ಮಂಡ್ಯ,ಜು.20- ಕಾವೇರಿ ಜಲಾನಯನ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣರಾಜ ಜಲಸಾಗರಕ್ಕೆ ಭಾರಿ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಜಲಾಶಯದ ನೀರಿನ ಮಟ್ಟ 120 ಅಡಿಗೆ ಏರಿಕೆಯಾಗಿದೆ. 124.80 ಅಡಿ ಸಾಮಥ್ರ್ಯದ ಜಲಾಶಯ ಇನ್ನೆರೆಡು ದಿನದೊಳಗೆ ಭರ್ತಿಯಾಗುವ ಸಾಧ್ಯತೆ ಇದೆ. ಕೆಆರ್‍ಎಸ್ ಡ್ಯಾಂನಿಂದ ನದಿಗೆ ನೀರು ಬಿಡಲಿ. ಸಿದ್ಧತೆ ಮಾಡಿಕೊಡಲಾಗಿದ್ದು, ಯಾವುದೇ ಕ್ಷಣದಲ್ಲಿ ನದಿಗೆ ನೀರು ಹರಿಸುವ ಸಾಧ್ಯತೆ ಇದೆ.
ಭಾರಿ ಪ್ರಮಾಣದಲ್ಲಿ ಒಳಹರಿವು ಮುಂದುವರೆದಿದ್ದು, ಮುಂಜಾಗ್ರತಾ ಕ್ರಮವಾಗಿ ನದಿಗೆ ನೀರು ಬಿಡಲು ಮುಂದಾಗಿದ್ದು, ಸದ್ಯ 10 ರಿಂದ 25 ಸಾವಿರ ಕ್ಯೂಸೆಕ್ಸ್ ನೀರನ್ನು ನದಿಗೆ ಬಿಡುವ ಸಾಧ್ಯತೆಯಿದೆ.
ನದಿಪಾತ್ರದ ಜನರು ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ. ಸಾರ್ವಜನಿಕರ ಆಸ್ತಿಪಾಸ್ತಿ ಹಾಗೂ ಜಾನುವಾರು ರಕ್ಷಣೆಗೆ ಕ್ರಮ ವಹಿಸುವಂತೆ ಕಾವೇ ನೀರಾವರಿ ನಿಗಮ ಈಗಾಗಲೇ ಮನವಿ ಮಾಡಿದೆ.
ಕೆಆರ್‍ಎಸ್ ಜಲಾಶಯಕ್ಕೆ 51,375 ಕ್ಯೂಸೆಕ್ಸ್ ನೀರು ಒಳಹರಿವಿನ ಪ್ರಮಾಣವಿದ್ದು, ಸದ್ಯ 4,714 ಕ್ಯೂಸೆಕ್ಸ್ ನೀರನ್ನು ಹೊರಬಿಡಲಾಗುತ್ತಿದೆ. ಕಾವೇರಿ ಜಲಾನಯನ ಪ್ರದೇಶದ ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳಲ್ಲಿನ ಒಳಹರಿವು ಪ್ರಮಾಣ ಹೆಚ್ಚಾಗಿ ಈಗಾಗಲೇ ಭರ್ತಿ ಹಂತ ತಲುಪಿವೆ.
ಕಬಿನಿ ಜಲಾಶಯದಿಂದ 40,292 ಕ್ಯೂಸೆಕ್ಸ್ ನೀರು ಹೊರಬಿಡಲಾಗುತ್ತಿದೆ.
ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳು ಭರ್ತಿಯಾಗುತ್ತಿರುವುದರಿಂದ ಕೃಷಿ ಚಟುವಟಿಕೆಗಳು ಚುರುಕುಗೊಂಡಿದ್ದು, ರೈತರು ಸಂತಸಗೊಂಡಿದ್ದಾರೆ.