ಬೆಂಗಳೂರು, ಸ.13- ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಸಮೀಪಿಸುತ್ತಿರುವುದು, ರಾಜ್ಯ ಸರ್ಕಾರಕ್ಕೆ ಎರಡೂವರೆ ವರ್ಷ ತುಂಬುತ್ತಿರುವ ಹಿನ್ನೆಲೆ ಹಾಗೂ ಸಚಿವ ಸಂಪುಟ ಪುನರ್‌ರಚನೆಯ ಕಾರಣಕ್ಕಾಗಿ ಇಂದು ಸಂಜೆ ನಡೆಯಲಿರುವ ಸಚಿವರ ಔತಣಕೂಟ ಭಾರೀ ಕುತೂಹಲ ಕೆರಳಿಸಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟದ ಎಲ್ಲಾ ಸಚಿವರಿಗೂ ತಪ್ಪದೇ ಔತಣಕೂಟದಲ್ಲಿ ಭಾಗವಹಿಸಿ ಎಂದು ಆಹ್ವಾನ ನೀಡಿದ್ದಾರೆ. ಮುಖ್ಯಮಂತ್ರಿಯವರು ಇಂದು ಧಾರವಾಡ, ಬಾಗಲಕೋಟೆ ಜಿಲ್ಲಾ ಪ್ರವಾಸ ಮುಗಿಸಿಕೊಂಡು ಸಂಜೆ ನಗರಕ್ಕೆ ವಾಪಸ್ ಆಗಲಿದ್ದಾರೆ.
ಈಗಾಗಲೇ ನಿಗದಿತ ಕಾರ್ಯಸೂಚಿಗಳು ಸಿದ್ಧವಾಗಿದ್ದು, ಅದರಂತೆ ಊಟದ ಜೊತೆ ಚರ್ಚೆಗಳು ನಡೆಯಲಿವೆ. ಪ್ರಮುಖವಾಗಿ ರಾಜ್ಯದಲ್ಲಿ ಕೋಮು ಸೌರ್ಹಾಧತೆಯನ್ನು ಹದಗೆಡಿಸಲು ವಿರೋಧ ಪಕ್ಷಗಳು ನಡೆಸುತಿರುವ ನಿರಂತರವಾದ ಸಂಚನ್ನು ಹತ್ತಿಕ್ಕುವುದು, ಇತ್ತೀಚಿನ ದಿನಗಳಲ್ಲಿ ಕೆಲವು ಇಲಾಖೆಗಳಲ್ಲಿನ ಕಾಮಗಾರಿ ಬಿಲ್‌ಗಳನ್ನು ಪಾವತಿಸಲು ಕಮಿಷನ್ ಪಡೆಯಲಾಗುತ್ತಿದೆ ಎಂಬ ಆರೋಪಗಳು ತೀವ್ರವಾಗಿ ಕೇಳಿ ಬರುತ್ತಿದ್ದು, ಅದಕ್ಕೆ ಕಡಿವಾಣ ಹಾಕಲು ಸಿದ್ದರಾಮಯ್ಯ ಅವರು ಸಚಿವರ ಜೊತೆ ಸಮಾಲೋಚನೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.
ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಗ್ರೀಟರ್ ಬೆಂಗಳೂರಿನ 5 ಮಹಾನಗರ ಪಾಲಿಕೆಗಳು, ವಿವಿಧ ನಗರ ಸಭೆಗಳು, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಪೈಕಿ ಜಿಲ್ಲಾ ಪಂಚಾಯತ್, ತಾಲ್ಲೂಕು ಪಂಚಾಯತ್ ಚುನಾವಣೆಗಳು ರಾಜ್ಯ ಸರ್ಕಾರಕ್ಕೆ ಸವಾಲಿನ ಸನ್ನಿವೇಶ ಸೃಷ್ಟಿಸಿವೆ.
ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬ ಸಚಿವರಿಗೂ ನಿರ್ಧಿಷ್ಟ ಜವಾಬ್ದಾರಿಗಳನ್ನು ಹಂಚಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಸ್ಥಳೀಯ ಸಂಸ್ಥೆಗಳು ಪಕ್ಷದ ತಳಪಾಯವಾಗಿದ್ದು, ಕೆಳ ಹಂತದ ನಾಯಕತ್ವವನ್ನು ಬೆಳೆಸಲು ಹೆಚ್ಚು ಮಹತ್ವ ಪಡೆದುಕೊಂಡಿದೆ. ಹೀಗಾಗಿ ಆಯಾ ಜಿಲ್ಲಾ ಉಸ್ತುವಾರಿ ಸಚಿವರು ಜವಾಬ್ದಾರಿ ತೆಗೆದುಕೊಂಡು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಸಚಿವರ ವಿಶ್ವಾಸದೊಂದಿಗೆ ಚುನಾವಣಾ ರಣತಂತ್ರವನ್ನು ರೂಪಿಸಬೇಕು. ಅಭ್ಯರ್ಥಿಗಳ ಅಯ್ಕೆ ಸಂದರ್ಭದಲ್ಲಿ ಗೊಂದಲಗಳಾಗದಂತೆ ಎಚ್ಚರಿಕೆ ವಹಿಸಬೇಕೆಂದು ಸೂಚಿಸಲಿದ್ದಾರೆ ಎಂದು ತಿಳಿದು ಬಂದಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಬಣ ನಾಯಕತ್ವ ಬದಲಾವಣೆ ಬಗ್ಗೆ ವ್ಯಾಪಕ ಚರ್ಚೆ ಮಾಡುತ್ತಿದ್ದು ಕೆಲ ಸಚಿವರು ಇದಕ್ಕೆ ಸಂಬಂಧಪಟ್ಟಂತೆ ಪ್ರತಿಕ್ರಿಯೆ ನೀಡುತ್ತಿರುವುದರಿಂದ ಗೊಂದಲಗಳು ಸೃಷ್ಟಿಯಾಗುತ್ತಿವೆ. ಯಾವುದೇ ಹಂತದಲ್ಲೂ ಸಚಿವರು ಅಧಿಕಾರ ಹಂಚಿಕೆಯ ಬಗ್ಗೆ ಪ್ರತಿಕ್ರಿಯಿಸಬಾರದು. ಅಭಿವೃದ್ಧಿ ಕಾರ್ಯಗಳತ್ತ ಮಾತ್ರ ಗಮನ ಹರಿಸಬೇಕೆಂದು ಎಚ್ಚರಿಕೆ ನೀಡಲಿದ್ದಾರೆ.
ಸಚಿವ ಸಂಪುಟ ಪುನರ್ ರಚನೆ ಬಗ್ಗೆ ನವೆಂಬರ್ ಬಳಿಕ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ. ಒಂದು ವೇಳೆ ಹೈಕಮಾಂಡ್ ಸೂಚಿಸಿದರೆ ಅದಕ್ಕೆ ಎಲ್ಲರೂ ಸಹಕಾರ ನೀಡಬೇಕು. ವ್ಯತಿರಿಕ್ತ ರಾಜಕೀಯ ಮಾಡಬಾರದು. ಈವರೆಗೂ ಅಧಿಕಾರ ಅನುಭವಿಸಿದವರೂ ಮುಂದಿನ ದಿನಗಳಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿ ಎಂದು ಸಲಹೆ ನೀಡುವ ಸಾಧ್ಯತೆಯಿದೆ ಎನ್ನಲಾಗಿದೆ.