ಬೆಂಗಳೂರು,ಮೇ 24– ಬಮೂಲ್ ಮತ್ತು ಕೆಎಂಎಫ್ ಚುನಾವಣೆಯಲ್ಲಿ ತನ್ನ ಸಹೋದರ ಮಾಜಿ ಸಂಸದ ಡಿ.ಕೆ.ಸುರೇಶ್ ಅವರನ್ನು ಬೆಂಬಲಿಸುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಒಕ್ಕಲಿಗರ ಸಂಘದ ಪದಾಧಿಕಾರಿಗಳೊಂದಿಗೆ ಮನವಿ ಮಾಡಿಕೊಂಡಿದ್ದಾರೆ.
ಒಕ್ಕಲಿಗರ ಸಂಘದ ಅಧ್ಯಕ್ಷ ಕೆಂಚಪ್ಪಗೌಡ ನೇತೃತ್ವದಲ್ಲಿ ಸಂಘದ ನಿಯೋಗ ಇಂದು ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದೆ. ಕಿಮ್ಸೌನ 127 ಕೋಟಿ ರೂ. ಅಸಲು ಮತ್ತು ಬಡ್ಡಿ ಬಾಕಿ ಇದ್ದು, ಅದರಲ್ಲಿ 87 ಕೋಟಿ ರೂ. ಬಡ್ಡಿಯನ್ನು ಸರ್ಕಾರ ಮನ್ನಾ ಮಾಡಿದೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಸಂಘ ಡಿ.ಕೆ.ಶಿವಕುಮಾರ್‌ರನ್ನು ಅಭಿನಂದಿಸಿದೆ.
ಈ ವೇಳೆ ನಿಯೋಗದ ಜೊತೆ ಮಾತುಕತೆ ನಡೆಸಿದ ಡಿ.ಕೆ.ಶಿವಕುಮಾರ್, ಪ್ರಸ್ತುತ ರಾಜಕೀಯವಾಗಿ ನಡೆಯುತ್ತಿರುವ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಡಿ.ಕೆ.ಸುರೇಶ್ ಬೆಂಗಳೂರು ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನಕ್ಕೆ ಕನಕಪುರ ತಾಲ್ಲೂಕಿನಿಂದ ಸ್ಪರ್ಧೆ ಮಾಡಿದ್ದಾರೆ.
ಅವರನ್ನು ಬೆಂಬಲಿಸಿ ಗೆಲ್ಲಿಸಬೇಕು. ಮುಂದೆ ಕೆಎಂಎಫ್ ಅಧ್ಯಕ್ಷ ಚುನಾವಣೆಯಲ್ಲೂ ಬೆಂಬಲ ನೀಡಬೇಕೆಂದು ಮನವಿ ಮಾಡಿದ್ದಾರೆ. ಪದಾಧಿಕಾರಿಗಳಾದ ಡಾ.ಆಂಜನಪ್ಪ, ಎಲ್.ಶ್ರೀನಿವಾಸ್, ಕೋನರೆಡ್ಡಿ ಮತ್ತಿತರರು ನಿಯೋಗದಲ್ಲಿದ್ದರು.