ಬೆಂಗಳೂರು,ಏ.25– ಪಹಲ್ಗಾಮ್ ದಾಳಿಯ ಬಳಿಕ ಜಮು-ಕಾಶೀರ ಪ್ರವಾಸಕ್ಕಾಗಿ ಬುಕ್ ಮಾಡಲಾಗಿದ್ದ ಲಕ್ಷಾಂತರ ಟಿಕೆಟ್‌ಗಳು ರದ್ದುಗೊಳ್ಳುತ್ತಿದ್ದು, ಸಾವಿರಾರು ಕೋಟಿ ರೂ.ಗಳ ಆದಾಯ ಕಣಿವೆ ರಾಜ್ಯಕ್ಕೆ ಖೋತಾವಾಗುತ್ತಿದೆ. ಜೊತೆಗೆ ಬಂಡವಾಳ ಹೂಡಿಕೆಯ ಪ್ರಸ್ತಾವನೆ ನೆನೆಗುದಿಗೆ ಬೀಳುವ ಆತಂಕ ಎದುರಾಗಿದೆ.
ಸೇವಾವಲಯ ಮತ್ತು ಪ್ರವಾಸೋದ್ಯಮವೇ ಜಮು-ಕಾಶೀರ ಆದಾಯದ ಪ್ರಮುಖ ಭಾಗವಾಗಿತ್ತು. ಪ್ರವಾಸಿಗರಿಂದ ವಾರ್ಷಿಕ 12 ಸಾವಿರ ಕೋಟಿ ರೂ. ಗೂ ಹೆಚ್ಚಿನ ಆದಾಯ ಸೃಷ್ಟಿಯಾಗುತ್ತಿದ್ದು, ತೋಟಗಾರಿಕಾ ವಲಯ ಸರಿಸುಮಾರು 10 ಸಾವಿರ ಕೋಟಿ ರೂ.ಗಳ ವಹಿವಾಟು ನಡೆಸುತ್ತಿದೆ. ಸೇವಾವಲಯ ಜಿಎಸ್‌ಡಿಪಿಯಲ್ಲಿ ಶೇ.41ರಷ್ಟು ಪಾಲು ಹೊಂದಿದೆ.
ಪ್ರವಾಸೋದ್ಯಮವೊಂದರಿಂದಲೇ 2.50 ಲಕ್ಷ ಉದ್ಯೋಗಗಳು ಸೃಷ್ಟಿಯಾಗಿದ್ದವು. ಈಗ ಭಯೋತ್ಪಾದಕರ ದಾಳಿಯಿಂದಾಗಿ ಏಕಾಏಕಿ ಎಲ್ಲವೂ ನೆಲಕಚ್ಚಿದೆ. ಅಷ್ಟೂ ಮಂದಿ ನಿರುದ್ಯೋಗಿಗಳಾಗಿದ್ದು, ಒಪ್ಪತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ.
ಕೋವಿಡ್‌ನಂತಹ ಕಠಿಣ ಸವಾಲಿನ ಬಳಿಕ ಜಮು-ಕಾಶೀರದ ಪ್ರವಾಸೋದ್ಯಮ ಪುಟಿದೆದ್ದಿತ್ತು. ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಗಣನೀಯವಾಗಿ ಏರಿಕೆ ಕಂಡಿದ್ದು ಆದಾಯವು ಸಮೃದ್ಧಿಯಾಗಿತ್ತು.
2020 ರಲ್ಲಿ 34 ಲಕ್ಷ ಪ್ರವಾಸಿಗರು ಮಾತ್ರ ಜಮು-ಕಾಶೀರಕ್ಕೆ ಭೇಟಿ ನೀಡಿದ್ದರು. 2021 ರಲ್ಲಿ ಅದು 1.13 ಕೋಟಿಗೆ ಹೆಚ್ಚಾಗಿತ್ತು. 2022 ರಲ್ಲಿ 1.88 ಕೋಟಿ, 2023 ರಲ್ಲಿ 2.11 ಕೋಟಿ, 2024 ರಲ್ಲಿ 2.36 ಕೋಟಿ ಜನ ಭೇಟಿ ನೀಡಿದ್ದರು. ಕಳೆದ ವರ್ಷದಲ್ಲಿ 65 ಸಾವಿರ ವಿದೇಶಿಗರು ಆಗಮಿಸಿದ್ದರು. ಗುಲಾರ್ಗ್, ಸೋನಾಮಾರ್ಗ್, ಪಹಲ್ಗಾಮ್, ದಾಲ್‌ಲೇಖ್ ಪ್ರದೇಶಗಳು ತುಂಬಿತುಳುಕುತ್ತಿದ್ದವು. ಗುಲಾರ್ಗ್ ಒಂದರಲ್ಲೇ ಕಳೆದ ವರ್ಷ 103 ಕೋಟಿ ರೂ. ಆದಾಯ ಸೃಷ್ಟಿಯಾಗಿತ್ತು.
ಈ ವರ್ಷ ಒಟ್ಟು ಪ್ರವಾಸಿಗರ ಸಂಖ್ಯೆ 3 ಕೋಟಿ ದಾಟುವ ನಿರೀಕ್ಷೆಯಿತ್ತು. ಮುಂದಿನ 5 ವರ್ಷದ ವೇಳೆಗೆ ಜಮು-ಕಾಶೀರದ ಪ್ರವಾಸೋದ್ಯಮದ ಆದಾಯ 12 ಸಾವಿರ ಕೋಟಿಗಳಿಂದ ದುಪ್ಪಟ್ಟಾಗಿ ಸುಮಾರು 25 ರಿಂದ 30 ಸಾವಿರ ಕೋಟಿಗಳಾಗುವ ಲೆಕ್ಕಾಚಾರವಿತ್ತು. ಜಮು-ಕಾಶೀರದಲ್ಲಿನ ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಸ್ಥಾಪನೆ ಪ್ರವಾಸಿಗರ ವಿಶ್ವಾಸವನ್ನು ಹೆಚ್ಚಿಸಿತ್ತು.
370ನೇ ವಿಧಿಯನ್ನು ರದ್ದುಗೊಳಿಸಿದ್ದು, 2023 ರ ಮೇನಲ್ಲಿ ಭಾರತದಲ್ಲಿ ನಡೆದ ಸಾರ್ಕ್ ಶೃಂಗಸಭೆಯ ಪ್ರವಾಸೋದ್ಯಮ ಸಭೆಯನ್ನು ಕಾಶೀರದಲ್ಲಿ ಆಯೋಜಿಸಿ ಯಶಸ್ವಿಗೊಳಿಸಿತ್ತು ಜೊತೆಗೆ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ರಮಣೀಯ ಪ್ರವಾಸಿತಾಣಗಳ ಬಗ್ಗೆ ಪ್ರಚಾರ ಮಾಡಿದ್ದು ಸೇರಿದಂತೆ ಹಲವಾರು ಉಪಕ್ರಮಗಳು ಜಮು-ಕಾಶೀರದ ಆರ್ಥಿಕತೆಯನ್ನು ಉತ್ತೇಜಿಸುವಂತೆ ಮಾಡಿತು.
ಪ್ರವಾಸೋದ್ಯಮದಲ್ಲಿ ಹೋಟೆಲ್‌ಗಳು, ಹೌಸ್‌ಬೋಟ್‌ಗಳು, ಕ್ಯಾಬ್, ಪೋನಿವಾಲಾಸ್, ಗೈಡ್‌ಗಳು, ಪ್ರವಾಸೋದ್ಯಮ ನಿರ್ವಾಹಕರು, ಕರಕುಶಲ ವಸ್ತುಗಳು, ಶಾಲು, ಕಾರ್ಪೆಟ್, ಮರಕೆತ್ತನೆ ಕೆಲಸಗಾರರು, ವ್ಯಾಪಾರಿಗಳು ಸೇರಿದಂತೆ ಅನೇಕರು ಜೀವನ ಕಟ್ಟಿಕೊಂಡಿದ್ದರು. ಇವರೆಲ್ಲರ ಆದಾಯ ಮೂಲವೇ ಪ್ರವಾಸೋದ್ಯಮವಾಗಿತ್ತು.
ಕೇಂದ್ರ ಸರ್ಕಾರದ ಬಿಗಿಹಿಡಿತ ಹಾಗೂ ಸಕಾರಾತಕ ಕ್ರಮಗಳಿಂದಾಗಿ 1.63 ಲಕ್ಷ ಕೋಟಿ ರೂ. ಹೂಡಿಕೆ ಪ್ರಸ್ತಾವನೆಗಳು ಬಂದಿದ್ದವು. ಇದರಿಂದ ಸುಮಾರು 6 ಲಕ್ಷ ಮಂದಿಗೆ ಉದ್ಯೋಗ ಸೃಷ್ಟಿಯಾಗುವ ಲೆಕ್ಕಾಚಾರಗಳಿದ್ದವು. ಬಹುತೇಕ ಪ್ರಸ್ತಾವನೆಗಳು ಆರಂಭಿಕ ಹಂತದಲ್ಲಿದ್ದವು. ಇನ್ನೇನು ಕಣಿವೆ ರಾಜ್ಯದ ದಿಕ್ಕು ಬದಲಾಗುತ್ತಿದೆ ಎನ್ನುವ ಹಂತದಲ್ಲಿ ಉಗ್ರರ ದುಷ್ಕೃತ್ಯ ಎಲ್ಲಾ ಪ್ರಯತ್ನಗಳನ್ನೂ ನೀರಿನಲ್ಲಿ ಹುಣಿಸೆಹಣ್ಣು ತೊಳೆದಂತೆ ಮಾಡಿದೆ.
ರಾಷ್ಟ್ರೀಯ ಆರ್ಥಿಕ ಬೆಳವಣಿಗೆ ಶೇ.7.7 ರಷ್ಟಿದ್ದರೆ, ಜಮು-ಕಾಶೀರದ ಬೆಳವಣಿಗೆ ಶೇ.7.81ರಷ್ಟಿದ್ದು, ದೇಶಕ್ಕಿಂತಲೂ ಕಣಿವೆ ರಾಜ್ಯದ ಸರಾಸರಿ ಕೆಲ ಹೆಜ್ಜೆಗಳಷ್ಟು ಮುಂದಿತ್ತು. ಏಪ್ರಿಲ್ 22 ರ ಭಯಾನಕ ದಾಳಿ ದೇಶವನ್ನಷ್ಟೇ ಅಲ್ಲ ಅಂತಾರಾಷ್ಟ್ರೀಯ ಮಟ್ಟದಲ್ಲೂ ಆತಂಕ ಸೃಷ್ಟಿಸಿದೆ. ಅದರಲ್ಲೂ ಧರ್ಮಾಧರಿತ ಹತ್ಯೆಗಳು ಶಾಂತಿ ಹಾಗೂ ನೆಮದಿಗಾಗಿ ತೆರಳುತ್ತಿದ್ದ ಪ್ರವಾಸಿಗರನ್ನು ದುಗುಡಕ್ಕೀಡು ಮಾಡಿದೆ.
ಏ.22ರ ದಾಳಿಯ ಬಳಿಕ ಬೆಂಗಳೂರು ಸೇರಿದಂತೆ ರಾಷ್ಟ್ರಾದ್ಯಂತ ಜಮು-ಕಾಶೀರದ ಪ್ರವಾಸದ ಟಿಕೆಟ್‌ಗಳು ರದ್ದುಗೊಳ್ಳುತ್ತಿವೆ. ಪ್ರವಾಸಿಗರ ಸಂಖ್ಯೆ ಸಂಪೂರ್ಣ ಸ್ಥಗಿತಗೊಂಡಿದೆ. ದಾಲ್‌ಲೇಖ್‌ನಲ್ಲಿದ್ದ 1,500 ಹೌಸ್‌ಬೋಟ್‌ಗಳು ತುಕ್ಕು ಹಿಡಿಯಲಾರಂಭಿಸಿದ್ದು, 3 ಸಾವಿರ ಕೊಠಡಿಗಳು ಖಾಲಿ ಹೊಡೆಯುತ್ತಿವೆ.
ಜಮು-ಕಾಶೀರದ ಕಡೆಗೆ ಮುಖ ಮಾಡಿದ್ದವರು ಭಯೋತ್ಪಾದಕರ ದಾಳಿಯಿಂದ ರಾಜಸ್ಥಾನ ಹಾಗೂ ಇತರ ರಾಜ್ಯಗಳ ಪ್ರವಾಸತಾಣಗಳಿಗೆ ಮಾರ್ಗ ಬದಲಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ರಾಜಕೀಯ ಸ್ಥಿತ್ಯಂತರವಾಗಿದ್ದು, ರಾಜ್ಯಸರ್ಕಾರದ ಕೆಲವು ನಿರ್ಧಾರಗಳು ಪ್ರವಾಸಿಗರ ಸುರಕ್ಷತೆಯ ಬಗ್ಗೆ ಗೊಂದಲ ಉಂಟುಮಾಡಿವೆ.
ಗಡಿ ನುಸುಳುವಿಕೆ ನಿಯಂತ್ರಣದಲ್ಲಿದ್ದರೂ ದೇಶೀಯವಾದ ಪ್ರಚೋದನಾತಕ ಚಟುವಟಿಕೆಗಳು ಹೆಚ್ಚುತ್ತಿವೆ ಎಂಬ ಆರೋಪಗಳಿವೆ. ಅದನ್ನು ದೃಢೀಕರಿಸುವಂತೆ ಪಹಲ್ಗಾಮ್‌ನಲ್ಲಿ ಉಗ್ರರು ರಾಜಾರೋಷವಾಗಿ ಬಂದು 26 ಮಂದಿಯ ಜೀವಹತ್ಯೆ ಮಾಡಿ ಅಷ್ಟೇ ರಾಜಾರೋಷವಾಗಿ ವಾಪಸ್ ಹೋಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ತಾವು ಸಾಧನೆ ಮಾಡಿದ್ದೇವೆ ಎಂಬಂತೆ ವಿಡಿಯೋಗಳನ್ನು ಹರಿಯಬಿಡುತ್ತಿದ್ದಾರೆ.ಕೇಂದ್ರಸರ್ಕಾರ ಮತ್ತೆ ಕಣಿವೆ ರಾಜ್ಯದಲ್ಲಿ ಶಾಂತಿ ನೆಲೆಸಿ ಪ್ರವಾಸಿಗರ ವಿಶ್ವಾಸ ಗಿಟ್ಟಿಸಲು ಹಗಲಿರುಳು ಶ್ರಮಿಸುವಂತಾಗಿದೆ.