ಬೆಂಗಳೂರು, ಅ.31-ನಿಮಗೆ ಎಷ್ಟು ಜನ ಏಜೆಂಟ್ ಇದ್ದಾರೆ, ಆ ಪೈಕಿ ಅಧಿಕೃತ ಏಜೆಂಟ್ ಯಾರೆಂಬ ಬೋರ್ಡ್ ಹಾಕಿಬಿಡಿ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಉಪ ವಿಭಾಗಾಧಿಕಾರಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಕಾಸಸೌಧದಲ್ಲಿಂದು ನಡೆದ ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇರುವ ತಕರಾರು ಪ್ರಕರಣಗಳ ವಿಲೇವಾರಿ ಸಂಬಂಧ ಎಲ್ಲಾ ಉಪ ವಿಭಾಗಾಧಿಕಾರಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಚಿವರು, ಬೆಂಗಳೂರು ಉತ್ತರ ವಿಭಾಗದ ಉಪ ವಿಭಾಗಾಧಿಕಾರಿ ಕಿರಣ್ ಅವರನ್ನು ತರಾಟೆಗೆ ತೆಗೆದುಕೊಂಡರು,
ಸಭೆಯಲ್ಲಿ ಉಪ ವಿಭಾಗಾಧಿಕಾರಿಯವರ ಬೆವರಿಳಿಸಿದ ಅವರು, ಜನರು ತಮ ಕೆಲಸಗಳಿಗೆ ಏಜೆಂಟರನ್ನೇ ಭೇಟಿಯಾಗಿಬಿಡಲಿ. ನೀವೂ ನನಗೇ ಸಿಗಲ್ಲ ಅಂದರೆ ಇನ್ನೂ ಜನರ ಕಥೆ ಏನು? ಎಂದು ಪ್ರಶ್ನಿಸಿದರು. ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿರುವ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥಗೊಳಿಸಬೇಕು. ಅನಗತ್ಯವಾಗಿ ಪ್ರಕರಣಗಳನ್ನು ವಿಲೇವಾರಿ ಮಾಡದೇ ವಿಳಂಬ ಮಾಡಬಾರದು ಎಂದು ಸಚಿವರು ಸೂಚಿಸಿದರು.

