Friday, October 3, 2025
Homeರಾಜ್ಯಮೈದುಂಬಿದ ಕೆಆರ್‌ಎಸ್‌‍ ಜಲಾಶಯ, ನಾಳೆ ಸಿಎಂ ಬಾಗಿನ ಅರ್ಪಣೆ

ಮೈದುಂಬಿದ ಕೆಆರ್‌ಎಸ್‌‍ ಜಲಾಶಯ, ನಾಳೆ ಸಿಎಂ ಬಾಗಿನ ಅರ್ಪಣೆ

KRS reservoir overflows

ಮಂಡ್ಯ, ಜೂ.27- ಮತ್ತೆ ಮಳೆ ಅಬ್ಬರ ಜೋರಾದ ಹಿನ್ನೆಲೆಯಲ್ಲಿ ಕೃಷ್ಣರಾಜಸಾಗರ ಅಣೆ ಕಟ್ಟಿನ ಶೇಕಡಾ 90ರಷ್ಟು ನೀರು ಭರ್ತಿಯಾಗಿದೆ. ಒಳಹರಿವು ನಿರಂತರವಾಗಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅಪಾರ ಪ್ರಮಾಣದ ನೀರನ್ನು ನಿನ್ನ ಸಂಜೆ ಅಣೆಕಟ್ಟಿನಿಂದ ನದಿಗೆ ಬಿಡುಗಡೆ ಮಾಡಲಾಗಿದೆ. ಮುಂಜಾಗ್ರತಾ ದೃಷ್ಟಿಯಿಂದ ಕಾವೇರಿ ನದಿಗೆ 50,000 ಕ್ಯೂಸೆಕ್‌ಗೂ ಹೆಚ್ಚು ನೀರನ್ನು ಬಿಡುಗಡೆ ಮಾಡಲಾಗಿದೆ ಎಂದು ಕಾವೇರಿ ನೀರಾವರಿ ನಿಗಮ ತಿಳಿಸಿದೆ.

ಮಂಡ್ಯ, ಮೈಸೂರು, ಮಡಿಕೇರಿ, ಕೊಡಗು ಹಾಗೂ ಕಾವೇರಿ ಜಲಾನಯನ ಪ್ರದೇಶಗಳ ಸುತ್ತಮುತ್ತಲಿನ ಭಾಗದಲ್ಲಿ ವ್ಯಾಪಕ ಮಳೆ ಮುಂದುವರಿದೆ. ಹೀಗಾಗಿ ಹೆಚ್ಚುವರಿ ಗೇಟ್‌ಗಳನ್ನು ತೆರೆದು ನೀರು ನದಿ ಹಾಗೂ ಕಾಲುವೆಗೆ ಬಿಡುಗಡೆ ಮಾಡಲಾಗಿದೆ. ನದಿ ಪಾತ್ರದ ಜನರಿಗೆ ಪ್ರವಾಹ ಎಚ್ಚರಿಕೆ ನೀಡಲಾಗಿದೆ. ಸುರಕ್ಷಿತ ಸ್ಥಳಕ್ಕೆ ತೆರಲುವಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

84 ವರ್ಷಗಳ ನಂತರ ಜೂನ್‌ನಲ್ಲಿ ಡ್ಯಾಂ ಗೇಟ್‌ ಓಪನ್‌:
ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ನಂತರ ಅಂದರೆ ಒಟ್ಟು 84 ವರ್ಷಗಳ ನಂತರ ಮೊದಲ ಬಾರಿಗೆ, ಜೂನ್‌ 23 ರಂದು ಅಣೆಕಟ್ಟಿನ ಕ್ರೇಸ್ಟ್‌ ಗೇಟ್‌ಗಳನ್ನು ತೆರೆದು ನೀರು ಬಿಡುಗಡೆ ಮಾಡಲಾಗಿದೆ.
ಹಿಂದೆ ಜೂನ್‌ನಲ್ಲಿ ಮಳೆ ಆರಂಭವಾದರೆ, ನಂತರದ ತಿಂಗಳುಗಳಲ್ಲಿ ಹೆಚ್ಚಿನ ಮಳೆ ಆಗಿ ಡ್ಯಾಂ ತುಂಬುತ್ತಿತ್ತು. ಆನಂತರವೇ ಕೆಆರ್‌ಎಸ್‌‍ ಡ್ಯಾಂ ಗೇಟ್‌ (ಜುಲೈ, ಆಗಸ್ಟ್‌‍, ಸೆಪ್ಟಂಬರ್‌ ವೇಳೆಗೆ) ಓಪನ್‌ ಮಾಡುತ್ತಿದ್ದೇವೆ. ಇದೀಗ ಭಾರಿ ಮಳೆಗೆ ಋತುವಿನ ಆರಂಭದ ಜೂನ್‌ ತಿಂಗಳಲ್ಲೇ ಡ್ಯಾಂ ಭರ್ತಿಯಾಗಿದ್ದರಿಂದ ಈ ತಿಂಗಳಲ್ಲೇ ಡ್ಯಾಂ ನಿಂದ ಮೊದಲ ಬಾರಿ ನೀರು ಬಿಡಲಾಗುತ್ತಿದೆ ಎಂದು ಇಲಾಖೆ ಮೂಲಗಳು ಮಾಹಿತಿ ನೀಡಿದೆ.

ಸಿಎಂ ಬಾಗಿನ:
ರೈತರ ಜೀವನಾಡಿಯಾಗಿರುವ ಕಾವೇರಿ ನದಿಯ ಪ್ರಮುಖ ಅಣೆಕಟ್ಟೆಯಾಗಿರುವ ಕೆಆರ್‌ಎಸ್‌‍ ಇದೇ ಮೊದಲ ಬಾರಿಗೆ ಜೂನ್‌ ತಿಂಗಳಲ್ಲಿ ತುಂಬಿರುವ ಹಿನ್ನೆಲೆಯಲ್ಲಿ ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾವೇರಿ ಮಾತೆಗೆ ಬಾಗಿನ ಅರ್ಪಿಸಲಿದ್ದಾರೆ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಜಿಲ್ಲಾ ಉಸ್ತುವಾರಿ ಸಚಿವ ಚೆಲುವರಾಜ ಸ್ವಾಮಿ ಸೇರಿದಂತೆ ಶಾಸಕರು, ವಿಧಾನಪರಿಷತ್‌ ಸದಸ್ಯರು ಸೇರಿದಂತೆ ಹಲವು ಗಣ್ಯರು ಭಾಗಿಯಾಗಲಿದ್ದಾರೆ.ಈಗಾಗಲೇ ಕೆಆರ್‌ಎಸ್‌‍ ಬಳಿ ಬಿಗಿ ಭದ್ರತೆಯನ್ನು ಕಲ್ಪಿಸುವುದರ ಜೊತೆಗೆ ವಿಶೇಷ ಸಮಾರಂಭಕ್ಕೆ ಈಗಾಗಲೇ ಭರ್ಜರಿ ತಯಾರಿ ನಡೆದಿದೆ.

RELATED ARTICLES

Latest News