Saturday, March 15, 2025
Homeಮನರಂಜನೆಪ್ಯಾನ್‍ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ‘ಕೆಜಿಎಫ್‍’ ಖ್ಯಾತಿಯ ಕನ್ನಡಿಗ ಅವಿನಾಶ್‍

ಪ್ಯಾನ್‍ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿರುವ ‘ಕೆಜಿಎಫ್‍’ ಖ್ಯಾತಿಯ ಕನ್ನಡಿಗ ಅವಿನಾಶ್‍

ಮುಂದೊಂದು ದಿನ ನಟನಾಗಬಹುದು, ಬಹುಭಾಷೆಯ ಚಿತ್ರಗಳಲ್ಲಿ ನಟಿಸಬಹದು ಎಂದು ಕನಸನ್ನೂ ಕಂಡಿರದ ಅವಿನಾಶ್‍ ಇವತ್ತು ಕನ್ನಡವಲ್ಲದೆ, ತೆಲುಗು, ತಮಿಳು, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಬೇಡಿಕೆಯ ನಟರಾಗಿದ್ದಾರೆ. ಕಡಿಮೆ ಸಮಯದಲ್ಲಿ ಬೇರೆ ಭಾಷೆಯ ಜನಪ್ರಿಯ ನಟರೊಂದಿಗೆ ತೆರೆ ಹಂಚಿಕೊಂಡು ಛಾಪು ಮೂಡಿಸಿದ್ದಾರೆ. ಇವರು ಯಾವ ಅವಿನಾಶ್‍ ಎಂಬ ಪ್ರಶ್ನೆ ಬರಬಹುದು. ‘ಕೆಜಿಎಫ್‍’ ಚಿತ್ರದ ಮೂಲಕ ಚಿತ್ರರಂಗಕ್ಕೆ ಪರಿಚಿತರಾಗಿ, ಆ ನಂತರ ಹಲವು ಚಿತ್ರಗಳಲ್ಲಿ ನಟಿಸುತ್ತಿರುವ ನಟನ ಕಥೆ ಇದು.

ನೀವು ‘ಕೆಜಿಎಫ್‍’ ಚಿತ್ರಗಳನ್ನು ನೋಡಿದ್ದರೆ, ಅದರಲ್ಲಿ ಆ್ಯಂಡ್ರೂ ಪಾತ್ರ ಖಂಡಿತಾ ಗಮನಸೆಳೆದಿರುತ್ತದೆ. ಆ ಪಾತ್ರ ಮಾಡಿದವರು ಅದೇ ಅವಿನಾಶ್. ಮೂಲತಃ ಬೆಂಗಳೂರಿನವರಾದ ಅವಿನಾಶ್‍, ಬೇರೆ ಉದ್ಯಮದಲ್ಲಿ ತೊಡಗಿಸಿಕೊಂಡವರು. ನಟಿಸಬೇಕು ಎಂಬ ಆಸೆ ಇದ್ದಿದ್ದು ಬಿಟ್ಟರೆ, ಯಾವತ್ತೂ ಅವರು ಸ್ಟೇಜ್‍ ಹತ್ತಿರಲಿಲ್ಲ. ಚಿರಂಜೀವಿ ಸರ್ಜಾ ಸ್ನೇಹ ಬಿಟ್ಟರೆ, ಚಿತ್ರರಂಗದವರ ಪರಿಚಯವೂ ಇರಲಿಲ್ಲ. ಒಮ್ಮೆ ತಮ್ಮ ಆಸೆಯನ್ನು ಚಿರು ಬಳಿ ಹೇಳಿಕೊಂಡಾಗ, ಅವರು ಪನ್ನಗಾಭರಣರನ್ನು ಪರಿಚಯ ಮಾಡಿಸಿದರಂತೆ. ಪನ್ನಗ, ಛಾಯಾಗ್ರಾಹಕ ಭುವನ್‍ ಗೌಡ ಅವರನ್ನು ಪರಿಚಯಿಸಿದ್ದಾರೆ. ಆಗ ‘ಕೆಜಿಎಫ್‍’ ಚಿತ್ರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದ ಭುವನ್‍, ಅವಿನಾಶ್ ಅವರನ್ನು ನಿರ್ದೇಶಕ ಪ್ರಶಾಂತ್‍ ನೀಲ್‍ಗೆ ಭೇಟಿ ಮಾಡಿಸಿದ್ದಾರೆ. ತಮ್ಮ ಚಿತ್ರಕ್ಕೆ ಸೂಕ್ತ ಪಾತ್ರಧಾರಿಗಳ ಹುಡುಕಾಟದಲ್ಲಿದ್ದ ಪ್ರಶಾಂತ್‍, ಒಂದು ಪಾತ್ರಕ್ಕೆ ಅವಿನಾಶ್‍ ಅವರನ್ನು ಆಯ್ಕೆ ಮಾಡಿದ್ದಾರೆ.

ಪಾತ್ರವೇನೋ ಸಿಕ್ಕಿದೆ. ಆದರೆ, ಅವಿನಾಶ್ ಅವರಿಗೆ ನಟನೆ ಗೊತ್ತಿಲ್ಲ. ಕ್ಯಾಮೆರಾ ಹೇಗೆ ಎದುರಿಸಬೇಕು ಎಂದು ತಿಳಿದಿಲ್ಲ. ಸುಮಾರು ಒಂದು ವರ್ಷ ಪ್ರಶಾಂತ್ ನೀಲ್‍, ಕಾರ್ಯಾಗಾರ ಮಾಡಿ ಅವಿನಾಶ್‍ ಅವರನ್ನು ತಿದ್ದಿ-ತೀಡಿ ಕ್ಯಾಮೆರಾ ಮುಂದೆ ನಿಲ್ಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ ಅವಿನಾಶ್‍ ಮೊದಲ ಚಿತ್ರದಲ್ಲೇ ಗಮನಸೆಳೆದಿದ್ದಾರೆ. ‘ಕೆಜಿಎಫ್‍ 1’ ಮತ್ತು ‘ಕೆಜಿಎಫ್‍ 2’ ಚಿತ್ರಗಳ ಜೊತೆಗೆ ‘ಗುರುದೇವ್‍ ಹೊಯ್ಸಳ’ ಚಿತ್ರದಲ್ಲೂ ತಮ್ಮ ಅಭಿನಯದ ಮೂಲಕ ಗಮನಸೆಳೆದಿದ್ದಾರೆ.

ಕನ್ನಡವಲ್ಲದೆ, ತೆಲುಗಿನ ‘ವೀರ ಸಿಂಹ ರೆಡ್ಡಿ’, ‘ವಾಲ್ಟರ್ ವೀರಯ್ಯ’, ತಮಿಳಿನ ‘ವೆಟ್ಟಯಾನ್‍’, ‘ಕಂಗುವಾ’, ‘ಕಾದರ್ ಭಾಷ ಎಂದ್ರ ಮುತ್ತುರಾಮಲಿಂಗಂ’, ಮಲಯಾಳಂನ ‘ಒರು ಪೆರುಂ ಕಲಿಯಟ್ಟಂ’, ಹಿಂದಿಯ ‘ಬೇಬಿ ಜಾನ್‍’ ಚಿತ್ರಗಳಲ್ಲಿ ಈಗಾಗಲೇ ನಟಿಸಿರುವ ಅವಿನಾಶ್‍, ಮುಂಬರುವ ವಿಜಯ್ ಸೇತುಪತಿ ಅಭಿನಯದ “ಏಸ್”, ‘ಗುಡ್‍ ಬ್ಯಾಡ್‍ ಅಗ್ಲಿ’, ‘ಕಿಂಗ್ಡಮ್‍’, ‘ಬುಲೆಟ್’, ‘ನಾಗಬಂಧಂ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದು, ಆ ಚಿತ್ರಗಳ ಬಿಡುಗಡೆಗೆ ಕಾಯುತ್ತಿದ್ದಾರೆ.

ಒಳ್ಳೆಯ ಪೋಷಕ ನಟನಾಗಿ ಗುರುತಿಸಿಕೊಳ್ಳುವ ಆಸೆ ಎನ್ನುವ ಅವಿನಾಶ್‍, ‘ಒಳ್ಳೆಯ ವಿಲನ್‍ ಪಾತ್ರಗಳು, ಅರ್ಥಪೂರ್ಣ ಪೋಷಕ ಪಾತ್ರಗಳಿಗೆ ಎದುರು ನೋಡುತ್ತಿದ್ದೇನೆ. ಅಭಿನಯಕ್ಕೆ ಪ್ರಾಮುಖ್ಯತೆ ಇರಬೇಕು. ‘ಗುರುದೇವ್‍ ಹೊಯ್ಸಳ’ ಚಿತ್ರದಲ್ಲೊಂದು ಒಳ್ಳೆಯ ಪಾತ್ರ ಸಿಕ್ಕಿತ್ತು. ‘ಕಂಗುವ’ ಚಿತ್ರದಲ್ಲಿ ಸೂರ್ಯ ತಂದೆಯಾಗಿ ಅಭಿನಯಿಸಿದ್ದೇನೆ. ಒಬ್ಬ ಒಳ್ಳೆಯ ಪೋಷಕ ನಟನಾಗಿ ಗುರುತಿಸಿಕೊಳ್ಳುವಾಸೆ ಇದೆ. ಒಳ್ಳೆಯ ಪಾತ್ರಗಳಿಗಾಗಿ ಎದುರುನೋಡುತ್ತಿದ್ದೇನೆ’ ಎನ್ನುತ್ತಾರೆ.

ನಟನೆ ಜೊತೆಗೆ ದೇಹದಾರ್ಢ್ಯದ ಬಗ್ಗೆಯೂ ಜಾಸ್ತಿ ಗಮನಕೊಡುವ ಅವಿನಾಶ್‍ ಕಟ್ಟುಮಸ್ತಾದ ದೇಹವನ್ನು ರೂಪಿಸಿಕೊಂಡಿದ್ದಾರೆ. ವಿಲನ್‍ ಪಾತ್ರಗಳಿಗೆ ಹೇಳಿ ಮಾಡಿಸಿದಂತಿರುವ ಅವಿನಾಶ್‍, ಕನ್ನಡದಲ್ಲಿ ಇನ್ನಷ್ಟು ಚಿತ್ರಗಳಲ್ಲಿ ನಟಿಸುವುದಕ್ಕೆ ಎದುರು ನೋಡುತ್ತಿದ್ದಾರೆ.

RELATED ARTICLES

Latest News