ಹೈದ್ರಾಬಾದ್, ಫೆ. 13- ಸೆಲಬ್ರಿಟಿ ಕ್ರಿಕೆಟ್ ಲೀಗ್‌ನ 11ನೇ ಆವೃತ್ತಿಗೆ ಈಗಾಗಲೇ ಅದ್ಧೂರಿ ಚಾಲನೆ ಸಿಕ್ಕಿದ್ದು, ನಾಳೆ ಮುತ್ತಿನ ನಗರಿಯಲ್ಲಿ ಕರ್ನಾಟಕ ಬುಲ್ಲೋಜರ್ಸ್ ತಂಡವು ಚೆನ್ನೈ ರೈನೋಸ್ ತಂಡದ ಸವಾಲನ್ನು ಎದುರಿಸಲಿದೆ. ಈ ನಡುವೆ ಸುದೀಪ್ ಸೇರಿದಂತೆ ಸ್ಯಾಂಡಲ್ ವುಡ್ ನ ಕೆಲವು ಸ್ಟಾರ್ ನಟರು ಮೆಟ್ರೋದಲ್ಲಿ ಪ್ರಯಾಣಿಸಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಕರ್ನಾಟಕ ಬುಲ್ಲೋಜರ್ಸ್ ತಂಡದ ನಾಯಕ ಕಿಚ್ಚ ಸುದೀಪ್, ನಿರ್ದೇಶಕ ಅನೂಪ್ ಭಂಡಾರಿ ಸೇರಿದಂತೆ ಕೆಲವು ನಟರುಗಳನ್ನು ಮೆಟ್ರೋ ನಿಲ್ದಾಣದಲ್ಲಿ ಕಂಡ ಅಭಿಮಾನಿಗಳು ಅವರೊಂದಿಗೆ ಸೆಲ್ಪಿ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಗೆಲುವಿನ ಶುಭಾರಂಭ:
ಕಳೆದ ಶನಿವಾರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕಿಚ್ಚ ಸುದೀಪ್ ನಾಯಕತ್ವದ ಕರ್ನಾಟಕ ಬುಲ್ಲೋಜರ್ಸ್, ಅಖಿಲ್ ಅಕ್ಕಿನೇನಿ ಸಾರಥ್ಯದ ತೆಲುಗು ವಾರಿಯರ್ಸ್ ವಿರುದ್ಧ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ. ಈ ಪಂದ್ಯದಲ್ಲಿ ಡಾರ್ಲಿಂಗ್ ಕೃಷ್ಣ ಅದ್ಭುತ ಪ್ರದರ್ಶನ ತೋರಿದ್ದರು.
ಚೆನ್ನೈ ರೈನೋಸ್ ಸವಾಲು:
ನಾಳೆ ಪ್ರೇಮಿಗಳ ದಿನಾಚರಣೆಯಂದು ಹೈದರಾಬಾದ್‌ನ ರಾಜೀವ್ ಗಾಂಧಿ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕರ್ನಾಟಕ ಬುಲ್ಲೋಜರ್ಸ್ ತಂಡವು ಬಲಿಷ್ಠ ಚೆನ್ನೈ ರೈನೋಸ್ ತಂಡದ ಸವಾಲನ್ನು ಎದುರಿಸಲಿದ್ದು, ಈ ಪಂದ್ಯಕ್ಕಾಗಿ ಕ್ರೀಡಾಂಗಣದಲ್ಲಿ ಕಠಿಣ ಅಭ್ಯಾಸ ನಡೆಸಿದ ನಂತರ ಮೆಟ್ರೋದಲ್ಲಿ ಕಿಚ್ಚ ಸುದೀಪ್ ಹಾಗೂ ಇತರ ಆಟಗಾರರು ತಾವು ತಂಗಿರುವ ಹೊಟೇಲ್ ತಲುಪಲು ಪ್ರಯಾಣಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ತಂಡಗಳ ನಡುವಿನ ಪಂದ್ಯ ಎಷ್ಟು ರೋಚಕತೆ ಮೂಡಿಸುತ್ತದೆಯೋ, ಸಿಸಿಎಲ್ ನಲ್ಲಿ ಕರ್ನಾಟಕ ಬುಲ್ಲೋಜರ್ಸ್ ಹಾಗೂ ಚೆನ್ನೈ ರೈನೋಸ್ ನಡುವಿನ ಪಂದ್ಯವು ಕೂಡ ಅಭಿಮಾನಿಗಳಿಗೆ ಮನರಂಜನೆಯ ರಸದೌತಣ ಬಡಿಸಲಿದೆ.