ಬೆಳಗಾವಿ,ಡಿ.17- ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಭೂ ಅಭಿವೃದ್ಧಿಗಳಿಗೆ ತಾಂತ್ರಿಕ ಅನುಮೋದನೆ ನೀಡುವ ಕೆಟಿಸಿಟಿ ತಿದ್ದುಪಡಿ ಕಾಯಿದೆಗೆ ಇನ್ನೊಂದು ತಿಂಗಳೊಳಗೆ ನಿಯಮ ರೂಪಿಸುವುದಾಗಿ ನಗರಾಭಿವೃದ್ಧಿ ಹಾಗೂ ನಗರ ಯೋಜನೆ ಸಚಿವ ಭೈರತಿ ಸುರೇಶ್ ಘೋಷಿಸಿದ್ದಾರೆ.
ಸದಸ್ಯ ಟಿ.ಎ.ಶರವಣ ಪ್ರಶ್ನೆಗೆ ಉತ್ತರಿಸಿದ ಅವರು, ಕೆಟಿಸಿಟಿ ತಿದ್ದುಪಡಿ ಕಾಯಿದೆ 2021 ಕ್ಕೆ ಆರ್ಥಿಕ ಇಲಾಖೆ ಮತ್ತು ಕಾನೂನು ಇಲಾಖೆಯ ಅಭಿಪ್ರಾಯ ಕೇಳಿದ್ದೆವು. ಇದು ತುರ್ತು ಅಗತ್ಯವಿರುವುದರಿಂದ ಒಂದು ತಿಂಗಳೊಳಗೆ ನಿಯಮಗಳನ್ನು ಜಾರಿ ಮಾಡುತ್ತೇವೆ ಎಂದರು.
ರಾಜಧಾನಿ ಬೆಂಗಳೂರಿನಲ್ಲಿ ಈಗಾಗಲೇ ಇದು ಬಹುತೇಕ ಯಶಸ್ವಿಯಾಗಿದೆ. ಇದನ್ನು ರಾಜ್ಯಾದ್ಯಂತ ವಿಸ್ತರಣೆ ಮಾಡಲು ಕೆಲವು ನಿಯಮಗಳು ಅತ್ಯವಶ್ಯಕವಾಗಿದ್ದವು. ಹೊಸ ನಿಯಮಗಳ ಜಾರಿಗೆ ಕರಡು ಪ್ರತಿ ಸಿದ್ಧವಾಗಿದೆ ಎಂದು ತಿಳಿಸಿದರು. ಮೂರೂವರೆ ವರ್ಷಗಳಾದರೂ ಈ ತಿದ್ದುಪಡಿಗಳಿಗೆ ನಿಯಮ ರೂಪಿಸಿರಲಿಲ್ಲ.
ಇದೀಗ ನಮ ಸರ್ಕಾರ ಹೊಸದಾಗಿ ನಿಯಮಗಳನ್ನು ರೂಪಿಸಿದೆ. 2021ರ ಪ್ರಕಾರ, ಯೋಜನಾ ಪ್ರಾಧಿಕಾರಗಳಲ್ಲದ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಭೂ ಅಭಿವೃದ್ಧಿಗಳಿಗೆ ಅನುಮೋದನೆ ನೀಡುವ ಜವಾಬ್ದಾರಿಯೂ ನಗರ ಮತ್ತು ಗ್ರಾಮಾಂತರ ಇಲಾಖೆಗಳದ್ದಾಗಿರುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ಸಚಿವ ಶರವಣ ಅವರು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ನೀಡಿದ ಉತ್ತರವು ಆಂಗ್ಲ ಭಾಷೆಯಿಂದ ಕೂಡಿದೆ. ನಿಮ ಅಧಿಕಾರಿಗಳಿಗೇನು ಕನ್ನಡ ಬರುವುದಿಲ್ಲವೇ?, ಪ್ರಶ್ನೆಗೆ ಇಂಗ್ಲಿಷ್ನಲ್ಲಿ ಉತ್ತರಿಸಿದ್ದೇಕೆ ಎಂದು ಪ್ರಶ್ನಿಸಿದರು.
ಕೆಟಿಸಿಟಿ ತಿದ್ದುಪಡಿ ಕಾಯಿದೆ ಪ್ರಕಾರ, ಭೂ ಅಭಿವೃದ್ಧಿಯು ತಾಂತ್ರಿಕ ಅನುಮೋದನೆ ನೀಡುವ ಜವಾಬ್ದಾರಿ ನಗರ ಹಾಗೂ ಗ್ರಾಮಾಂತರ ಯೋಜನೆಯ ಇಲಾಖೆಯದ್ದಾಗಿದೆ. ಅಧಿಸೂಚನೆ ತಂದ ಮೇಲೆ ನಿಯಮವನ್ನು ರಚಿಸಿಯೇ ಇಲ್ಲ ಎಂದರೆ ಹೇಗೆ?, ಕಲಂ 4(ಕೆ)/3 ರಂತೆ ನಿಯಮಗಳನ್ನು ರಚನೆ ಮಾಡಿಲ್ಲ. ಭೂ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ತಮ ಇಚ್ಛೆಯಂತೆ ದಂಧೆ ಮಾಡಿಕೊಳ್ಳಲು ಸರ್ಕಾರ ಅನುವು ಮಾಡಿಕೊಟ್ಟಿದೆ.
ನಿಯಮಗಳನ್ನು ರೂಪಿಸಲು ಆರ್ಥಿಕ ಇಲಾಖೆ, ಕಾನೂನು ಇಲಾಖೆಯ ಅನುಮತಿ ಏಕೆ ಬೇಕು?, ಒಂದು ಸಣ್ಣ ಮನೆ ಕಟ್ಟಿಸಲು ಇಷ್ಟು ತೊಂದರೆ ಕೊಡುತ್ತಿದ್ದಾರೆಂದು ಜನರಿಗೆ ಗೊತ್ತು. ಒಂದು ಸರ್ಕಾರಕ್ಕೆ ನಿಯಮಗಳನ್ನು ರೂಪಿಸಲು ಸಾಧ್ಯವಿಲ್ಲ ಎಂದರೆ ಹೇಗೆಂದು ಸರ್ಕಾರವನ್ನು ಶರವಣ ತರಾಟೆಗೆ ತೆಗೆದುಕೊಂಡರು.