Friday, September 20, 2024
Homeರಾಜ್ಯಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಪತ್ತೆ : ಹೈ ಅಲರ್ಟ್ ಘೋಷಣೆ, ಪ್ರವಾಸ ನಿಲ್ಲಿಸುವಂತೆ ಸೂಚನೆ

ಕೇರಳದಲ್ಲಿ ಮೆದುಳು ತಿನ್ನುವ ಅಮೀಬಾ ಪತ್ತೆ : ಹೈ ಅಲರ್ಟ್ ಘೋಷಣೆ, ಪ್ರವಾಸ ನಿಲ್ಲಿಸುವಂತೆ ಸೂಚನೆ

ಬೆಂಗಳೂರು,ಜು.6- ರಾಜ್ಯದಲ್ಲಿ ಡೆಂಘೀ ಪ್ರಕರಣ ಗಳು ತೀವ್ರವಾಗಿ ಹೆಚ್ಚಾಗಿರುವ ನಡುವೆ ಶಿವಮೊಗ್ಗದಲ್ಲಿ ಝೀಕಾ ವೈರಸ್ ಪರಿಣಾಮ ಹಿರಿಯ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ನೆರೆಯ ರಾಜ್ಯದಲ್ಲಿ ಮೆದುಳು ಸೋಂಕಿನ ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ ಕಾಯಿಲೆ ಪತ್ತೆಯಾಗಿರುವುದು ತೀವ್ರ ಆತಂಕ ಮೂಡಿಸಿದೆ.

ರಾಜ್ಯದಲ್ಲಿ ಡೆಂಘೀ ಪ್ರಕರಣಗಳು 6 ಸಾವಿರದ ಗಡಿ ದಾಟಿದ್ದು, ಜೀವಹಾನಿಯ ಸಂಖ್ಯೆ 6 ರಷ್ಟಾಗಿದೆ. ಶಿವಮೊಗ್ಗದಲ್ಲಿ 74 ವರ್ಷದ ವ್ಯಕ್ತಿ ಝೀಕಾ ವೈರಸ್ ಸೋಂಕಿಗೆ ಜೀವ ತೆತ್ತಿದ್ದಾರೆ. ಇತ್ತ ಕೇರಳದಲ್ಲಿ ಕಳೆದ ಮೇ ತಿಂಗಳಿನಿಂದೀಚೆಗೆ 4 ಮಂದಿ, ಅದರಲ್ಲೂ ಬಾಲಕರು ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ ಸೋಂಕಿಗೆ ಸಿಲುಕಿದ್ದು, 3 ಬಾಲಕರು ಪ್ರಾಣ ಕಳೆದುಕೊಂಡಿದ್ದಾರೆ.

ಡೆಂಘೀ ಪ್ರಕರಣಗಳ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಘೋಷಣೆ ಮಾಡಬೇಕು ಎಂದು ಹಿರಿಯ ವೈದ್ಯರು ಹಾಗೂ ಮಾಜಿ ಸಂಸದರಾದ ಡಾ.ಸಿ.ಎನ್.ಮಂಜುನಾಥ್ ಒತ್ತಾಯಿಸಿದ್ದಾರೆ.ಡೆಂಘೀ ಮತ್ತು ಝೀಕಾ ವೈರಸ್ ಆತಂಕದ ನಡುವೆ ಕೇರಳದ ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ ಕಾಯಿಲೆ ಮತ್ತಷ್ಟು ಗಂಭೀರ ಪರಿಸ್ಥಿತಿಯನ್ನು ನಿರ್ಮಿಸಿದೆ.

ಕಲುಷಿತ ನೀರಿನಲ್ಲಿ ಸ್ವತಂತ್ರವಾಗಿ ಜೀವಿಸುವ ಅಮೀಬಾ ಮಾದರಿಯ ಸೋಂಕಿನಿಂದ ಹರಡುವ ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ ಕಾಯಿಲೆ ಮೆದುಳಿನ ಸೋಂಕಿಗೆ ಕಾರಣವಾಗಲಿದ್ದು, ಮಾರಣಾಂತಿಕವಾಗಿದೆ.

ಉತ್ತರ ಕೇರಳದ ಪಯೋಲಿ ಪ್ರದೇಶದಲ್ಲಿ 14 ವರ್ಷದ ಬಾಲಕ ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ ಕಾಯಿಲೆಯಿಂದ ಖಾಸಗಿ ಆಸ್ಪತ್ರೆಯಲ್ಲಿ ಜೀವ ಕಳೆದುಕೊಂಡಿದ್ದಾನೆ. ಈತನಿಗೆ ಚಿಕಿತ್ಸೆ ನೀಡಿದ್ದ ವೈದ್ಯರೂ ಕೂಡ ಜು.1 ರಂದು ಆಸ್ಪತ್ರೆಗೆ ದಾಖಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ.

ವೈದ್ಯರಲ್ಲಿ ಸೋಂಕನ್ನು ತಕ್ಷಣವೇ ಗುರುತಿಸಿ ಚಿಕಿತ್ಸೆ ಆರಂಭಿಸಿದ್ದರಿಂದಾಗಿ ಆರೋಗ್ಯ ಸುಧಾರಣೆ ಕಂಡುಬಂದಿದೆ ಎಂದು ಹೇಳಲಾಗಿದೆ.ಇದಕ್ಕೂ ಮೊದಲು ಮೇ 21 ರಂದು ಮಲಪ್ಪುರಂನಲ್ಲಿ 5 ವರ್ಷದ ಬಾಲಕಿ, ಕನ್ನೂರಿನಲ್ಲಿ ಜೂ.25 ರಂದು 13 ವರ್ಷದ ಬಾಲಕಿ ಮೆದುಳು ಸೋಂಕಿನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತುರ್ತು ಸಭೆ ನಡೆಸಿದ್ದು, ಹಲವಾರು ಸೂಚನೆಗಳನ್ನು ನೀಡಿದ್ದಾರೆ.

ಜಲ ಮೂಲಗಳ ಶುದ್ಧೀಕರಣ, ಈಜುಕೊಳಗಳಿಗೆ ಕ್ಲೋರೇನಿಯೇಷನ್ ಮೂಲಕ ಸ್ವಚ್ಛಗೊಳಿಸುವುದು, ಮಕ್ಕಳನ್ನು ನೀರಿನಲ್ಲಿ ಬಿಡುವಾಗ ಅಗತ್ಯ ಮುಂಜಾಗ್ರತಾ ಕ್ರಮ ವಹಿಸುವಂತೆ ನಾನಾ ರೀತಿಯ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗಿದೆ.

ಕೇರಳದಲ್ಲಿ ಅಮೀಬಿಕ್ ಮೆನಿಂಗೋಎನ್ಸಿಫಲಿಟಿಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದಲ್ಲೂ ಕಟ್ಟೆಚ್ಚರ ವಹಿಸಲಾಗಿದೆ. ಸೋಂಕಿತ ಪ್ರದೇಶಗಳಿಂದ ರಾಜ್ಯಕ್ಕೆ ಬರುವವರು ಮತ್ತು ಇಲ್ಲಿಂದ ಅಲ್ಲಿಗೆ ಪ್ರವಾಸಕ್ಕೆ ತೆರಳುವವರ ಮೇಲೆ ನಿಗಾ ವಹಿಸಲಾಗಿದೆ. ಈ ಸಂದರ್ಭದಲ್ಲಿ ಕೇರಳದ ಪ್ರವಾಸವನ್ನು ಮುಂದೂಡುವುದು ಸೂಕ್ತ ಎಂಬ ಸಲಹೆಗಳು ಕೇಳಿಬರುತ್ತಿವೆ.

ಅಶುದ್ಧ ನೀರಿನಲ್ಲಿ ಅಡಗಿರುವ ಅಮೀಬಾ ಮಾದರಿ ವೈರಾಣು ಮೂಗಿನ ಮೂಲಕ ದೇಹ ಪ್ರವೇಶಿಸಲಿದ್ದು, ಸೋಂಕಿಗೆ ಕಾರಣವಾಗಲಿದೆ.ಕೇರಳದಲ್ಲಿ 2017 ಮತ್ತು 2023 ರಲ್ಲೂ ಇದೇ ಸೋಂಕು ಪತ್ತೆಯಾಗಿ ತೀವ್ರ ಆತಂಕ ಮೂಡಿಸಿತ್ತು.

RELATED ARTICLES

Latest News