ಯಾದಗಿರಿ,ಮಾ.2- ಹಾಲುಮತದವರ ಕೈಯಲ್ಲಿ ರಾಜ್ಯದ ಆಡಳಿತವಿದೆ. ಬಿಡಿಸಿಕೊಳ್ಳುವುದು ಅಷ್ಟು ಸುಲಭ ಅಲ್ಲ ಎಂದು ಹೇಳುವ ಮೂಲಕ ಕೋಡಿಹಳ್ಳಿ ಮಠದ ಶ್ರೀ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರಾಜ್ಯ ರಾಜಕೀಯದ ಭವಿಷ್ಯದ ಬಗ್ಗೆ ಭಾರೀ ಕುತೂಹಲಗಳಿವೆ. ಸಾಂಪ್ರದಾಯಿಕವಾಗಿರುವ ಮಾತಿನ ಅನುಸಾರ ಹಾಲುಮತದ ಸಮುದಾಯದ ಪ್ರಾಚೀನ ಕಾಲದಿಂದಲೂ ಕಾಡಿನಲ್ಲಿದ್ದು, ಕುರಿಯನ್ನು ಸಾಕಿ, ಹಿಕ್ಕೆಯಲ್ಲಿ ಲಿಂಗ ಕಂಡು ದೈವಾರಾಧನೆ ಮಾಡಿಕೊಂಡು ಬಂದಿದೆ.
ಪ್ರಕೃತಿ, ಗಾಳಿ, ಭೂಮಿ ಮೇಲೆ ಅವರು ಕಂಡದ್ದು, ತಿಳಿದದ್ದು, ಕೇಳಿದ್ದು, ಅನುಭವಿಸಿದ್ದನ್ನು ಹೇಳುತ್ತಾ ಬಂದಿದ್ದಾರೆ. ಕೆಲವು ಕಡೆ ಕುರುಬರ ವಟ್ಟು ಎಂದಿದ್ದಾರೆ. ಅದು ಕುರುಹಿನ ರಟ್ಟು. ಮುಂದೆ ಏನಾಗುತ್ತದೆ ಎಂದು ಹೇಳುವ ಸಂಗತಿಯಾಗಿದೆ ಎಂದರು. ಇಂದು ಹಾಲುಮತದ ಕೈನಲ್ಲಿ ರಾಜ್ಯದ ಅಧಿಕಾರ ಇದೆ. ಬಿಡಿಸಿಕೊಳ್ಳುವುದು ಅಷ್ಟು ಸುಲಭದ ವಿಚಾರವಲ್ಲ ಎಂದು ಹೇಳಿದರು.
ಭವಿಷ್ಯವನ್ನು 2 ಭಾಗಗಳನ್ನಾಗಿ ಪರಿಗಣಿಸಲಾಗುತ್ತದೆ. ಒಂದು ಸಂಗ್ರಾಂತಿಯ ಭವಿಷ್ಯ, ಮತ್ತೊಂದು ಯುಗಾದಿಯ ಭವಿಷ್ಯವಾಗಿದೆ. ಸಂಕ್ರಾಂತಿಯ ಭವಿಷ್ಯ ರಾಜ ಮಹಾರಾಜರಿಗೆ, ದೊಡ್ಡದೊಡ್ಡ ವ್ಯಾಪಾರಿಗಳಿಗೆ ಸಂಬಂಧಿಸಿದ್ದಾಗಿದೆ.
ಯುಗಾದಿಯ ಭವಿಷ್ಯ ಚಂದ್ರಮಾನ ಆಧಾರಿತವಾಗಿ ಮಳೆ, ನಾಡಿನ ಸುಭೀಕ್ಷತೆ, ಆಗುಹೋಗುಗಳು, ನಾಡಿನ ಆಳ್ವಿಕೆ, ಅವಘಡಗಳು, ದುಃಖ ದುಮ್ಮಾನಗಳು ಯುಗಾದಿಯ ಸಂವತ್ಸರ ಫಲದಲ್ಲಿ ವಿಶ್ಲೇಷಿಸಲಾಗುತ್ತದೆ.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ತೊಂದರೆ, ತಾಪತ್ರಯ ಇಲ್ಲ. ಮಳೆ-ಬೆಳೆಗಳು ಉತ್ತಮವಾಗಿ ಸುಭೀಕ್ಷತೆ ನೆಲೆಸಲಿದ್ದು, ಯಾವುದೇ ಕೊರತೆ ಕಾಣುತ್ತಿಲ್ಲ ಎಂದರು.
ಜಾಗತಿಕವಾಗಿ ಸಾಕಷ್ಟು ಅಜಾಗರೂಕತೆ ಇದ್ದು, ತೊಂದರೆ ಎದುರಾಗಲಿದೆ. ಕಳೆದ ವರ್ಷಕ್ಕಿಂತಲೂ ಹೆಚ್ಚಿನ ಭೀಕರತೆ ಕಂಡುಬರಲಿದೆ ಎಂದು ಹೇಳಿದ್ದಾರೆ.