Wednesday, July 30, 2025
Homeರಾಜ್ಯರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ ಖರ್ಗೆ ಹೇಳಿಕೆ

ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ ಖರ್ಗೆ ಹೇಳಿಕೆ

Kharge's statement has created a huge stir in state politics

ಬೆಂಗಳೂರು,ಜು.29- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದು, ನಾಯಕತ್ವ ಬದಲಾವಣೆ ಬಗೆಗಿನ ಚರ್ಚೆಗೂ ಇಂಬು ನೀಡಿದೆ.ಈ ಹಿಂದೆ ತಮಗೆ ಮುಖ್ಯಮಂತ್ರಿಯಾಗುವ ಅವಕಾಶಗಳು ತಪ್ಪಿ ಹೋದ ಬಗ್ಗೆ ವಿಜಯಪುರದ ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ನೀಡುವ ಮೂಲಕ ಮೊದಲ ಬಾರಿಗೆ ತಮ ಅಸಮಾಧಾನವನ್ನು ಹೊರಹಾಕಿದ್ದರು. ಆದರೆ ಅವರು ತಮ ಹೇಳಿಕೆ ನೀಡುವ ವೇಳೆಯಲ್ಲಿ ಸ್ಥಾನಮಾನಗಳು ಸಿಗಲಿ, ಸಿಗದೇ ಇರಲಿ ಪಕ್ಷನಿಷ್ಠೆ ಮುಖ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು.

ಖರ್ಗೆಯವರ ಹೇಳಿಕೆಗಳನ್ನು ಬೇರೆ ರೀತಿಯಲ್ಲೇ ಬಿಂಬಿಸ ಲಾಗುತ್ತಿದೆ. ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣಕ್ಕೆ ಖರ್ಗೆ ಮರಳುತ್ತಾರೆ., ಮುಖ್ಯಮಂತ್ರಿ ಯಾಗುತ್ತಾರೆ ಎಂಬೆಲ್ಲಾ ಚರ್ಚೆಗಳು ನಡೆಯುತ್ತವೆ. ಇದು ಕಾಂಗ್ರೆಸ್‌‍ನ ಸಚಿವರು, ಶಾಸಕರಿಗೆ ಬಿಸಿ ತುಪ್ಪವಾಗಿದೆ.

ಸಿದ್ದರಾಮಯ್ಯನವರ ಬೆಂಬಲಿಗರು ಶಾಸಕಾಂಗ ಸಭೆಯಲ್ಲಿ 5 ವರ್ಷಗಳಿಗೆ ಸಿದ್ದರಾಮಯ್ಯನವರನ್ನು ಮುಖ್ಯಮಂತ್ರಿ ಎಂದು ಆಯ್ಕೆ ಮಾಡಲಾಗಿದೆ. ಯಾವುದೇ ಸಂದರ್ಭದಲ್ಲೂ ಬದಲಾವಣೆಯ ಪ್ರಶ್ನೆ ಇಲ್ಲ ಎಂದು ಹೇಳುವ ಮೂಲಕ ಖರ್ಗೆಯವರ ರಂಗಪ್ರವೇಶಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯನವರನ್ನು ಅಸಹನೆ ಯಿಂದಲೇ ಸಹಿಸಿಕೊಂಡಿರುವ ಕೆಲ ಸಚಿವರು, ಶಾಸಕರು ಮಲ್ಲಿಕಾರ್ಜುನ ಖರ್ಗೆಯವರಿಗೆ ಪ್ರಧಾನಿಯಾಗುವ ಅರ್ಹತೆ ಇದೆ. ಮುಖ್ಯಮಂತ್ರಿ ಸೇರಿದಂತೆ ಯಾವುದೇ ಸ್ಥಾನಗಳನ್ನು ನಿಭಾಯಿಸುವ ಸಾಮರ್ಥ್ಯ ಅವರಿಗಿದೆ. 50 ವರ್ಷಗಳ ಹಿರಿಯ ಅನುಭವಿ ರಾಜಕಾರಣಿ ಮಲ್ಲಿಕಾರ್ಜುನ ಖರ್ಗೆಯವರು ರಾಜ್ಯ ರಾಜಕಾರಣಕ್ಕೆ ಬಂದರೆ ಅದರಲ್ಲಿ ತಪ್ಪೇನೂ ಇಲ್ಲ ಎಂದು ಅಡ್ಡಗೋಡೆ ಮೇಲೆ ದೀಪ ಇಡುವಂತಹ ಮಾತುಗಳನ್ನಾ ಡುತ್ತಿದ್ದಾರೆ.

ಖರ್ಗೆ ರಾಜ್ಯ ರಾಜಕಾರಣಕ್ಕೆ ಬರುತ್ತಾರೋ, ಇಲ್ಲವೋ ಎಂಬುದು ಮಿಲಿಯನ್‌ ಡಾಲರ್‌ ಪ್ರಶ್ನೆಯಾಗಿದ್ದು, ಇದಕ್ಕೆ ಸದ್ಯಕ್ಕೆ ನಿಖರ ಉತ್ತರ ದೊರೆಯುವ ಸಾಧ್ಯತೆಗಳು ಕಡಿಮೆ. ಖರ್ಗೆಯವರು ಅತ್ಯಂತ ಪಕ್ಷನಿಷ್ಠರಾಗಿದ್ದು, ಈವರೆಗೂ ಯಾವುದೇ ವೇದಿಕೆಗಳಲ್ಲಿ ತಮಗಾದ ರಾಜಕೀಯ ಅನ್ಯಾಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರಲಿಲ್ಲ. ಪಕ್ಷದಲ್ಲಿ ಬಹಳಷ್ಟು ಉನ್ನತ ಸ್ಥಾನಗಳನ್ನು ಅನುಭವಿಸಿದ ಉನ್ನತ ನಾಯಕರು ಕಾಂಗ್ರೆಸ್‌‍ ತೊರೆದು ಹೊರ ಹೋದರು. ಪದೇಪದೇ ಅವಕಾಶ ವಂಚಿತರಾದರೂ ಕೂಡ ಖರ್ಗೆಯವರು ಪಕ್ಷದಲ್ಲೇ ಉಳಿಯುವ ಮೂಲಕ ಸೈದ್ಧಾಂತಿಕ ನಿಷ್ಠೆ ಪ್ರದರ್ಶಿಸಿದರು.

ಎಐಸಿಸಿ ಅಧ್ಯಕ್ಷರಾಗಿರುವ ಅವರು ಈಗ ತಮಗೆ ಅವಕಾಶ ತಪ್ಪಿದ್ದರ ಬಗ್ಗೆ ವಿಷಾದ ವ್ಯಕ್ತಪಡಿಸಿದ್ದು ವ್ಯಾಪಕ ಚರ್ಚೆಗೆ ಗಾಸವಾಗಿದೆ.ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನದ ಮೇಲೆ ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್‌, ಸಚಿವರಾದ ಪರಮೇಶ್ವರ್‌, ಎಂ.ಬಿ.ಪಾಟೀಲ್‌ ಸೇರಿದಂತೆ ಅರ್ಧ ಡಜನ್‌ಗೂ ಹೆಚ್ಚಿನ ನಾಯಕರು ಕಣ್ಣಿಟ್ಟಿದ್ದಾರೆ.

ಈ ಹಿಂದೆ ವಿಧಾನಸಭೆ ಚುನಾವಣೆಯಲ್ಲಿ ಡಿಕೆಶಿ ಬಹಿರಂಗ ಹೇಳಿಕೆ ನೀಡಿ ಖರ್ಗೆಯವರು ಮುಖ್ಯಮಂತ್ರಿಯಾಗುವುದಾದರೆ ತಾವು ರೇಸ್‌‍ನಿಂದ ಹಿಂದೆ ಸರಿಯುವುದಾಗಿ ಹೇಳಿದ್ದರು. ಆದರೆ ಆ ವೇಳೆ ಮಲ್ಲಿಕಾರ್ಜುನ ಖರ್ಗೆ ತಾವು ರಾಜಕೀಯಕ್ಕೆ ಮರಳುವುದಿಲ್ಲ ಎಂದಿದ್ದರು. ಈ ಮತ್ತೆ ಖರ್ಗೆಯವರನ್ನು ಎಳೆದು ತರುವ ಮೂಲಕ ಸಿದ್ದರಾಮಯ್ಯನವರ ನಾಯಕತ್ವದ ಅಧಿಪತ್ಯಕ್ಕೆ ಅಡೆತಡೆ ಸೃಷ್ಟಿಸುವ ಪ್ರಯತ್ನಗಳಾಗಿದ್ದವು ಎಂಬ ಚರ್ಚೆಗಳಾಗುತ್ತಿವೆ.

RELATED ARTICLES

Latest News