ಕನಕಪುರ,ಅ.18- ಅನಾರೋಗ್ಯದ ಕಾರಣ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದ ರಾಜ್ಯ ಸಾರಿಗೆ ಬಸ್ ಚಾಲಕನೊಬ್ಬ ಸಾವನ್ನಪ್ಪಿದ್ದು, ತನ್ನ ಎರಡು ಕಣ್ಣುಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ಕಸಬಾ ಹೋಬಳಿ, ತೆಂಗಿನಮರದೊಡ್ಡಿ ಗ್ರಾಮದ ಎಸ್.ಸುರೇಶ್ (36) ಅವರು ನಿನ್ನೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ನಗರದ ರಾಜ್ಯ ಸಾರಿಗೆ ಡಿಪೋನಲ್ಲಿ ಚಾಲಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಈತ ಕಳೆದ ಮೂರು ದಿನಗಳ ಹಿಂದೆ ಹೊಟ್ಟೆನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು.
ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಾವನ್ನಪ್ಪಿದ್ದಾರೆ.ಅವಿವಾಹಿತರಾಗಿದ್ದ ಸುರೇಶ್ ಅವರು ತಾಯಿ, ಒಬ್ಬ ಸಹೋದರ ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ. ದುಃಖದ ಸಂದರ್ಭದಲ್ಲೂ ಮೃತನ ಕುಟುಂಬಸ್ಥರ ಸುರೇಶ ಅವರ ಎರಡು ಕಣ್ಣುಗಳನ್ನು ದಾನ ಮಾಡಲು ಒಪ್ಪಿ, ಸುರೇಶನ ಕಣ್ಣುಗಳು ಮತ್ತೆ ಪ್ರಪಂಚನ್ನು ನೋಡಲಿ ಎಂಬ ಕಾರಣಕ್ಕೆ ಆತನ ಕಣ್ಣುಗಳನ್ನು ದಾನ ಮಾಡಿರುವುದಾಗಿ ತಿಳಿಸಿದ್ದಾರೆ.
ಸುರೇಶನ ಕಣ್ಣುಗಳು ಇಬ್ಬರು ಅಂಧರ ಬದುಕಿಗೆ ಹೊಸ ಬೆಳಕು ಮೂಡಿಸಿದೆ. ಸಾವಿನಲ್ಲೂ ನೇತ್ರದಾನ ಮಾಡಿ ಸಾರ್ಥಕತೆ ಮೆರೆದು ಇತರರಿಗೆ ಮಾದರಿಯಾಗಿದ್ದಾರೆ. ಸುರೇಶ್ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕೆ ಸಾರಿಗೆ ಬಸ್ ನಿಲ್ದಾಣದಲ್ಲಿ ವ್ಯವಸ್ಥೆ ಮಾಡಲಾಗಿತ್ತು. ಚಾಲಕರು, ನಿರ್ವಾಹಕರು ಸಾರ್ವಜನಿಕರು ಅಂತಿಮ ನಮನ ಸಲ್ಲಿಸಿದ್ದಾರೆ.