಡಿದ್ದರು. ಆ ವೇಳೆ ನೇರ ಭೇಟಿಯಾಗುವ ಬಗ್ಗೆ ಪ್ರಸ್ತಾಪಿಸಿದ್ದರು.
ಯಾರಿಗೂ ಪ್ರವೇಶವಿಲ್ಲ..!
ವಿಜಯ್ ದುರಂತದಲ್ಲಿ ಮೃತಪಟ್ಟವರ ಜೊತೆ ಮಾತನಾಡುವ ವೇಳೆ ಮಾಧ್ಯಮ ಪ್ರತಿನಿಧಿಗಳಿಗೆ ಆಗಲಿ ಅಥವಾ ವಿಜಯ್ ಪಕ್ಷದ ಸದಸ್ಯರಿಗೆ ಆಗಲಿ ಅನುಮತಿ ನೀಡಲಾಗಿಲ್ಲ. ಸಂತ್ರಸ್ತರ ಕುಟುಂಬಗಳಿಗೆ ಖಾಸಗಿಯಾಗಿ ಸಾಂತ್ವನ ಹೇಳುವ ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಖಾಸಗಿ ಮಾಧ್ಯಮಗಳ ವರದಿಗಳ ಪ್ರಕಾರ, ವಿಜಯ್ ಅವರು ಪ್ರತಿ ಕುಟುಂಬದೊಂದಿಗೆ ಸುಮಾರು 20 ನಿಮಿಷಗಳ ಕಾಲ ಮಾತನಾಡಿದ್ದಾರೆ. ಈ ಸಮಯದಲ್ಲಿ, ಅವರು ಕುಟುಂಬಗಳ ನೋವಿನಲ್ಲಿ ಭಾಗಿಯಾಗಿ, ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರಿಗೆ ಎಲ್ಲಾ ರೀತಿಯ ಸಹಾಯವನ್ನು ನೀಡುವುದಾಗಿ ಭರವಸೆ ನೀಡಿದ್ದಾರೆ. ಘಟನೆ ನಡೆದ ಮರುದಿನವೇ ವಿಜಯ್ ಅವರು ಮೃತರ ಪ್ರತಿ ಕುಟುಂಬಕ್ಕೆ 20 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಿದ್ದರು.
ಮುಂದಿನ ವರ್ಷ ತಮಿಳುನಾಡಿನ ವಿಧಾನಸಭಾ ಚುನಾವಣೆಗೂ ಮುನ್ನ ತಮಿಳುನಾಡಿನ ರಾಜಕೀಯ ವಲಯದಲ್ಲಿ ಕರೂರು ಕಾಲ್ತುಳಿತ ದುರಂತವು ದೊಡ್ಡ ಸಂಚಲನವನ್ನು ಸೃಷ್ಟಿಸಿತ್ತು. ಈ ಘಟನೆಯು ವಿಜಯ್ ಅವರ ರಾಜಕೀಯ ಜೀವನದ ಮೇಲೆ ಪರಿಣಾಮ ಬೀರುವ ಸಾಧ್ಯತೆಗಳ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ. ಸೆ.27ರಂದು ಕರೂರ್‌ನಲ್ಲಿ ನಟ ವಿಜಯ್ ಚುನಾವಣಾ ರ್ಯಾಲಿ ನಡೆಸಿದ್ದರು. ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪಾಲ್ಗೊಂಡಿದ್ದರು. ಈ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 41 ಮಂದಿ ಪ್ರಾಣ ಕಳೆದುಕೊಂಡಿದ್ದರು.
