ಬೆಂಗಳೂರು ದಕ್ಷಿಣ, ಸೆ.2– ಮಾಜಿ ಸಚಿವ ಕೆ.ಎನ್. ರಾಜಣ್ಣ ಬಿಜೆಪಿಗೆ ಸೇರಲು ಈಗಾಗಲೇ ಅರ್ಜಿ ಸಲ್ಲಿಸಿದ್ದಾರೆ. ಅವರಿಗೆ ಮಂಪರು ಪರೀಕ್ಷೆ ಮಾಡಿದರೆ ಯಾರ ಜೊತೆಯಲ್ಲಿ ಮಾತುಕತೆಯಾಗಿದೆ ಎಂಬುವುದು ತಿಳಿದು ಬರಲಿದೆ ಎಂದು ಮಾಗಡಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಸಿ. ಬಾಲಕೃಷ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇಲ್ಲದೇ ಇದ್ದಿದ್ದರೆ ಇಷ್ಟೊತ್ತಿಗೆ ರಾಜಣ್ಣ ಬೇರೆ ಪಕ್ಷಕ್ಕೆ ವಲಸೆ ಹೋಗುತ್ತಿದ್ದರು ಎಂದು ಹೇಳಿದರು.
ಕಾಂಗ್ರೆಸ್‌ನಿಂದ ರಾಜಣ್ಣ ಒಂದು ಕಾಲನ್ನು ಈಗಾಗಲೇ ಹೊರಗಿಟ್ಟಿದ್ದಾರೆ. ಪಕ್ಷ ಬಿಟ್ಟು ಹೋಗುವ ಮುನ್ನ ಡಿ.ಕೆ.ಶಿವಕುಮಾರ್ ಅವರ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ರಾಜಣ್ಣ ಅವರನ್ನು ಸಂಪುಟದಿಂದ ವಜಾಗೊಳಿಸಿರುವುದರ ಹಿಂದೆ ಡಿ.ಕೆ.ಶಿವಕುಮಾರ್ ಅವರ ಪಾತ್ರ ಇಲ್ಲ. ಹೈಕಮಾಂಡ್ ನೇರವಾಗಿ ಕ್ರಮ ತೆಗೆದುಕೊಂಡಿದೆ ಎಂದರು.
ಸಚಿವರಾಗಿದ್ದಾಗ ರಾಜಣ್ಣ ಯಾವ ರೀತಿ ನಡೆದುಕೊಂಡಿದ್ದರು? ಅವರ ಮಾತು, ನಡವಳಿಕೆಗಳು ಹೇಗಿದ್ದವು ಎಂದು ಎಲ್ಲರೂ ನೋಡಿದ್ದಾರೆ. ಮಾತು ಮನೆ ಕೆಡೆಸಿತ್ತು. ತೂತು ಒಲೆ ಕೆಡಿಸಿತ್ತು ಎಂಬಂತೆ ರಾಜಣ್ಣ ಅಧಿಕಾರ ಕಳೆದುಕೊಂಡರು. ಇದಕ್ಕೆ ನಮ ನಾಯಕರ ಮೇಲೆ ದೂಷಣೆ ಮಾಡುವುದು ಸರಿಯಲ್ಲ ಎಂದರು.
ರಾಜಣ್ಣ ಈಗಾಗಲೇ ಬಿಜೆಪಿಯ ಪ್ರಭಾವಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ. ದೆಹಲಿ ಮಟ್ಟದಲ್ಲೂ ಚರ್ಚೆಗಳಾಗಿವೆ. ಮಂಪರು ಪರೀಕ್ಷೆಗೊಳಪಡಿಸಿದರೆ, ಯಾರ ಸಂಪರ್ಕದಲ್ಲಿದ್ದಾರೆ ಎಂದು ಗೊತ್ತಾಗಲಿದೆ ಎಂದರು.
ಕೆ.ಎನ್.ರಾಜಣ್ಣ ನಿನ್ನೆಯಷ್ಟೇ ಸುದ್ದಿಗಾರರೊಂದಿಗೆ ಮಾತನಾಡಿ, ನಾನು ಯಾವ ಪಕ್ಷಕ್ಕೂ ಹೋಗುವುದಿಲ್ಲ ಕಾಂಗ್ರೆಸ್‌ನಲ್ಲೇ ಇರುತ್ತೇನೆ. ಸದ್ಯಕ್ಕೆ ಅಸತ್ಯ ಮೇಲುಗೈ ಆಗಿದ್ದರೂ, ಕೊನೆಗೆ ಸತ್ಯಕ್ಕೆ ಜಯ ಸಿಗುತ್ತದೆ. ನಾನು ಈ ಮೊದಲು ಮೂರು ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿ , ಹನಿಟ್ರ್ಯಾಪ್ ಬಗ್ಗೆ ಮಾತನಾಡಿದ್ದು, ಸೇರಿದಂತೆ ಹಲವಾರು ವಿಚಾರಗಳು ತಮ ವಿರುದ್ಧ ಕೆಲಸ ಮಾಡಿವೆ ಎಂದಿದ್ದರು.
ಅದರ ಬೆನ್ನಲ್ಲೇ ಹೆಚ್.ಸಿ. ಬಾಲಕೃಷ್ಣ ಇಂದು ರಾಜಣ್ಣ ಅವರು ಪಕ್ಷಾಂತರಕ್ಕೆ ಸಿದ್ಧವಾಗಿದ್ದಾರೆ ಎಂದು ಹೇಳಿರುವುದು ತೀವ್ರ ಕುತೂಹಲ ಕೆರಳಿಸಿದೆ.