ಬೆಂಗಳೂರು,ಡಿ.13- ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದಡಿ ಕಾರ್ಯ ನಿರ್ವಹಿಸುತ್ತಿರುವ ನಾನಾ ಬಗೆಯ ವಸತಿ ಶಾಲೆಗಳು 2024-25ನೇ ಶೈಕ್ಷಣಿಕ ಸಾಲಿಗೆ ಅನ್ವಯವಾಗುವಂತೆ 6ನೇ ತರಗತಿಯ ಪ್ರವೇಶಕ್ಕೆ ಆನ್ ಲೈನ್ ಮೂಲಕ ಅರ್ಜಿ ಆಹ್ವಾನಿಸಿವೆ.
ಡಿಸೆಂಬರ್ 31ನೇ ತಾರೀಖು ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದು, 2024ರ ಫೆಬ್ರವರಿ 18ರಂದು ಪ್ರವೇಶ ಪರೀಕ್ಷೆ ನಡೆಸಲಾಗುವುದು ಎಂದು ಕರ್ನಾಟಕ ಪರೀಕ್ಷಾ ಪ್ರಾಕಾರವು ತಿಳಿಸಿದೆ.
ಆನ್ ಲೈನ್ ಅರ್ಜಿ ಸಲ್ಲಿಸುವಾಗ ವಿದ್ಯಾರ್ಥಿಗಳು ತಾವು ಪ್ರವೇಶ ಬಯಸುವ ವಸತಿ ಶಾಲೆಗಳನ್ನು ಆದ್ಯತಾ ಕ್ರಮದಲ್ಲಿ ಆಯ್ಕೆ ಮಾಡಿಕೊಳ್ಳಬೇಕು. ಈ ಅವಕಾಶದ ಅಡಿಯಲ್ಲಿ, ಆಯಾ ಜಿಲ್ಲೆಯಲ್ಲಿರುವ ಎಲ್ಲ ವಸತಿ ಶಾಲೆಗಳನ್ನೂ ನಮೂದಿಸಬೇಕು. 100 ಅಂಕಗಳಿಗೆ ನಡೆಯುವ ಪ್ರವೇಶ ಪರೀಕ್ಷೆಯಲ್ಲಿ ಗಳಿಸಲಿರುವ ಮೆರಿಟ್, ಮೀಸಲಾತಿ ಮತ್ತು ಅಭ್ಯರ್ಥಿಗಳು ಪ್ರವೇಶ ಕೋರಿ ನಮೂದಿಸುವ ಶಾಲೆಗಳ ಆದ್ಯತಾ ಕ್ರಮದ ಆಧಾರದ ಮೇಲೆ ಸೀಟು ಹಂಚಿಕೆ ಮಾಡಲಾಗುವುದು ಎಂದು ಪ್ರಾಕಾರದ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ(13-12-2023)
ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಏಕಲವ್ಯ, ಅಟಲ್ ಬಿಹಾರಿ ವಾಜಪೇಯಿ, ಇಂದಿರಾ ಗಾಂಧಿ, ಅಂಬೇಡ್ಕರ್, ಮಾಸ್ತಿ ವೆಂಕಟೇಶ ಅಯ್ಯಂಗಾರ್, ಸಂಗೊಳ್ಳಿ ರಾಯಣ್ಣ, ಕವಿರನ್ನ, ಗಾಂಧಿತತ್ತ್ವ ಮತ್ತು ಶ್ರೀ ನಾರಾಯಣ ಗುರು ವಸತಿ ಶಾಲೆಗಳ ಪ್ರವೇಶಕ್ಕೆ ಈ ಪರೀಕ್ಷೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.
ವಿಶೇಷ ವರ್ಗಗಳ ಮಕ್ಕಳಿಗೆ 10 ಸಾವಿರ ಸೀಟು ಲಭ್ಯ:
ಮೇಲ್ಕಂಡ ವಸತಿ ಶಾಲೆಗಳಲ್ಲಿ ಒಟ್ಟು 40 ಸಾವಿರ ಸೀಟುಗಳು ಇದ್ದು, ಇದರಲ್ಲಿ 10 ಸಾವಿರ ಸೀಟುಗಳು ಆಶ್ರಮ ಶಾಲೆಯ ಮಕ್ಕಳು, ಅಲೆಮಾರಿ ಮತ್ತು ಅರೆ ಅಲೆಮಾರಿ, ವಿಕಲಚೇತನ ಮಕ್ಕಳು, ಮಾಜಿ ಸೈನಿಕರ ಮಕ್ಕಳು, ಸಫಾಯಿ ಕರ್ಮಚಾರಿ ಮತ್ತು ಪೌರ ಕಾರ್ಮಿಕರ ಮಕ್ಕಳು, ಸ್ಮಶಾನ ಸಿಬ್ಬಂದಿಯ ಮಕ್ಕಳು ಮತ್ತು ವಿಶೇಷ ದುರ್ಬಲ ವರ್ಗಗಳ ಮಕ್ಕಳಿಗೆ ಲಭ್ಯವಿರುತ್ತವೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘವು ತಿಳಿಸಿದೆ.
ಈ ಪೈಕಿ ವಿಶೇಷ ದುರ್ಬಲ ವರ್ಗಗಳ ಅಡಿಯಲ್ಲಿ ದೇವದಾಸಿಯರು ಮತ್ತು ಎಚ್‍ಐವಿ ಪೀಡಿತರ ಮಕ್ಕಳು, ಅನಾಥ ಮಕ್ಕಳು, ಏಕ ಪೋಷಕರು, ವಿಧವೆಯರು, ಬಾಲ ಕಾರ್ಮಿಕರು, ಯೋಜನಾ ನಿರಾಶ್ರಿತರು, ಚಿಂದಿ ಆಯುವವರು, ಆತ್ಮಹತ್ಯೆ ಮಾಡಿಕೊಂಡಿರುವ ರೈತರ ಮಕ್ಕಳು ಮತ್ತು ಕೋವಿಡ್ ಸೋಂಕಿನಲ್ಲಿ ತಂದೆ-ತಾಯಿ ಇಬ್ಬರನ್ನೂ ಕಳೆದುಕೊಂಡಿರುವ ಮಕ್ಕಳು ಬರುತ್ತಾರೆ ಎಂದು ಸಂಘವು ಮಾಹಿತಿ ನೀಡಿದೆ.