ತಿರುವನಂತಪುರಂ, ಆ.2 (ಪಿಟಿಐ)– ವಯನಾಡಿನಲ್ಲಿ ಇತ್ತೀಚೆಗೆ ಸಂಭವಿಸಿದ ಮಾರಣಾಂತಿಕ ಭೂಕುಸಿತದ ಬಗ್ಗೆ ರಾಜ್ಯದ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು ತಮ ಅಭಿಪ್ರಾಯಗಳನ್ನು ಮತ್ತು ಅಧ್ಯಯನ ವರದಿಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳದಂತೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಹೊರಡಿಸಿರುವ ವಿವಾದಾತಕ ಟಿಪ್ಪಣಿಯನ್ನು ಹಿಂಪಡೆಯುವಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮುಖ್ಯ ಕಾರ್ಯದರ್ಶಿ ವಿ ವೇಣು ಅವರಿಗೆ ಸೂಚಿಸಿದ್ದಾರೆ.
ತಡರಾತ್ರಿ ಹೇಳಿಕೆ ನೀಡಿರುವ ವಿಜಯನ್ ಅವರು, ವಯನಾಡಿನ ವಿಕೋಪ ಪೀಡಿತ ಮೆಪ್ಪಾಡಿ ಪಂಚಾಯತ್‌ಗೆ ಭೇಟಿ ನೀಡದಂತೆ ಮತ್ತು ಅಭಿಪ್ರಾಯ ವ್ಯಕ್ತಪಡಿಸದಂತೆ ವೈಜ್ಞಾನಿಕ ಸಂಸ್ಥೆಗಳು ಮತ್ತು ವಿಜ್ಞಾನಿಗಳಿಗೆ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಡಿಎಂಎ) ನಿರ್ದೇಶನ ನೀಡಿದೆ ಎಂಬ ಸುದ್ದಿ ತಪ್ಪುದಾರಿಗೆಳೆಯುವಂತಿದೆ. ರಾಜ್ಯ ಸರ್ಕಾರಕ್ಕೆ ಅಂತಹ ನೀತಿ ಇಲ್ಲ ಎಂದು ಮುಖ್ಯಮಂತ್ರಿ ಹೇಳಿದರು.
ಇಂತಹ ಸಂದೇಶ ರವಾನೆ ಮಾಡಿರುವ ಸಂವಹನವನ್ನು ಕೂಡಲೇ ಮಧ್ಯಪ್ರವೇಶಿಸಿ ಹಿಂಪಡೆಯುವಂತೆ ಮುಖ್ಯ ಕಾರ್ಯದರ್ಶಿಗೆ ಸೂಚಿಸಲಾಗಿದೆ ಎಂದರು.
ಈ ಹಿಂದೆ, ರಾಜ್ಯ ಪರಿಹಾರ ಆಯುಕ್ತ ಮತ್ತು ವಿಪತ್ತು ನಿರ್ವಹಣೆಯ ಪ್ರಧಾನ ಕಾರ್ಯದರ್ಶಿ ಟಿಂಕು ಬಿಸ್ವಾಲ್ ಅವರು ರಾಜ್ಯದ ಎಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳಿಗೆ ವಯನಾಡಿನ ಮೆಪ್ಪಾಡಿ ಪಂಚಾಯತ್‌ಗೆ ಯಾವುದೇ ಕ್ಷೇತ್ರ ಭೇಟಿ ನೀಡದಂತೆ ಸೂಚಿಸಿದ ಟಿಪ್ಪಣಿಯನ್ನು ವೈಜ್ಞಾನಿಕ ಸಮುದಾಯವು ತೀವ್ರವಾಗಿ ಪ್ರತಿಭಟಿಸಿತ್ತು.
ವೈಜ್ಞಾನಿಕ ಸಮುದಾಯವು ತಮ ಅಭಿಪ್ರಾಯಗಳನ್ನು ಮತ್ತು ಅಧ್ಯಯನ ವರದಿಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುವುದನ್ನು ನಿರ್ಬಂಧಿಸಬೇಕು ಎಂದು ಟಿಪ್ಪಣಿಯಲ್ಲಿ ಹೇಳಲಾಗಿತ್ತು.ವಿಪತ್ತು ಪೀಡಿತ ಪ್ರದೇಶದಲ್ಲಿ ಯಾವುದೇ ಅಧ್ಯಯನಗಳನ್ನು ಕೈಗೊಳ್ಳಲು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದಿಂದ ಪೂರ್ವಾನುಮತಿ ಅಗತ್ಯ ಎಂದು ಅದು ಹೇಳಿತ್ತು.