Sunday, September 8, 2024
Homeರಾಜ್ಯಪಕ್ಷ ಸಂಘಟನೆಯಲ್ಲಿ ಯಾವುದೇ ರಾಜಿ ಇಲ್ಲ: ಡಿಸಿಎಂ ಎಚ್ಚರಿಕೆ

ಪಕ್ಷ ಸಂಘಟನೆಯಲ್ಲಿ ಯಾವುದೇ ರಾಜಿ ಇಲ್ಲ: ಡಿಸಿಎಂ ಎಚ್ಚರಿಕೆ

ಬೆಂಗಳೂರು,ಜು.20- ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಗೆಲುವು ಸಾಧಿಸುವ ನಿಟ್ಟಿನಲ್ಲಿ ಪ್ರತಿಷ್ಠೆಯನ್ನು ಬದಿಗಿಟ್ಟು ಕೆಲಸ ಮಾಡುವಂತೆ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕಟ್ಟಪ್ಪಣೆ ಮಾಡಿದ್ದಾರೆ.

ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿಂದು ರಾಜ್ಯದ ಎಲ್ಲಾ ಬ್ಲಾಕ್ ಹಾಗೂ ಜಿಲ್ಲಾ ಕಾಂಗ್ರೆಸ್‍ನ ಅಧ್ಯಕ್ಷರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಅವರು, ಕೆಲಸ ಮಾಡದೇ ಲೆಟರ್‍ಹೆಡ್‍ಗಾಗಿ ಪದಾಧಿಕಾರಿಗಳ ಸ್ಥಾನ ಪಡೆದಿರುವವರನ್ನು ಮುಲಾಜಿಲ್ಲದೇ ಕಿತ್ತೊಗೆಯುವುದಾಗಿ ಎಚ್ಚರಿಸಿದ್ದಾರೆ.

ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಾಗಲಿದೆ. ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸಲು ಸ್ಥಳೀಯ ನಾಯಕತ್ವ ಬಹಳ ಮುಖ್ಯ. ಹೀಗಾಗಿ ಪಕ್ಷದ ಪದಾಧಿಕಾರಿಗಳು, ಶಾಸಕರು, ಸಂಸದರು, ಸಚಿವರು ಪರಸ್ಪರ ಅನ್ಯೋನ್ಯತೆಯಿಂದ ಕೆಲಸ ಮಾಡಬೇಕು. ಶಾಸಕರು, ಪಕ್ಷದ ಅಧ್ಯಕ್ಷರು ಸಹಕಾರ ನೀಡುವುದಿಲ್ಲ ಎಂಬ ಆರೋಪ ಮಾಡುತ್ತಿದ್ದಾರೆ. ಇದು ಸರಿಯಲ್ಲ. ವ್ಯಕ್ತಿಗತ ಪ್ರತಿಷ್ಠೆಗಳೇನೇ ಇದ್ದರೂ ಅದನ್ನು ಬದಿಗಿಟ್ಟು ಪಕ್ಷದ ಹಿತದೃಷ್ಟಿಯಿಂದ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು ಎಂದು ಹೇಳಿದರು.

ಕೆಲವು ಕಡೆ ಪಕ್ಷ ಸಂಘಟನೆ ಕಾರ್ಯ ನೀರಸವಾಗಿದೆ. ಹಲವು ಬಾರಿ ಎಚ್ಚರಿಕೆ ನೀಡಿದ ಹೊರತಾಗಿಯೂ ನಾಯಕರು ಎಚ್ಚೆತ್ತುಕೊಂಡಿಲ್ಲ. ಇನ್ನು ಮುಂದೆ ಪದೇ ಪದೇ ಎಚ್ಚರಿಕೆ ನೀಡುತ್ತಾ ಕುಳಿತುಕೊಳ್ಳುವುದಿಲ್ಲ. ಕೆಲಸ ಮಾಡದೇ ಇರುವವರನ್ನು ನಿರ್ದಾಕ್ಷಿಣ್ಯವಾಗಿ ಜವಾಬ್ದಾರಿಯಿಂದ ವಿಮುಕ್ತಿಗೊಳಿಸಲಾಗುವುದು ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದೆ. ಮುಂದಿನ ಬಿಬಿಎಂಪಿ, ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಚುನಾವಣೆ ಪ್ರತಿಷ್ಠೆಯ ಪ್ರಶ್ನೆ. ಪಕ್ಷದ ಅಭ್ಯರ್ಥಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿಕೊಂಡು ಸ್ಥಳೀಯ ಸಂಸ್ಥೆಗಳಲ್ಲಿ ಅಧಿಕಾರ ಹಿಡಿಯುವುದು ನಮ್ಮ ಆದ್ಯತೆ. ಈ ವಿಚಾರದಲ್ಲಿ ಯಾವುದೇ ರಾಜಿ ಇಲ್ಲ ಎಂದು ತಾಕೀತು ಮಾಡಿದ್ದಾರೆ.

ಹೆಸರಿಗಷ್ಟೇ ಅಧ್ಯಕ್ಷರು, ಪದಾಧಿಕಾರಿಗಳಾಗಿದ್ದುಕೊಂಡು ಬೂತ್‍ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡದಿದ್ದರೆ ಸಂದರ್ಭ ಬಂದಾಗ ಅಧಿಕಾರ ಕೊಡಿ ಎಂಬುವವರನ್ನು ಇನ್ನು ಮುಂದೆ ಪರಿಗಣಿಸುವುದಿಲ್ಲ. ಪ್ರತಿ ಹಂತದಲ್ಲೂ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರ ಅಭಿಪ್ರಾಯ ಪಡೆದ ಬಳಿಕವೇ ಅಧಿಕಾರ ಹಂಚಿಕೆ ಮಾಡಲಾಗುತ್ತದೆ. ಕೆಲಸ ಮಾಡದೇ ಗುಂಪುಗಾರಿಕೆ ಮಾಡಿಕೊಂಡಿರುವವರಿಗೆ ಯಾವುದೇ ಅವಕಾಶ ಸಿಗುವುದಿಲ್ಲ. ಪಕ್ಷದ ಪದಾಧಿಕಾರಿಗಳ ಹುದ್ದೆಯಲ್ಲೂ ಮುಂದುವರೆಯಲು ಸಾಧ್ಯವಿಲ್ಲ. ನನ್ನನ್ನೂ ಒಳಗೊಂಡಂತೆ ಎಲ್ಲರೂ ಪಕ್ಷದ ಸಂಘಟನೆಗೆ ಮೊದಲ ಆದ್ಯತೆ ನೀಡಬೇಕು ಎಂದು ನಿರ್ದೇಶಿಸಿದ್ದಾರೆ.

ಇನ್ನು ಮುಂದೆ ಕಾಂಗ್ರೆಸ್ ಕಚೇರಿಗೆ ಸಚಿವರು ನಿಯಮಿತವಾಗಿ ಭೇಟಿ ನೀಡುತ್ತಿರುತ್ತಾರೆ. ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರು ನೋಂದಣಿ ಮಾಡಿಸಿಕೊಂಡು ಸಚಿವರನ್ನು ಭೇಟಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ಅರ್ಜಿ ನೀಡಿದವರ ಸಮಸ್ಯೆಗಳಿಗೆ ಪರಿಹಾರ ದೊರೆತಿರುವ ಬಗ್ಗೆ ಜಿಲ್ಲಾಧ್ಯಕ್ಷರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಗಮನ ಹರಿಸಬೇಕು.

ಮಳೆಗಾಲದಿಂದಾಗಿ ನೆರೆ ಪರಿಸ್ಥಿತಿ ಉಂಟಾಗಿದೆ. ಸಮಸ್ಯೆ ಇರುವ ಸ್ಥಳಗಳಿಗೆ ಭೇಟಿ ನೀಡಿ ಕಾರ್ಯಕರ್ತರ ಜೊತೆಗೂಡಿ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಬೇಕು ಎಂದು ಸಲಹೆ ನೀಡಿದ್ದಾರೆ. ನಿಗಮ ಮಂಡಳಿಗಳಿಗೆ ಬಾಕಿ ಇರುವ ಅಧ್ಯಕ್ಷರ ಹುದ್ದೆಗಳಿಗೆ ಹಾಗೂ ಸದಸ್ಯರ ಸ್ಥಾನಕ್ಕೆ ನೇಮಕಾತಿ ಪ್ರಕ್ರಿಯೆಗಳು ನಡೆಯುತ್ತಿವೆ. ಪಕ್ಷಕ್ಕಾಗಿ ಕೆಲಸ ಮಾಡಿದ ಪ್ರಾಮಾಣಿಕರನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸಲು ಸಹಕಾರ ನೀಡುವಂತೆ ಡಿ.ಕೆ.ಶಿ ಮನವಿ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷರಾದ ವಿನಯ್‍ಕುಮಾರ್ ಸೊರಕೆ, ಕಾರ್ಯಾಧ್ಯಕ್ಷರಾದ ವಿನಯ್ ಕುಲಕರ್ಣಿ, ಜಿ.ಸಿ.ಚಂದ್ರಶೇಖರ್, ಮಂಜುನಾಥ್ ಭಂಡಾರಿ, ತನ್ವೀರ್ ಸೇಠ್, ವಸಂತಕುಮಾರ್, ಮಾಧ್ಯಮ ಘಟಕದ ಅಧ್ಯಕ್ಷ ರಮೇಶ್ ಬಾಬು, ಪ್ರಧಾನ ಕಾರ್ಯದರ್ಶಿ ವಿಜಯ್ ಮುಳಗುಂದ್ ಮತ್ತಿತರರು ಉಪಸ್ಥಿತರಿದ್ದರು.

ಇದಕ್ಕೂ ಮುನ್ನ ಪಕ್ಷದ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವನ್ನು ಪುನರ್ ಸಂಘಟಿಸಲು, ಕೆಲ ನಾಯಕರಿಗೆ ಬಡ್ತಿ ನೀಡಲು ಹಾಗೂ ನಿಷ್ಠಾವಂತರನ್ನು ಗುರುತಿಸಿ ಅಧಿಕಾರದ ಅವಕಾಶ ನೀಡುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದ್ದಾರೆ.

ಬಿಬಿಎಂಪಿ, ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯಿತಿಗಳಿಗೆ ಚುನಾವಣೆ ನಡೆಸುವ ಸಂಬಂಧಪಟ್ಟಂತೆ ಯಾವ ಕ್ಷಣದಲ್ಲಾದರೂ ನ್ಯಾಯಾಲಯದ ಆದೇಶ ಬರಬಹುದು. ಅದಕ್ಕೂ ಪೂರ್ವ ಸಿದ್ಧತೆ ಮಾಡಿಕೊಡಲಾಗಿದೆ ಎಂದು ಹೇಳಿದರು. ಪಕ್ಷಕ್ಕೆ ಸ್ವಂತ ಕಚೇರಿ, ಕಟ್ಟಡ ನೀಡಬೇಕು. ಒಂದು ವೇಳೆ ಬಾಡಿಗೆ ಕಟ್ಟಡವಿದ್ದರೆ ಶಾಸಕರು, ಸಚಿವರಾದಿಯಾಗಿ ಜಿಲ್ಲಾ ನಾಯಕರು ಪಕ್ಷದ ಕಚೇರಿಯಲ್ಲೇ ಸಭೆ ನಡೆಸಬೇಕು. ಯಾವುದೇ ಶಾಸಕರು ತಮ್ಮ ಮನೆಯಲ್ಲಿ ಪಕ್ಷದ ಸಭೆಗಳನ್ನು ನಡೆಸಬಾರದು ಎಂದು ಆದೇಶಿಸಿದರು.

RELATED ARTICLES

Latest News