-ಡಿ. ರಾಮಾನಾಯಕ್
ಚೆನ್ನೈನಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯಕ್ಕೆ ಇತ್ತೀಚೆಗೆ ಭೇಟಿ ನೀಡಿದಾಗ, ಅಲ್ಲಿನ ಪ್ರಾಚೀನ ನಾಣ್ಯಗಳ ವಿಭಾಗದಲ್ಲಿ ಪರಿಚಿತ ಲೋಹಗಳಾದ ತಾಮ್ರ, ಬೆಳ್ಳಿ ಮತ್ತು ಚಿನ್ನದ ನಾಣ್ಯಗಳ ನಡುವೆ ವಿಶಿಷ್ಟವಾದ ಭಾಗವೊಂದು ಗಮನ ಸೆಳೆಯಿತು. ಅದು ಶೆಲ್ ಮನಿ ಎಂಬ ಶೀರ್ಷಿಕೆಯ ಪ್ರದರ್ಶನ. ಸಣ್ಣ ಗ್ರಾಫಿಕ್ ಇರುವ ಫಲಕದಲ್ಲಿ ಕೆಲವು ಮಿನುಗುವ ಚಿಪ್ಪುಗಳು – ನಯವಾದ, ಬಾಗಿದ ಮತ್ತು ದಂತದ ಬಣ್ಣದ ಕವಡೆಗಳು- ಹೊಳೆದು ಕಣ್ಣು ಕೋರೈಸಿದವು.
ಅವುಗಳ ಕೆಳಗೆ ಹಾಕಿದ್ದ ವಿವರಣೆಯ ಪ್ರಕಾರ ಶೆಲ್ ಮನಿ (ಕವಡೆ ರೂಪದ ಹಣ) ಎನ್ನುವುದು ಒಂದು ಕಾಲದಲ್ಲಿ ಪ್ರಪಂಚದ ಅನೇಕ ಭಾಗಗಳಲ್ಲಿ ಹಣದಂತೆಯೇ ಬಳಸಲಾಗುತ್ತಿದ್ದ ವಿನಿಮಯ ಮಾಧ್ಯಮವಾಗಿತ್ತು. ಸೈಪ್ರಿಯಾ ಮೊನೆಟಾ ಅಥವಾ ಮನಿ ಕೌರಿ (ಹಣದ ಕವಡೆ)ಗಳನ್ನು ಆಫ್ರಿಕಾದಿಂದ ಏಷ್ಯಾದವರೆಗೆ, ಮಾಲ್ಡೀವ್‌್ಸನಿಂದ ಮಲಬಾರ್ ಕರಾವಳಿವರೆಗೆ ಮತ್ತು ಮೊಜಾಂಬಿಕ್ ತೀರದಲ್ಲಿಯೂ ಸಹ ವಿನಿಮಯ ಮಾಧ್ಯಮವಾಗಿ ಬಳಸಲಾಗುತ್ತಿದ್ದ ವಿವರಣೆ ವಸ್ತುಸಂಗ್ರಹಾಲಯದಲ್ಲಿ ಎಂಬ ವಿವರಣೆ ಸಹ ಅಲ್ಲಿತ್ತು.
ಕವಡೆಗಳು (ಕೌರಿ) ಕೇವಲ ದೇಹದ ಅಲಂಕಾರಿಕ ಆಭರಣವಾಗಿರದೆ ಪ್ರಪಂಚದ ಅನೇಕ ಭಾಗಗಳಲ್ಲಿ ಒಮೆ ಕರೆನ್ಸಿಯಾಗಿ ಕಾರ್ಯನಿರ್ವಹಿಸು ತ್ತಿದ್ದವು ಎಂದು ಓದಿದೆ. ಕವಡೆಗಳು ಸಮುದ್ರದಲ್ಲಿ ವಾಸಿಸುವ ಸೈಪ್ರಿಡೆ ಕುಟುಂಬಕ್ಕೆ ಸೇರಿದ ಮೃದ್ವಂಗಿ ಕುಲದ ಜೀವಿಗಳು. ಬೆನ್ನು ಮೂಳೆ ಇಲ್ಲದ, ದೇಹ ರಚನೆಯಲ್ಲಿ ಕೆಳದರ್ಜೆಗೆ ಸೇರಿದ ಮೃದ್ವಂಗಿಗಳ ದೇಹ ತುಂಬಾ ಮೃದು, ನಯವಾಗಿದ್ದು ರಕ್ಷಣೆಗಾಗಿ ಗಡುಸಾದ ಚಿಪ್ಪಿನ ಹೊದಿಕೆಯಲ್ಲಿ ಅಡಗಿಕೊಳ್ಳುತ್ತವೆ. ಚಿಪ್ಪಿನ ತೆರೆದ ಭಾಗದಿಂದ ಹೊಟ್ಟೆಯನ್ನು ಹೊರಹಾಕಿ ತೆವಳುವ ಇವುಗಳು ಉದರಪಾದಿಗಳ ವರ್ಗಕ್ಕೆ ಸೇರಿದಂಥವು. ಕವಡೆಗಳಲ್ಲಿ ವಿಶಿಷ್ಟವಾದ ಸೈಪ್ರಿಯಾ ಮೊನೆಟಾ ಪ್ರಭೇದಕ್ಕೆ ಸೇರಿದ ಕವಡೆಗಳಿಗೆ ಹಣದ ಕವಡೆ ಎಂದೇ ಹೆಸರು.
ಆಫ್ರಿಕಾ, ಏಷ್ಯಾ ಮತ್ತು ಪೆಸಿಫಿಕ್ ದ್ವೀಪಗಳ ಅನೇಕ ಭಾಗಗಳಲ್ಲಿ ಶತಮಾನಗಳಿಂದ ಹಣದ ಕವಡೆಯ ಸಣ್ಣ, ಹಳದಿ ಚಿಪ್ಪುಗಳನ್ನು ಕರೆನ್ಸಿಯ ಒಂದು ಮಾಧ್ಯಮವಾಗಿ ಬಳಸಲಾಗುತ್ತಿತ್ತು. ಏಕರೂಪದ ಗಾತ್ರ, ಬಾಳಿಕೆ ಮತ್ತು ಸುಲಭ ಹಾಗೂ ಸುರಕ್ಷಿತ ಸಾಗಣೆಯು ಅನುಕೂಲದಿಂದ ಹಣದ ಕವಡೆಗಳನ್ನು ಆಧುನಿಕ ನಾಣ್ಯಗಳ ವ್ಯಾಪಕ ಬಳಕೆಯ ಮೊದಲು ಮೌಲ್ಯಯುತ ಮತ್ತು ವ್ಯಾಪಕವಾಗಿ ಅಂಗೀಕರಿಸಲ್ಪಟ್ಟ ವಿನಿಮಯ ಮಾಧ್ಯಮವನ್ನಾಗಿ ಸ್ವೀಕರಿಸಲಾಗಿತ್ತು.
ವಸ್ತು ಸಂಗ್ರಹಾಲಯದಲ್ಲಿ ಹಣದ ಕವಡೆ ಬಗೆಗಿನ ವಿವರಣೆ ಓದಿದಾಗ, ಸಮುದ್ರ ಚಿಪ್ಪಿನಂತಹ ಚಿಕ್ಕ ವಸ್ತುವು ವ್ಯಾಪಾರ, ನಂಬಿಕೆ ಮತ್ತು ಮಾನವ ಸಂಪರ್ಕದ ಕಥೆಗಳನ್ನು ಹೊತ್ತುಕೊಂಡು ಹೇಗೆ ವ್ಯಾಪಕವಾಗಿ ಬಹು ದೂರ ಪ್ರಯಾಣಿಸಿದೆ ಎಂದು ತಿಳಿದು ಆಶ್ಚರ್ಯವಾಯಿತು. ಸಾಗರದಲ್ಲಿ ಹುಟ್ಟಿದ ಕವಡೆಯು ಶತಮಾನಗಳ ಕಾಲ ಒಳನಾಡಿನಲ್ಲಿ ಪ್ರಯಾಣಿಸಿ ಹಣ, ಆಭರಣದ ರೂಪತಾಳಿ ಕೈಯಿಂದ ಕೈಗೆ ದಾಟಿ ಹೋಗುತ್ತಿತ್ತು. ಲೆಕ್ಕವಿಲ್ಲದಷ್ಟು ತಲೆಮಾರುಗಳವರೆಗೆ, ಈ ಹೊಳೆಯುವ ಚಿಪ್ಪು ಅದರ ಗಾತ್ರಕ್ಕಿಂತ ಹೆಚ್ಚಿನ ಅರ್ಥವನ್ನು ಹೊಂದಿತ್ತು.
ವಿವಿಧ ಸಂಸ್ಕೃತಿಗಳಲ್ಲಿ, ಜಾನಪದ ಆಚರಣೆಗಳಲ್ಲಿ, ನಂಬಿಕೆಗಳಲ್ಲಿ ಕವಡೆಯು ಹಾಸುಹೊಕ್ಕಾಗಿತ್ತು. ಅದರ ನಯವಾದ ಅಂಡಾಕಾರದ ಆಕಾರ, ಅರೆಗೋಳಾಕಾರದಲ್ಲಿ ಉಬ್ಬಿದ ಬೆನ್ನು ಮತ್ತು ಮಧ್ಯದ ಕಿರಿದಾದ ಸೀಳು ಫಲವತ್ತತೆಯ ಸಂಕೇತವಾಗಿತ್ತು. ಮಹಿಳೆಯ ಕ್ರತುಶಕ್ತಿಯ ಪ್ರತಿರೂಪವಾಗಿ ಕಂಡುಬರುತ್ತಿತ್ತು. ಮಹಿಳೆಯರು ಸುರಕ್ಷಿತ ಸಂತಾನೋತ್ಪತ್ತಿಗಾಗಿ ಕವಡೆಯನ್ನು ತಾಯತವಾಗಿ ಧರಿಸುತ್ತಿದ್ದರು. ಸಮುದಾಯಗಳು ಅವುಗಳನ್ನು ಪವಿತ್ರ ಸ್ಥಳಗಳನ್ನು ಅಲಂಕರಿಸಲು ಉಪಯೋಗಿಸು ತ್ತಿದ್ದು, ಸಮೃದ್ಧಿ ಮತ್ತು ಜೀವದ ನಿರಂತರತೆಯನ್ನು ಪ್ರತಿನಿಧಿಸು ತ್ತಿದ್ದವು. ಹೀಗೆ, ಕವಡೆಯು ಸಂತಾನೋತ್ಪತ್ತಿ, ರಕ್ಷಣೆ ಮತ್ತು ಪ್ರಕೃತಿಯ ರಹಸ್ಯ ಚಕ್ರಗಳ ಪ್ರತೀಕವಾಗಿ ಪರಿಣಮಿಸಿತ್ತು.
ಅದೇ ಸಮಯದಲ್ಲಿ, ಇದು ಚಲಾವಣೆಯ ನಾಣ್ಯಗಳ ಆರಂಭಿಕ ರೂಪಗಳಲ್ಲಿ ಒಂದಾಗಿತ್ತು. ಆಫ್ರಿಕಾ ಮತ್ತು ಭಾರತೀಯ ಉಪಖಂಡದ ಮಾರುಕಟ್ಟೆಗಳಿಂದ ಪೆಸಿಫಿಕ್ ದ್ವೀಪಗಳವರೆಗೆ, ಕವಡೆಗಳು ವ್ಯಾಪಾರಿಯಿಂದ ವ್ಯಾಪಾರಿಗೆ ಮೌಲ್ಯದ ಖಾತ್ರಿಯಾಗಿ ವಿಶ್ವಾಸಾರ್ಹ ಸಂಕೇತಗಳಾಗಿ ವರ್ಗಾವಣೆಯಾದವು. ಹೀಗೆ ಹಣ ಮತ್ತು ಆಭರಣಗಳಾಗಿ ಜನರಲ್ಲಿ ಜನಪ್ರಿಯವಾಗಿತ್ತು. ಲೋಹದ ನಾಣ್ಯಗಳು ವಿರಳವಾಗಿದ್ದಾಗಲೂ, ಬೆರಳೆಣಿಕೆಯಷ್ಟು ಕವಡೆಗಳಿಂದ ಉಪ್ಪು, ಅಕ್ಕಿ ಅಥವಾ ಬಟ್ಟೆಯನ್ನು ಖರೀದಿಸಬಹುದು ಎಂದು ಜನರಿಗೆ ತಿಳಿದಿತ್ತು.
ಕವಡೆಗಳನ್ನು ಧರಿಸುವುದು ಅಂದರೆ ಕೇವಲ ಆಭರಣದಂತೆ ಧರಿಸುವುದಲ್ಲ – ಅದು ಸಂಪತ್ತಿನ ಸಂಕೇತವಾಗಿಯೂ, ವ್ಯಾಪಾರದ ವಿಶ್ವ ವ್ಯಾಪಕ ಜಾಲದೊಂದಿಗೆ ಒಬ್ಬನ ಸಂಪರ್ಕದ ಗುರುತಾಗಿಯೂ ಕಾಣಲ್ಪಟ್ಟಿತು. ಹಿಂದಿನ ಕಾಲದಲ್ಲಿ ಕವಡೆಗಳನ್ನು ನಾಣ್ಯಗಳಂತೆ ಬಳಸುತ್ತಿದ್ದ ಕಾರಣದಿಂದ, ಅವುಗಳನ್ನು ಧರಿಸಿದವರು ಧನಶಾಲಿಗಳೆಂಬ ಗೌರವಕ್ಕೆ ಪಾತ್ರರಾಗುತ್ತಿದ್ದರು. ಜೊತೆಗೆ, ಕವಡೆಗಳು ದೂರದ ಸಮುದ್ರತೀರಗಳು ಮತ್ತು ವ್ಯಾಪಾರ ಮಾರ್ಗಗಳಿಂದ ಬಂದದ್ದರಿಂದ, ಅದನ್ನು ಧರಿಸುವುದು ಜಗತ್ತಿನ ವಿಭಿನ್ನ ಭಾಗಗಳ ನಡುವಿನ ಸಾಂಸ್ಕೃತಿಕ ಮತ್ತು ಆರ್ಥಿಕ ಸಂಪರ್ಕವನ್ನು ಪ್ರತಿಬಿಂಬಿಸುವ ಸಂಕೇತವೂ ಆಗಿತ್ತು.
ಭಾರತದಲ್ಲಿ, ಕವಡೆಗಳು ಹಣದಂತೆ ವಿಶೇಷವಾಗಿ ದೀರ್ಘಾಯುಷ್ಯವನ್ನು ಹೊಂದಿದ್ದವು. ಮೊಘಲ್ ಚರಿತ್ರಕಾರ ಅಬುಲ್ ಫಜಲ್, ಐನ್-ಇ-ಅಕ್ಬರಿಯಲ್ಲಿ, ಬಂಗಾಳ ಮತ್ತು ಒರಿಸ್ಸಾದಲ್ಲಿ ಸಣ್ಣ ವ್‌ಯವಹಾರಗಳಿಗೆ ಕವಡೆಗಳನ್ನು ಬಳಸುತ್ತಿದ್ದುದನ್ನು ಉಲ್ಲೇಖಿಸಿದ್ದಾರೆ. ಹದಿನೆಂಟನೇ ಶತಮಾನದ ವೇಳೆಗೆ, ಒಂದು ರೂಪಾಯಿ ಮೌಲ್ಯವು ಐದು ಸಾವಿರಕ್ಕೂ ಹೆಚ್ಚು ಕವಡೆಗಳಿಗೆ ಸಮನಾಗಿತ್ತು ಮತ್ತು ತೆರಿಗೆಗಳನ್ನು ಸಹ ಸಂಗ್ರಹಿಸಲಾಗುತ್ತಿತ್ತು. ಹತ್ತೊಂಬತ್ತನೇ ಶತಮಾನದವರೆಗೂ, ವಿಶೇಷವಾಗಿ ಪೂರ್ವ ಮತ್ತು ಮಧ್ಯ ಭಾರತದಲ್ಲಿ ಅವುಗಳ ಮುಂದುವರಿದ ಬಳಕೆಯನ್ನು ಬ್ರಿಟಿಷ್ ಆಡಳಿತಗಾರರು ನಂತರ ಗಮನಿಸಿದರು.
(ಮುಂದುವರಿಯುವುದು…)
