Home ಇದೀಗ ಬಂದ ಸುದ್ದಿ ಛತ್ತೀಸ್‌‍ಗಢ ಪತ್ರಕರ್ತನ ಹತ್ಯೆ : ಪ್ರಮುಖ ಆರೋಪಿ ಸುರೇಶ್‌ ಚಂದ್ರಕರ್‌ ಹೈದರಾಬಾದ್‌ನಲ್ಲಿ ಬಂಧನ

ಛತ್ತೀಸ್‌‍ಗಢ ಪತ್ರಕರ್ತನ ಹತ್ಯೆ : ಪ್ರಮುಖ ಆರೋಪಿ ಸುರೇಶ್‌ ಚಂದ್ರಕರ್‌ ಹೈದರಾಬಾದ್‌ನಲ್ಲಿ ಬಂಧನ

0
ಛತ್ತೀಸ್‌‍ಗಢ ಪತ್ರಕರ್ತನ ಹತ್ಯೆ : ಪ್ರಮುಖ ಆರೋಪಿ ಸುರೇಶ್‌ ಚಂದ್ರಕರ್‌ ಹೈದರಾಬಾದ್‌ನಲ್ಲಿ ಬಂಧನ

ರಾಯ್‌ಪುರ,ಜ.6-ಛತ್ತೀಸ್‌‍ಗಢದ ಬಿಜಾಪುರ ಜಿಲ್ಲೆಯಲ್ಲಿ ಪತ್ರಕರ್ತನ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗುತ್ತಿಗೆದಾರ ಸುರೇಶ್‌ ಚಂದ್ರಕರ್‌ನನ್ನು ವಿಶೇಷ ತನಿಖಾ ತಂಡ (ಎಸ್‌‍ಐಟಿ) ಹೈದರಾಬಾದ್‌ನಲ್ಲಿ ಬಂಧಿಸಿದೆ.

ಪತ್ರಕರ್ತ ಮುಖೇಶ್‌ ಚಂದ್ರಕರ್‌ ಹತ್ಯೆ ಪ್ರಕರಣ ಕಳೆದ ಜನವರಿ 3ರಂದು ಬೆಳಕಿಗೆ ಬಂದಾಗಿನಿಂದ ತಲೆಮರೆಸಿಕೊಂಡಿದ್ದ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪತ್ರಕರ್ತ ಮುಖೇಶ್‌ ಚಂದ್ರಕರ್‌ (33) ಕಳೆದ ಜ.1 ರಂದು ನಾಪತ್ತೆಯಾಗಿದ್ದರು ಹುಡುಕಾಟದ ನಂತರ ಅವರ ಶವ ಜ.3 ರಂದು ಬಿಜಾಪುರ ಪಟ್ಟಣದ ಚಟ್ಟನ್‌ಪಾರಾ ಬಸ್ತಿಯಲ್ಲಿ ಸುರೇಶ್‌ ಚಂದ್ರಕರ್‌ ಒಡೆತನದ ಶೆಡ್‌ನ ಸೆಪ್ಟಿಕ್‌ ಟ್ಯಾಂಕ್‌ನಲ್ಲಿ ಪತ್ತೆಯಾಗಿತ್ತು.

ಕಳೆದ ಡಿಸೆಂಬರ್‌ 25 ರಂದು ಎನ್‌ಡಿಟಿವಿಯಲ್ಲಿ ಬಿಜಾಪುರದ ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನಲಾದ ಸುದ್ದಿ ವರದಿಯೊಂದು ಮುಖೇಶ್‌ ಚಂದ್ರಕರ್‌ ಹತ್ಯೆಯ ಹಿಂದಿನ ಉದ್ದೇಶ ಎಂದು ಹೇಳಲಾಗುತ್ತಿದೆ.

ಛತ್ತೀಸ್‌‍ಗಢದ ಉಪಮುಖ್ಯಮಂತ್ರಿ ವಿಜಯ್‌ ಶರ್ಮಾ ಅವರು ಸುರೇಶ್‌ ಚಂದ್ರಕರ್‌ ಕಾಂಗ್ರೆಸ್‌‍ ನಾಯಕ ಎಂದು ಹೇಳಿಕೊಂಡಿದ್ದರು. ಆದರೆ, ಆರೋಪಿಗಳು ಇತ್ತೀಚೆಗೆ ಆಡಳಿತಾರೂಢ ಬಿಜೆಪಿ ಸೇರಿದ್ದಾರೆ ಎಂದು ವಿರೋಧ ಪಕ್ಷ ಹೇಳಿದೆ.

ಈ ಪ್ರಕರಣದಲ್ಲಿ ಅವರ ಸಹೋದರರಾದ ರಿತೇಶ್‌ ಚಂದ್ರಕರ್‌ ಮತ್ತು ದಿನೇಶ್‌ ಚಂದ್ರಕರ್‌ ಮತ್ತು ಮೇಲ್ವಿಚಾರಕ ಮಹೇಂದ್ರ ರಾಮ್ಟೆಕೆ ಅವರನ್ನು ಈಗಾಗಲೇ ಬಂಧಿಸಲಾಗಿದೆ. ಪ್ರಕರಣದ ತನಿಖೆ ನಡೆಸಲು ರಚಿಸಲಾಗಿದ್ದ ಎಸ್‌‍ಐಟಿ ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿಗೆ ಹುಡುಕಾಟ ನಡೆಸಿತ್ತು.ಆತ ಹೈದರಾಬಾದ್‌ನಲ್ಲಿರುವ ಬಗ್ಗೆ ಸುಳಿವು ಪಡೆದು ಕಳೆದ ರಾತ್ರಿ ಕಾರ್ಯಾಚರಣೆ ನಡೆಸಿ ಸುರೇಶ್‌ ಚಂದ್ರಕರ್‌ ಅವರನ್ನು ಬಂಧಿಸಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.