ಬೆಂಗಳೂರು,ಜ.14– ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಹೈಕಮಾಂಡ್ ಅನ್ನು ಕಡೆಗಣಿಸಿ ಪಕ್ಷದ ಹಿಂದುಳಿದ ವರ್ಗಗಳ ಘಟಕಕ್ಕೆ ಅಧ್ಯಕ್ಷರನ್ನು ನೇಮಿಸಲು ಮುಂದಾಗಿದ್ದಾರೆ ಎಂಬ ದೂರು ಹೈಕ ಮಾಂಡ್ಗೆ ತಲುಪಿದ್ದು, ತಕ್ಷಣವೇ ನೇಮ ಕಾತಿ ಆದೇಶಕ್ಕೆ ತಡೆ ನೀಡಲಾಗಿದೆ.
ಹೈಕಮಾಂಡ್ಗೆ ಕಾಂಗ್ರೆಸ್ನ ಕೆಲ ಶಾಸಕರು ದೂರು ನೀಡಿದ್ದು, ಅದನ್ನು ಮಾನ್ಯ ಮಾಡಲಾಗಿದೆ. ಕಾಂಗ್ರೆಸ್ ಶಾಸಕ ಆಕ್ಷೇಪವನ್ನು ಪರಿಗಣಿಸಿ ಎಐಸಿಸಿಯ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಕ್ಯಾಪ್ಟನ್ ಅಜಯ್ಸಿಂಗ್ ಯಾದವ್ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಜ.12 ರಂದು ಪತ್ರ ಬರೆದಿದ್ದಾರೆ.
ಜ.9 ರಂದು ವಿಧಾನಪರಿಷತ್ನ ಸದಸ್ಯ ಶ್ರೀನಿವಾಸ್ ಅವರನ್ನು ಕೆಪಿಸಿಸಿಯ ಹಿಂದುಳಿದ ವರ್ಗಗಳ ಘಟಕದ ಪ್ರಭಾರಿ ಅಧ್ಯಕ್ಷರನ್ನಾಗಿ ನೇಮಿಸಿರುವ ಆದೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಪೂರ್ವಾನುಮತಿ ಪಡೆದಿಲ್ಲ. ಹೀಗಾಗಿ ನೇಮಕಾತಿ ಆದೇಶಕ್ಕೆ ತಡೆ ನೀಡಲಾಗಿದೆ.
ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷರ ನೇಮಕಾತಿಗೆ ರಾಷ್ಟ್ರೀಯ ಅಧ್ಯಕ್ಷರ ಅನುಮತಿ ಪಡೆಯಲು ಸೂಕ್ತ ಪ್ರಸ್ತಾವನೆಯನ್ನು ರವಾನಿಸುವಂತೆ ಪತ್ರದಲ್ಲಿ ಸೂಚಿಸಿದ್ದಾರೆ.
ಈ ಮೊದಲು ಓಬಿಸಿ ಘಟಕಕ್ಕೆ ಮಧು ಬಂಗಾರಪ್ಪ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದರು.
ಪ್ರಸ್ತುತ ಅವರು ಸಚಿವರಾದ ಹಿನ್ನೆಲೆಯಲ್ಲಿ ಬದಲಿ ಅಧ್ಯಕ್ಷರ ನೇಮಕಾತಿವರೆಗೂ ಪ್ರಭಾರಿಯಾಗಿ ಟಿ.ಡಿ.ಶ್ರೀನಿವಾಸ್ ಅವರನ್ನು ಕೆಪಿಸಿಸಿ ಅಧ್ಯಕ್ಷರು ನೇಮಿಸಿದ್ದರು. ಬಿಜೆಪಿಯಿಂದ ಕಳೆದ ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ಗೆ ವಲಸೆ ಬಂದ ಮಾಜಿ ಶಾಸಕರಾದ ಪೂರ್ಣಿಮಾ ಅವರ ಪತಿಯಾದ ಟಿ.ಡಿ.ಶ್ರೀನಿವಾಸ್ರನ್ನು ವಿಧಾನಪರಿಷತ್ನ ಸದಸ್ಯರಾಗಿ ಆಯ್ಕೆ ಮಾಡಲಾಗಿದೆ.
ವಲಸೆ ಬಂದ ನಾಯಕರಿಗೆ ಹೆಚ್ಚಿನ ಮಣೆ ಹಾಕಲಾಗುತ್ತಿದೆ ಎಂದು ಕಾಂಗ್ರೆಸ್ನ ಒಳವಲಯದಲ್ಲಿ ಆಕ್ಷೇಪಗಳು ತೀವ್ರವಾಗಿವೆ.ಈ ಹಿನ್ನೆಲೆಯಲ್ಲಿ ಕೆಲವರು ಹೈಕಮಾಂಡ್ಗೆ ನೇರವಾಗಿ ದೂರು ಸಲ್ಲಿಸಿದ್ದು, ಶ್ರೀನಿವಾಸ್ ನೇಮಕಾತಿಯನ್ನು ವಿರೋಧಿಸಿದ್ದರು. ಅದು ಫಲ ನೀಡಿದ್ದು, ಕೆಪಿಸಿಸಿ ಅಧ್ಯಕ್ಷರಿಗೆ ಹಿನ್ನಡೆಯಾದಂತಾಗಿದೆ.