ಎಡೆಬಿಡದೆ ಸುರಿದ ಮಳೆ, ರಾಜ್ಯದ ಪ್ರಮುಖ ಜಲಾಶಯಗಳು ಬಹುತೇಕ ಭರ್ತಿ

Social Share

ಬೆಂಗಳೂರು,ಜು.10- ರಾಜ್ಯದಲ್ಲಿ ಎಡೆಬಿಡದೆ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಗಣನೀಯವಾಗಿ ಏರಿಕೆಯಾಗಿದೆ. ಕರಾವಳಿ, ಮಲೆನಾಡು ಭಾಗದಲ್ಲಿ ಮಳೆ ಆರ್ಭಟ ಇನ್ನು ತಗ್ಗಿಲ್ಲ. ಹೀಗಾಗಿ ಕಾವೇರಿ, ತುಂಗಭದ್ರಾ, ಕೃಷ್ಣ ಮೊದಲಾದ ಪ್ರಮುಖ ನದಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳ ಪೈಕಿ ಅರ್ಧದಷ್ಟು ಜಲಾಶಯಗಳು ಭರ್ತಿಯ ಹಂತ ತಲುಪಿವೆ. ರಾಜ್ಯದ ಜೀವನಾಡಿ ಕೃಷ್ಣರಾಜ ಸಾಗರ ಜಲಾಶಯದ ನೀರಿನ ಮಟ್ಟ ಶೇ.90ಕ್ಕೂ ಹೆಚ್ಚು ಸಂಗ್ರಹವಾಗಿದೆ.
34 ಸಾವಿರ ಕ್ಯೂಸೆಕ್ಸ್‍ನಷ್ಟು ಒಳಹರಿವಿದ್ದು, 45 ಟಿಎಂಸಿಗೂ ಹೆಚ್ಚು ನೀರು ಸಂಗ್ರಹವಾಗಿದೆ. ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗಲು ಕೇವಲ 2 ಅಡಿ ಮಾತ್ರ ಉಳಿದಿದ್ದು, ಒಂದೆರಡು ದಿನದಲ್ಲೇ ಭರ್ತಿಯಾಗಿವೆ.

ಈಗಾಗಲೇ 11 ಸಾವಿರ ಕ್ಯೂಸೆಕ್‍ಗೂ ಹೆಚ್ಚು ನೀರನ್ನು ಹೊರಕ್ಕೆ ಬಿಡಲಾಗುತ್ತಿದೆ. ಕಬಿನಿ ಹಾಗೂ ಹಾರಂಗಿ ಜಲಾಶಯವು ಭರ್ತಿ ಹಂತ ತಲುಪಿದ್ದು, ಹೆಚ್ಚಿನ ಪ್ರಮಾಣದ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.

ಹೇಮಾವತಿ ಜಲಾಶಯದಲ್ಲೂ ಶೇ.88ರಷ್ಟು ನೀರು ಸಂಗ್ರಹವಾಗಿದ್ದು, 17 ಸಾವಿರ ಕ್ಯೂಸೆಕ್ಸ್‍ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಇದೇ ರೀತಿ ಮುಂದುವರೆದರೆ ಕಾವೇರಿ ಕೊಳ್ಳದ ಈ ನಾಲ್ಕು ಜಲಾಶಯಗಳು ಭರ್ತಿಯಾಗಲಿವೆ. ಈಗಾಗಲೇ ಶೇ.89ರಷ್ಟು ಭರ್ತಿಯಾಗಿದ್ದು, ಇನ್ನು ಕೇವಲ 10ರಷ್ಟು ಮಾತ್ರ ಭರ್ತಿಯಾಗಬೇಕಿದೆ.

ಕಳೆದ ವರ್ಷಕ್ಕಿಂತ ಈ ನಾಲ್ಕು ಜಲಾಶಯಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಈ ಬಾರಿ ಸಂಗ್ರಹವಾಗಿರುವುದು ವಿಶೇಷ. ಕೃಷ್ಣ ಕೊಳ್ಳದ ಭದ್ರಾ, ತುಂಗಭದ್ರ ಜಲಾಶಯದಲ್ಲಿ ಶೇ.72ರಷ್ಟು ನೀರು ಸಂಗ್ರಹವಾಗಿದೆ. ಭದ್ರ ಜಲಾಶಯಕ್ಕೆ 28 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ಸ್ ನೀರು ಹರಿದುಬರುತ್ತಿದೆ. ತುಂಗಭದ್ರಾ ಜಲಾಶಯಕ್ಕೆ 95 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬರುತ್ತಿದೆ.

ಆಲಮಟ್ಟಿ ಜಲಾಶಯದಲ್ಲಿ ಶೇ.57ರಷ್ಟು, ನಾರಾಯಣಪುರ ಜಲಾಶಯ ಶೇ.84ರಷ್ಟು ಭರ್ತಿಯಾಗಿದ್ದು, ಕೃಷ್ಣಕೊಳ್ಳದ ಜಲಾಶಯಗಳಲ್ಲಿ ಶೇ.59ರಷ್ಟು ನೀರು ಸಂಗ್ರಹವಾಗಿದೆ. ಆಲಮಟ್ಟಿ ಜಲಾಶಯಕ್ಕೆ 78 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ಇನ್ನೊಂದು ವಾರದಲ್ಲಿ ಭರ್ತಿಯಾಗುವ ಸಾಧ್ಯತೆಗಳಿವೆ.

ಮಲಪ್ರಭ, ಘಟಪ್ರಭ ಜಲಾಶಯಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬರುತ್ತಿದ್ದು, ಈ ಎರಡೂ ಜಲಾಶಯಗಳಲ್ಲಿ ಕಳೆದ ವರ್ಷಕ್ಕಿಂತ ಕಡಿಮೆ ನೀರಿನ ಸಂಗ್ರಹವಿದೆ. ಜಲವಿದ್ಯುತ್ ಉತ್ಪಾದಿಸುವ ಲಿಂಗನಮಕ್ಕಿ ಜಲಾಶಯಕ್ಕೆ 47ಸ ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬರುತ್ತಿದೆ. ಸೂಫ ಜಲಾಶಯಕ್ಕೆ 31 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬರುತ್ತಿದ್ದು, ವರಾಹಿ ಜಲಾಶಯಕ್ಕೆ 7 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರು ಹರಿದುಬರುತ್ತಿದೆ.

ಈ ಮೂರು ಜಲಾಶಯಗಳಲ್ಲಿ ಶೇ.27ರಷ್ಟು ಮಾತ್ರ ನೀರು ಸಂಗ್ರಹವಾಗಿದೆ. ಕಳೆದ ವರ್ಷಕ್ಕಿಂತ ಕಡಿಮೆ ನೀರು ಈ ವರ್ಷ ಜಲಾಶಯಗಳಲ್ಲಿ ಸಂಗ್ರಹವಾಗಿದೆ. ನಿರಂತರ ಮಳೆಯಿಂದಾಗಿ ಈ ಪ್ರಮುಖ ಜಲಾಶಯಗಳು ಭರ್ತಿಯಾಗುತ್ತಿವೆ. ಇದೇ ರೀತಿ ಮಳೆ ಮುಂದುವರೆದರೆ ನದಿ ಪಾತ್ರಗಳಲ್ಲಿ ಭಾರೀ ಪ್ರವಾಹ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿವೆ.

Articles You Might Like

Share This Article