ನವದೆಹಲಿ, ಜೂ. 8– ಮುಂಬರುವ ಐಪಿಎಲ್ ಟೂರ್ನಿಯಲ್ಲಿ ದಿಗ್ಗಜರಾದ ವಿರಾಟ್ ಕೊಹ್ಲಿ , ರೋಹಿತ್ ಶರ್ಮಾ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರು ಆಡುವುದು ನಿಶ್ಚಿತ ಎಂದು ವಿಶ್ವಕಪ್ ನಾಯಕ ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.
2025ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಚೊಚ್ಚಲ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಕಿಂಗ್ ಕೊಹ್ಲಿಯ ಪಾತ್ರ ಅಪಾರವಾಗಿದೆ. ಅದೇ ರೀತಿ ಮುಂಬೈ ಇಂಡಿಯನ್ಸ್ ಪರ ರೋಹಿತ್ ಶರ್ಮಾ ಅವರು ರನ್ ಹೊಳೆ ಹರಿಸಿದ್ದಾರೆ. ಸಿಎಸ್ಕೆ ನಾಯಕ ಋತುರಾಜ್ ಗಾಯಕ್ವಡ್ ಗಾಯಗೊಂಡ ನಂತರ ತಂಡದ ಸಾರಥ್ಯ ವಹಿಸಿದ್ದ ಮಹೇಂದ್ರ ಸಿಂಗ್ ಧೋನಿಯು ಕೂಡ ಉತ್ತಮ ನಾಯಕತ್ವ ತೋರಿಸಿದ್ದು, ಮುಂದಿನ ಸೀಸನ್ ಆಡುವ ಸಾಮರ್ಥ್ಯ ನಮಲ್ಲಿದೆ ಎಂದು ತೋರಿಸಿದ್ದಾರೆ.
ಧೋನಿ ಸಿಎಸ್ಕೆ ಕಿಂಗ್:
ಕಳೆದ ಕೆಲವು ಸೀಸನ್ ಗಳು ಮುಗಿದ ನಂತರ ಮಹೇಂದ್ರ ಸಿಂಗ್ ಧೋನಿ ಅವರು ನಿವೃತ್ತಿ ಘೋಷಿಸುತ್ತಾರೆ ಎಂಬ ಮಾತುಗಳು ಕೇಳಿಬರುತ್ತದೆ. ಆದರೆ ಎಂ.ಎಸ್.ಧೋನಿ ವಿಶ್ವದೆಲ್ಲೆಡೆ ತಮ ಅಭಿಮಾನಿಗಳ ಬಳಗವನ್ನು ಹೊಂದಿದ್ದಾರೆ. ಆದ್ದರಿಂದಲೇ ಎಂ.ಎ.ಚಿದಂಬರಂ ಕ್ರೀಡಾಂಗಣವಲ್ಲದೆ ಇತರ ಮೈದಾನಗಳಲ್ಲಿ ಆಡಿದಾಗಲೂ ಆ ತಂಡಕ್ಕೆ ಅಭಿಮಾನಿಗಳಿಂದ ಅಪಾರ ಬೆಂಬಲ ದೊರೆಯುತ್ತದೆ, ಆದ್ದರಿಂದ ಎಂ.ಎಸ್.ಧೋನಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಿಜವಾದ ಕಿಂಗ್ ಆಗಿದ್ದಾರೆ ಎಂದು ಕ್ಲಾರ್ಕ್ ಗುಣಗಾನ ಮಾಡಿದ್ದಾರೆ.
ಮಹೇಂದ್ರ ಸಿಂಗ್ ಧೋನಿ ಆಡುತ್ತಿರುವುದಕ್ಕೆ ಸಿಎಸ್ಕೆ ಮೌಲ್ಯವು ಹೆಚ್ಚಾಗಿರುವುದರಿಂದ ಆತ ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಆದರೂ ಸುದೀರ್ಘ ಕಾಲದವರೆಗೆ ತಂಡದ ಪರ ಆಡಲಿ ಎಂದು ಆ ತಂಡದ ಫ್ರಾಂಚೈಸಿಗಳು ಬಯಸುತ್ತಿದ್ದಾರೆ ಎಂದು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅವರು ಹೇಳಿದ್ದಾರೆ.