ಬೆಂಗಳೂರು,ನ.3- ಆಡಳಿತಾರೂಢ ಕಾಂಗ್ರೆಸ್‍ನಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್‍ರಂತೆ ಇಲ್ಲೂ ಕೂಡ ಅನೇಕ ಮಂದಿ ಹುಟ್ಟಿಕೊಂಡಿರುವ ಕಾರಣ ಈ ಸರ್ಕಾರ ಹೆಚ್ಚು ದಿನ ಉಳಿಯುವ ಸಾಧ್ಯತೆಗಳು ಇಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗೆದ್ದ ಶಾಸಕರ ಕ್ಷೇತ್ರಗಳಿಗೆ ನಯಾಪೈಸೆ ಅನುದಾನವೂ ಬಿಡುಗಡೆಯಾಗಿಲ್ಲ. ನಾವು ಯಾಕಾದರೂ ಗೆದ್ದಿದ್ದೇವೊ ಎಂದು ಅಳಲು ತೋಡಿಕೊಂಡಿದ್ದಾರೆ. ಪ್ರತಿಯೊಬ್ಬರಿಗೂ ಅಧಿಕಾರ ಬೇಕು, ಇಲ್ಲಿ ಹೆಚ್ಚು ಮಂದಿ ಅಜಿತ್ ಪವಾರ್‍ಗಳು ಇರುವುದರಿಂದ ನಾನು ಸರ್ಕಾರದ ಗ್ಯಾರಂಟಿ ಬಗ್ಗೆ ಹೇಳುವುದಿಲ್ಲ ಎಂದು ಸೂಚ್ಯವಾಗಿ ಹೇಳಿದರು.
ಜನರ ಮೂಗಿಗೆ ತುಪ್ಪ ಸವರಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಅಧಿಕಾರಕ್ಕಾಗಿ ಅವರವರಲ್ಲೇ ಬಣಗಳು ಸೃಷ್ಟಿಯಾಗಿವೆ. ಸ್ವತಃ ರಾಜ್ಯದ ಜನತೆಯೇ ಯಾಕಾದಾರು ಕಾಂಗ್ರೆಸ್‍ಗೆ ಅಕಾರ ಕೊಟ್ಟೆವೊ ಎಂದು ಹಿಡಿಶಾಪ ಹಾಕುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ರಾಜ್ಯ ಕಾಂಗ್ರೆಸ್ ಅಭಿವೃದ್ಧಿ ನಿನ್ನೆಯಿಂದ ಆರಂಭವಾಗಿದೆ. ಸಿಎಂ ಆಗಿರುವ ಸಿದ್ದರಾಮಯ್ಯ ನಾನೇ ಐದು ವರ್ಷ ಸಿಎಂ ಎಂದು ಹೇಳಿದ್ದಾರೆ.
ಅದಕ್ಕೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಇದರ ತೀರ್ಮಾನ ಕೇಂದ್ರ ನಾಯಕರು ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ. ಇದರ ಅರ್ಥ ಐದು ವರ್ಷ ಸಿಎಂ ಅಗಿರುವುದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ವ್ಯಂಗ್ಯವಾಡಿದರು.
ಶಾಸಕರಿಗೆ ಕ್ಷೇತ್ರಕ್ಕೆ ಹಣ ಕೊಟ್ಟಿಲ್ಲ. ಒಂದು ರೂಪಾಯಿ ಹಣ ಬಿಡುಗಡೆ ಆಗಿಲ್ಲ. ಇದೊಂದು ಆರ್ಥಿಕವಾಗಿ ಪಾಪರ್ ಆಗಿರುವ ಸರ್ಕಾರ ಎಂದು ಟೀಕಿಸಿದ್ದಾರೆ. ಮುಖ್ಯಮಂತ್ರಿಗಲೇ ಅತೃಪ್ತ ಶಾಸಕರ ದೊಡ್ಡ ಪಟ್ಟಿಯೇ ಇದೆ. ನಾನೇ ಮುಖ್ಯಮಂತ್ರಿ ಎನ್ನುತ್ತಿದ್ದೀರಿ, ನಿಮಗೆ ಈ ದೌರ್ಭಾಗ್ಯ ಬರಬಾರದಿತ್ತು. ಇದಕ್ಕಿಂತ ನೀವು ರಾಜೀನಾಮೆ ಕೊಡುವುದೇ ಸೂಕ್ತ. ಸಿಎಂ, ಡಿಸಿಎಂ ಇಬ್ಬರೂ ರಾಜೀನಾಮೆ ಕೊಡಿ. ಕೂಡಲೇ ಕ್ಯಾಬಿನೆಟ್ ವಿಸರ್ಜಿಸಿ ಚುನಾವಣೆಗೆ ಹೋಗುವುದು ಸೂಕ್ತ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಸಿಎಂ ಅಭ್ಯರ್ಥಿ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಹಾಗೂ ಪ್ರಿಯಾಂಕ್ ಖರ್ಗೆಗೆ ನಾಚಿಕೆ ಆಗಬೇಕು. ದಲಿತರ ಹೆಸರೇಳಿ ವೋಟ್ ಪಡೆಯುತ್ತಿದ್ದಾರೆ. ನಮ್ಮನ್ನ ಕೋಮುವಾದಿಗಳು ಎನ್ನುತ್ತಾರೆ. ಇವರು ದಲಿತರ ಹೆಸರೇಳಿ ಸಿಎಂ ಅಂತಿದ್ದಾರೆ. ಜಾತಿಯ ಹೆಸರಲ್ಲಿ ಸ್ವತಂತ್ರ ಬಂದ ಬಳಿಕವೂ ಮತ ಪಡೆಯುತ್ತಿದ್ದಾರೆ ಅಪಹಾಸ್ಯ ಮಾಡಿದರು.
ಬಂಡೆಗೆ ಉಂಡೆ ನಾಮ ಗ್ಯಾರಂಟಿ : ಯತ್ನಾಳ್ ವ್ಯಂಗ್ಯ
ಕಾಂಗ್ರೆಸ್‍ಗೆ ಮುಕ್ತಿ ಕೊಡಬೇಕಿದೆ. ಈಗಲ್ಲ ಹಿಂದೆ ಸಿಎಂ ಆಗಿದ್ದಾಗಲು ನಾನು, ರೇವಣ್ಣ, ಉಗ್ರಪ್ಪ ಮೂವರು ವಿಧಾನಪರಿಷತ್‍ನಲ್ಲಿ ಜಾತಿ ಜನಗಣತಿ ಚರ್ಚೆಗೆ ಅವಕಾಶ ಕೇಳಿದೆವು. ಕೂಡಲೇ ಬಿಡುಗಡೆ ಮಾಡಿ ಎಂದು ಒತ್ತಾಯಿಸಿದ್ದೆವು. ಸಿಎಂ ಬಂದ್ರು. ಇನ್ನೆರಡು ತಿಂಗಳಲ್ಲಿ ಸರ್ಕಾರ ಮುಗಿಯುತ್ತೆ. ನಾನು ಇರುವಾಗಲೇ ವರದಿ ಬಿಡುಗಡೆ ಮಾಡುತ್ತೇನೆ ಎಂದಿದ್ದರು.
ಸಚಿವ ಆಂಜನೇಯ ಕೂಡ ಅದನ್ನೇ ಹೇಳಿದ್ದರು. ಇದಾದ ಬಳಿಕ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಬಂತು. ಆಗಲೂ ಚರ್ಚೆಗೆ ಬರಲಿಲ್ಲ. ಸಿಎಂ ಆಗಿದ್ದ ಕುಮಾರಸ್ವಾಮಿ ಜಾರಿಗೆ ತರಲು ಬಿಡಲಿಲ್ಲ. ಸಮ್ಮಿಶ್ರ ಸರ್ಕಾರದ ಛೇರ್ಮನ್ ಆಗಿದ್ದವರು ಇದೇ ಸಿದ್ದರಾಮಯ್ಯ ಎಂದರು.