Thursday, November 21, 2024
Homeರಾಜ್ಯಬರ ಪರಿಹಾರ ವರದಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ 2 ವಾರದ ಗಡುವು ನೀಡಿದ ಸುಪ್ರೀಂ

ಬರ ಪರಿಹಾರ ವರದಿ ಸಲ್ಲಿಸಲು ಕೇಂದ್ರ ಸರ್ಕಾರಕ್ಕೆ 2 ವಾರದ ಗಡುವು ನೀಡಿದ ಸುಪ್ರೀಂ

ನವದೆಹಲಿ, ಮಾ.8- ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (NDRF)ಯಡಿ ಕರ್ನಾಟಕಕ್ಕೆ ಬಿಡುಗಡೆ ಮಾಡಿರುವ ಅನುದಾನ ಕುರಿತು ಎರಡು ವಾರಗಳಲ್ಲಿ ವರದಿ ನೀಡುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ. ಬರ ಪರಿಹಾರ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕೆಂದು ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯ ಮೂರ್ತಿ ಬಿ.ಆರ್. ಗವಾಯಿ ಅವರಿದ್ದ ಏಕಸದಸ್ಯ ಪೀಠ, ಪರಿಹಾರ ಬಿಡುಗಡೆ ಮಾಡಿರುವ ಕುರಿತು ಎರಡು ವಾರದಲ್ಲಿ ವರದಿ ನೀಡ ಬೇಕೆಂದು ಸೂಚಿಸಿದೆ.

ಇದೇ ವೇಳೆ ನ್ಯಾಯಪೀಠ ಬರ ಪರಿಹಾರ ಬಿಡುಗಡೆ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಘರ್ಷಕ್ಕಿಳಿಯದೆ ಒಕ್ಕೂ ವ್ಯವಸ್ಥೆಯಡಿ ಸೌಹಾರ್ದಯುತವಾಗಿ ನಡೆದುಕೊಳ್ಳಬೇಕೆಂಬ ಮಹತ್ವದ ಸಲಹೆಯನ್ನು ಸಹ ನೀಡಿತು. ಒಂದು ಹಂತದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ, ಪ್ರತಿಯೊಂದಕ್ಕೂ ರಾಜ್ಯ ಸರ್ಕಾರಗಳು ನ್ಯಾಯಾಲಯಕ್ಕೆ ಬರಬೇಕೆ? ಎಲ್ಲವನ್ನು ನ್ಯಾಯಾಲಯವೇ ಇತ್ಯರ್ಥಪಡಿಸುವುದಾದರೆ ಕೇಂದ್ರ ಸರ್ಕಾರದ ಪಾತ್ರವೇನೆಂದು ಅಟಾರ್ನಿ ಜನರಲ್ ಪ್ರಶ್ನೆ ಮಾಡಿದರು.

ಇದಕ್ಕೂ ಮುನ್ನ ಕರ್ನಾಟಕ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪೀಲ್ ಸಿಬಾಲ್ ಅವರು, ಕರ್ನಾಟಕದಲ್ಲಿ ಈ ಬಾರಿ ಭೀಕರ ಬರಗಾಲ ಅವರಿಸಿದೆ. ರಾಜ್ಯದ ಬಹುತೇಕ ಎಲ್ಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಎನ್ಡಿಆರ್ಎಫ್ನಡಿ ಸಿಗಬೇಕಾದ ಪರಿಹಾರ ಸಿಕ್ಕಿಲ್ಲ ಎಂದು ಆಕ್ಷೇಪಿಸಿದರು. ಕಳೆದ ಡಿಸೆಂಬರ್ ತಿಂಗಳಿನಲ್ಲಿ ಕರ್ನಾಟಕದ ಮುಖ್ಯಮಂತ್ರಿಗಳು, ಕಂದಾಯ ಸಚಿವರು ಸೇರಿದಂತೆ ಮತ್ತಿತರ ಅಧಿಕಾರಿಗಳ ನಿಯೋಗವು ಕೇಂದ್ರ ವಿಪತ್ತು ನಿರ್ವಹಣಾ ಸಮಿತಿಯ ಅಧ್ಯಕ್ಷರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದಾರೆ.

ಆದರೂ ಕೇಂದ್ರ ಸರ್ಕಾರ ಪರಿಹಾರ ನೀಡದೆ ವಿಳಂಬ ಧೋರಣೆಯನ್ನು ಅನುಸರಿಸುತ್ತಿದೆ. ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪಾಲು ಸಿಕ್ಕಿದ್ದರೆ ನಾವೇಕೆ ನ್ಯಾಯಾಲಯದ ಮೊರೆ ಹೋಗಬೇಕಿತ್ತು ಎಂದು ಪ್ರಶ್ನಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅರ್ಟಾನಿ ಜನರಲ್ ವೆಂಕಟರಮಣ, ಕರ್ನಾಟಕಕ್ಕೆ ಸಿಗಬೇಕಾದ ಪರಿಹಾರವನ್ನು ಕಾಲಕಾಲಕ್ಕೆ ಬಿಡುಗಡೆ ಮಾಡಿದ್ದೇವೆ. ಯಾವುದೇ ರಾಜ್ಯಗಳಿಗೂ ತಾರತಮ್ಯ ತೋರಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ರಾಜ್ಯಗಳಿಗೂ ಯಾವ ರೀತಿ ನ್ಯಾಯ ಕೊಡಬೇಕೋ ಅದೇ ರೀತಿ ಕೇಂದ್ರ ಸರ್ಕಾರ ಕರ್ನಾಟಕಕ್ಕೂ ಅದೇ ಮಾನದಂಡವನ್ನು ಅನುಸರಿಸಿದೆ ಎಂದು ಸಮರ್ಥಿಸಿಕೊಂಡರು.

ಈ ವೇಳೆ ಕಪಿಲ್ ಸಿಬಾಲ್ ಮತ್ತು ಎಜಿ ವೆಂಕಟರಮಣ ನಡುವೆ ಭಾರೀ ಜಟಾಪಟಿ ನಡೆಯಿತು. ಈ ಹಂತದಲ್ಲಿ ಮಧ್ಯಪ್ರವೇಶ ಮಾಡಿದ ನ್ಯಾಯಾೀಧಿಶರು, ಕೇಂದ್ರ ಪರಿಹಾರ ಬಿಡುಗಡೆ ವಿಷಯದಲ್ಲಿ ಸಂಘರ್ಷ ಮಾಡಿಕೊಳ್ಳುವುದು ಬೇಡ ಎಂದು ಸೂಚನೆ ನೀಡಿದರು. ಕರ್ನಾಟಕಕ್ಕೆ ಎಷ್ಟು ಪರಿಹಾರ ನೀಡಿದೆ ಎಂಬುದರ ಬಗ್ಗೆ ನಿಮ್ಮ ಬಳಿ ದಾಖಲೆಗಳು ಇವೆಯೇ ಎಂದು ಅಟಾರ್ನಿ ಜನರಲ್ ಅವರನ್ನು ನ್ಯಾಯಾೀಧಿಶರು ಪ್ರಶ್ನಿಸಿದರು.

ನಮಗೆ ಒಂದಿಷ್ಟು ಸಮಯ ಅವಕಾಶ ಕೊಟ್ಟರೆ ಎಲ್ಲವನ್ನು ನ್ಯಾಯಾಲಯಕ್ಕೆ ಸಲ್ಲಿಸಲಿದ್ದೇವೆ ಎಂದು ಅಟಾರ್ನಿ ಜನರಲ್ ಹೇಳಿದರು. ಎರಡೂ ಕಡೆ ವಾದ-ವಿವಾದ ಆಲಿಸಿದ ನ್ಯಾಯಾೀಧಿಶರು ಎರಡು ವಾರಗಳ ಅರ್ಜಿ ವಿಚಾರಣೆಯನ್ನು ಮುಂದೂಡಿಕೆ ಮಾಡಿದರು.

ಏನಿದು ಅರ್ಜಿ?:
ರಾಜ್ಯವು ತೀವ್ರ ಬರದಿಂದ ಸಂಕಷ್ಟಕ್ಕೆ ಸಿಲುಕಿದ್ದು, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ (ಎನ್ಡಿಆರೆಫ್) ಆರ್ಥಿಕ ನೆರವು ಬಿಡುಗಡೆ ಮಾಡಲು ಕೇಂದ್ರದ ಗೃಹ ಇಲಾಖೆಗೆ ನಿರ್ದೇಶಿಸಬೇಕು ಎಂದು ಕೋರಿ ಕರ್ನಾಟಕ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ಸಂವಿಧಾನದ 32ನೇ ವಿಧಿಯಡಿ ರಿಟ್ ಅರ್ಜಿಯನ್ನು ಕರ್ನಾಟಕ ಸರ್ಕಾರವು ಸರ್ವೋಚ್ಚ ನ್ಯಾಯಾಲಯದಲ್ಲಿ ಸಲ್ಲಿಕೆ ಮಾಡಿದ್ದು, ಕೇಂದ್ರ ಗೃಹ ಇಲಾಖೆಯ ಕ್ರಮವು ಸಂವಿಧಾನದ 14 ಮತ್ತು 21ನೇ ಧಿವಿಯಡಿ ಕಲ್ಪಿಸಿರುವ ರಾಜ್ಯದ ಜನರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆಕ್ಷೇಪಿಸಿತ್ತು.

RELATED ARTICLES

Latest News