Wednesday, March 5, 2025
Homeರಾಜ್ಯಕೆಪಿಎಸ್‌‍ಸಿ ನೇಮಕಾತಿ ಲೋಪ: ವಿಧಾನಸಭೆಯಲ್ಲಿ ಪ್ರತಿಧ್ವನಿ

ಕೆಪಿಎಸ್‌‍ಸಿ ನೇಮಕಾತಿ ಲೋಪ: ವಿಧಾನಸಭೆಯಲ್ಲಿ ಪ್ರತಿಧ್ವನಿ

ಬೆಂಗಳೂರು,ಮಾ.4- ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ವಿಳಂಬ ಪರೀಕ್ಷೆ ನಡೆಸುವಲ್ಲಿ ಎಡವಟ್ಟು, ವ್ಯವಸ್ಥೆಯ ವೈಫಲ್ಯದ ಆರೋಪದ ಕುರಿತ ವಿಚಾರ ವಿಧಾನಸಭೆಯಲ್ಲಿಂದು ಪ್ರತಿಧ್ವನಿಸಿತು.
ವಿರೋಧಪಕ್ಷದ ನಾಯಕ ಆರ್‌.ಅಶೋಕ್‌, ನಿಲುವಳಿ ಸೂಚನೆ ಪೂರ್ವಭಾವಿ ಪ್ರಸ್ತಾಪ ಮಾಡುತ್ತಾ 2 ಲಕ್ಷ ಅಭ್ಯರ್ಥಿಗಳಿಗೆ ಕೆಪಿಎಸ್‌‍ಸಿಯಿಂದ ತೊಂದರೆಯಾಗಿದೆ. ಸರ್ಕಾರದ 30 ಕೋಟಿ ರೂ. ಹಣ ಖರ್ಚಾಗಿದೆ. ಕನ್ನಡ ಭಾಷೆಗೆ ಅಪಮಾನವಾಗಿದೆ ಎಂದು ಆರೋಪಿಸಿದರು.

ನಿರುದ್ಯೋಗ ಪದವೀಧರರ ಪಾಲಿಗೆ ಆಶಾಕಿರಣವಾಗಬೇಕಿದ್ದ ಕೆಪಿಎಸ್‌‍ಸಿ ಅವ್ಯವಸ್ಥೆಗಳ ಆಗರವಾಗಿದೆ. ಕೆಎಎಸ್‌‍ ಪರೀಕ್ಷೆ ಮತ್ತು ಮರುಪರೀಕ್ಷೆ ನಡೆಸುವಲ್ಲಿ ಪದೇಪದೇ ಎಡವಟ್ಟು ಮಾಡಿದೆ. ಪ್ರಶ್ನೆಪತ್ರಿಕೆಗಳ ತಯಾರಿಕೆ ಮತ್ತು ಅನುವಾದ ಮಾಡುವಲ್ಲಿ ಆಗುತ್ತಿರುವ ತಪ್ಪುಗಳಿಂದ ಪರೀಕ್ಷೆ ಸಂದರ್ಶನ ನಡೆಸಿ ಅಂತಿಮ ಆಯ್ಕೆ ಪ್ರಕಟಿಸುವಲ್ಲೂ ವಿಳಂಬವಾಗುತ್ತಿದೆ. ಇದರಿಂದ ಉದ್ಯೋಗಾಕಾಂಕ್ಷಿಗಳು ತೊಂದರೆಗೊಳಗಾಗುತ್ತಿದ್ದಾರೆ. ಸರ್ಕಾರದ ರಾಜಕೀಯ ಹಸ್ತಕ್ಷೇಪ, ಭ್ರಷ್ಟಾಚಾರ, ಸ್ವಜನಪಕ್ಷಪಾತ ಈ ಎಲ್ಲಾ ಗೊಂದಲಗಳಿಗೆ ಮೂಲ ಕಾರಣವಾಗಿದೆ ಎಂದು ಆರೋಪಿಸಿದರು.

ಪ್ರತೀ ಪರೀಕ್ಷೆಗೆ 15 ಕೋಟಿ ರೂ. ವೆಚ್ಚವಾಗಿದೆ. ಬರಗಾಲ ಹಾಗೂ ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತೀ ರೂಪಾಯಿ ಅನುದಾನಕ್ಕೂ ನಾವು ಮುಖ್ಯಮಂತ್ರಿಗಳ ಮನೆಗೆ ಹೋಗುತ್ತೇವೆ. 2 ಲಕ್ಷ ಅಭ್ಯರ್ಥಿಗಳು ಕೆಪಿಎಸ್‌‍ಸಿ ವ್ಯವಸ್ಥೆ ವೈಫಲ್ಯದಿಂದ ಬೀದಿಗೆ ಬಂದಿದ್ದಾರೆ. ಹೀಗೇ ಮುಂದುವರೆದರೆ ಎಷ್ಟು ಮಂದಿ ಉದ್ಯೋಗಾಕಾಂಕ್ಷಿಗಳು ಆತಹತ್ಯೆ ಮಾಡಿಕೊಳ್ಳುತ್ತಾರೋ ಗೊತ್ತಿಲ್ಲ. ಈ ವಿಚಾರದ ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕೆಂದು ಸಭಾಧ್ಯಕ್ಷರಲ್ಲಿ ಮನವಿ ಮಾಡಿದರು.

ಕೆಪಿಎಸ್‌‍ಸಿ ವಿರುದ್ಧ ರಸ್ತೆ ತಡೆ, ಪ್ರತಿಭಟನೆ ಆಗುತ್ತಿದೆ. ಸಭಾಧ್ಯಕ್ಷರೂ ಪತ್ರ ಬರೆದಿದ್ದಾರೆ. ಕೆಪಿಎಸ್‌‍ಸಿಯಿಂದ ಕನ್ನಡದ ಕೊಲೆಯಾಗಿದೆ. ಕನ್ನಡ ಉಳಿಯಬೇಕಲ್ಲವೆ? ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಭಾಧ್ಯಕ್ಷ ಯು.ಟಿ.ಖಾದರ್‌ ಮಾತನಾಡಿ, ಈ ವಿಚಾರವನ್ನು ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆ ಸಂದರ್ಭದಲ್ಲೂ ಪ್ರಸ್ತಾಪಿಸಲು ಅವಕಾಶವಿದೆ ಎಂದರು. ಆಗ ಅಶೋಕ್‌ ಮಾತನಾಡಿ, ನಿಮ ಸಲಹೆಯನ್ನು ಒಪ್ಪುತ್ತೇವೆ. ಆದರೆ ಈ ವಿಚಾರದ ಬಗ್ಗೆ ನಿರ್ದಿಷ್ಟವಾದ ಉತ್ತರ ಸರ್ಕಾರದಿಂದ ಸಿಗುವುದಿಲ್ಲ. ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಗೆ ಸರ್ಕಾರ ಒಟ್ಟಾರೆ ಉತ್ತರವನ್ನು ನೀಡುತ್ತದೆ. ಹೀಗಾಗಿ ನಿಲುವಳಿ ಚರ್ಚೆಯಡಿ ವಿಸ್ತೃತ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ಮತ್ತೆ ಸದನ ಸಮಾವೇಶಗೊಂಡಾಗ ಸಭಾಧ್ಯಕ್ಷರು ನಿಲುವಳಿ ಸೂಚನೆಯಡಿ ವಿರೋಧಪಕ್ಷದ ನಾಯಕರು ಮಾಡಿರುವ ಪ್ರಸ್ತಾಪವನ್ನು ಮಾರ್ಪಾಡು ಮಾಡಿ ನಿಯಮ 69 ರಡಿ ಚರ್ಚೆಗೆ ಅವಕಾಶ
ನೀಡುವುದಾಗಿ ಪ್ರಕಟಿಸಿ, ಸದನದ ಕಾರ್ಯಕಲಾಪವನ್ನು ಭೋಜನದ ವಿರಾಮಕ್ಕೆ ಮುಂದೂಡಿದರು.

RELATED ARTICLES

Latest News