ತುಮಕೂರು,ಜು.27- ಸಿದ್ದರಾಮಯ್ಯರವರ ಮೇಲೆ ಮಾಡುವ ಆರೋಪ ಅಹಿಂದ ವರ್ಗಗಳ ಮೇಲೆ ಮಾಡುವ ಆರೋಪ, ಮುಡಾದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಸೈಟು ಪಡೆದವರೇ ಇಂದು ಆರೋಪ ಮಾಡುತ್ತಿರುವುದು ಸಾಧುವಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.
ತಮ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇಂದು ಮಾತನಾಡಿದ ಅವರು, ಯಡಿಯೂರಪ್ಪ ನವರ ಕಾಲದಲ್ಲಿ ಮುಡಾದಲ್ಲಿ ಏನು ಆಗಿದೆ? ಆರೋಪ ಮಾಡುವವರೇ ಮುಡಾದ ಲನುಭವಿಗಳು ಸುಳ್ಳು ದಾಖಲಾತಿ ನೀಡಿ ಸೈಟು ಪಡೆದವರೆ ಇಂದು ಪ್ರಶ್ನೆ ಮಾಡುವುದು ಸಾದುವಲ್ಲ ಎಂದು ನುಡಿದರು.
ಸಿದ್ದರಾಮಯ್ಯನವರ ಕ್ಲೀನ್ ಇಮೇಜ್‌ಗೆ ಧಕ್ಕೆ ತರುವ ಯೋಜಿತ ವಾದ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗದವರು ಮುಖ್ಯಮಂತ್ರಿಗಳು ಆದಾಗ ಅವರನ್ನು ಕಳಂಕಿತರು ಎಂದು ಹೇಳುವ ಇತಿಹಾಸವನ್ನು ಮುಂದುವರೆದ ಜನಾಂಗದವರು ಮಾಡುತ್ತಿರುವುದು ಹೀನ ಕೃತ್ಯ ಎಂದಿದ್ದಾರೆ.
ಬಿಜೆಪಿಯವರು ಮುಡಾ ಪ್ರಕರಣ ಮುಂದಿಟ್ಟು ಕೊಂಡು ಮೈಸೂರು ವರೆಗೆ ರ್ಯಾಲಿ ಮಾಡುತ್ತೇವೆ ಎಂದಿದ್ದಾರೆ. ಅವರು ಪ್ರತಿಭಟನಾ ರ್ಯಾಲಿ ಮಾಡಿದರೆ ನಾವೂ ಸಹ ತುಮಕೂರು ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಅಹಿಂದದವರು ಪ್ರತಿಭಟನೆ ಮಾಡುತ್ತೇವೆ ಎಂದಿರುವ ರಾಜಣ್ಣ ಅವರು ಸಿದ್ದರಾಮಯ್ಯನವರ ಹೆಸರಿಗೆ ಮಸಿ ಬಳಿಯುವ ಕೆಲಸ ಬಿಜೆಪಿ ಮಾಡುತ್ತಿದೆ ಎಂದು ಪ್ರಭಲವಾಗಿ ಪ್ರತಿಪಾದಿಸಿದರು.
ತಾಲ್ಲೂಕು, ಜಿಲ್ಲಾ, ರಾಜ್ಯ ಸಹಕಾರ ಸಂಘಗಳಲ್ಲಿ ಪ.ಜಾತಿ/ಪ ಪಂಗಡ, ಹಿಂದುಳಿದವರಿಗೆ ಹಾಗೂ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಸುತ್ತೇವೆ.
ನೇಮಕಾತಿಯಲ್ಲಿ ಸಹ ರೋಸ್ಟರ್ ಮಾಡಲಾಗುವುದು. ಸಹಕಾರಿ ಚುನಾವಣೆಯಲ್ಲಿ ಸಹ ಸ್ಪರ್ಧೆ ನೀಡಲು ಅವಕಾಶ ಮಾಡಿಕೊಡಲಾಗುವುದು ಎಂದ ಅವರು, ಅತಿವೃಷ್ಠಿಯಿಂದ ಜನ ತತ್ತರಿಸಿದ್ದಾರೆ. ಇದರ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಯಾಗಬೇಕಾಗಿತ್ತು. ಬಿಜೆಪಿ ಆ ಕೆಲಸ ಮಾಡದೆ ಕಾಲಹರಣ ಮಾಡಿದೆ ಎಂದು ಆರೋಪಿಸಿದರು.
ವಾಲೀಕಿ ಅಭಿವೃದ್ಧಿ ನಿಗಮದಲ್ಲಿ ಆಗಿರುವ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ. ಈಗಾಗಲೇ ಮೂರು ತನಿಖಾ ಸಂಸ್ಥೆಗಳು ತನಿಖೆ ಕೈಗೊಂಡಿದ್ದಾರೆ. ಮೂಡಾದಿಂದ ಯಾರು? ಯಾರು? ಸೈಟುಗಳು ತೆಗೆದುಕೊಂಡಿದ್ದಾರೆ ಅವರೆಲ್ಲಾ ವಾಪಸ್ಸು ನೀಡಲಿ, ಅದು ಬಿಟ್ಟು ಒಬ್ಬರ ಮೇಲೆ ಗದಾಪ್ರಹಾರ ನಡೆಸುವುದು ಸರಿಯಲ್ಲ ಎಂದರು.
ಬಿಜೆಪಿಯೇತರ ಸರ್ಕಾರವನ್ನು ಕೆಳಗಿಳಿಸುವುದೆ ಬಿಜೆಪಿಯ ಉದ್ದೇಶ. ಜಾರ್ಖಂಡ್ ಮತ್ತು ಅರವಿಂದ ಕೇಜ್ರಿವಾಲರ ಮೇಲೆ ನಡೆಯುತ್ತಿರುವುದು ಏನು? ಕೇಂದ್ರ ಸರ್ಕಾರವು ತನಿಖಾ ಸಂಸ್ಥೆ ಗಳನ್ನು ದುರುಪಯೋಗ ಮಾಡಿಕೊಂಡಿದೆ. ಶೇ 90/ ರಷ್ಟು ಬಿಜೆಪಿಯೇತರರ ಮೇಲೆ ತನಿಖೆ ನಡೆಸಲಾಗುತ್ತಿದೆ ಎಂದರು.
ಕಾಂಗ್ರೆಸ್ ಮುಖಂಡ ವೇಣುಗೋಪಾಲ ಮಾತನಾಡಿ, ಸಿದ್ದರಾಮಯ್ಯನವರ ಮೇಲೆ ಇಲ್ಲ ಸಲ್ಲದ ಆರೋಪವನ್ನು ಮಾಡುವ ವಿಜಯೇಂದ್ರ ಮೊದಲು ಬುದ್ಧಿ ಕಲಿಯಲಿ. ಯಡಿಯೂರಪ್ಪ ಜೈಲಿಗೆ ಹೋಗಲು ಇದೇ ವಿಜಯೇಂದ್ರ ಕಾರಣ ಅಲ್ಲವೇ? ಭೂತದ ಬಾಯಿಂದ ಭಗವದ್ಗೀತೆ ಕೇಳುವ ಅನಿವಾರ್ಯ ನಮಗಿಲ್ಲ ಎಂದು ಹೇಳಿದರು. ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡ ಟಿ.ಪಿ.ಮಂಜುನಾಥ್ ಹಾಜರಿದ್ದರು.