Friday, June 28, 2024
Homeರಾಜಕೀಯಮೋದಿಗೆ ಮತ್ತಷ್ಟು ಹತ್ತಿರವಾದ ಕುಮಾರಸ್ವಾಮಿ, ಬಿಜೆಪಿಯಲ್ಲಿ ಕೆಲವರಿಗೆ ಉರಿ ಉರಿ

ಮೋದಿಗೆ ಮತ್ತಷ್ಟು ಹತ್ತಿರವಾದ ಕುಮಾರಸ್ವಾಮಿ, ಬಿಜೆಪಿಯಲ್ಲಿ ಕೆಲವರಿಗೆ ಉರಿ ಉರಿ

ಬೆಂಗಳೂರು,ಜೂ.15- ಲೋಕಸಭೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಜ್ಯ ಬಿಜೆಪಿಯಲ್ಲಿ ಕೇಂದ್ರದ ನರೇಂದ್ರಮೋದಿ ಸಂಪುಟದಲ್ಲಿ ಸಚಿವರಾಗಿರುವ ಹೆಚ್‌‍.ಡಿ.ಕುಮಾರಸ್ವಾಮಿಗೆ ಹೆಚ್ಚಿನ ಮನ್ನಣೆ ಸಿಗುತ್ತಿರುವುದು ಒಂದು ಬಣದಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.

ಕೇಂದ್ರದಲ್ಲಿ ಕೃಷಿ ಖಾತೆಯನ್ನು ನಿರೀಕ್ಷೆ ಮಾಡಿದ್ದ ಕುಮಾರಸ್ವಾಮಿಗೆ ಸ್ವತಃ ಅವರೇ ಶಾಕ್‌ ಆಗುವಂತೆ ಭಾರೀ ಕೈಗಾರಿಕೆ ಖಾತೆಯನ್ನು ನೀಡಲಾಗಿತ್ತು. ಪ್ರಮಾಣ ವಚನ ಸ್ವೀಕರಿಸುವ ವೇಳೆ ಎನ್‌ಡಿಎ ಮೈತ್ರಿ ಪಕ್ಷಗಳ ಪೈಕಿ ಹೆಚ್‌ಡಿಕೆ ಮೊದಲನೇಯವರಾಗಿ ಸ್ವೀಕಾರ ಮಾಡಿದ್ದರು.

ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಜೆಡಿಎಸ್‌‍ ಜತೆಗಿನ ಮೈತ್ರಿಯಿದ ಬಿಜೆಪಿಗೆ ಹೆಚ್ಚಿನ ಲಾಭವೇನೂ ಆಗಿಲ್ಲ. ಆದರೆ ಈ ಮೈತ್ರಿಯಿಂದ ಲಾಭ ಪಡೆದಿರುವ ಮಾಜಿ ಮುಖ್ಯಮಂತ್ರಿ ಎಚ್‌‍.ಡಿ.ಕುಮಾರಸ್ವಾಮಿ ಗೆದ್ದ ನಂತರ ಉರುಳಿಸುತ್ತಿರುವ ಒಂದೊಂದೇ ದಾಳ ಬಿಜೆಪಿಯ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅದಕ್ಕಿಂತ ಹೆಚ್ಚಾಗಿ ಸಂಘ ಪರಿವಾರದ ಹಿನ್ನಲೆಯಿಂದ ಬಂದಿರುವ ಮೂಲ ಬಿಜೆಪಿ ಮುಖಂಡರಿಗೆ ಹೆಚ್ಚು ಕಿರಿಕಿರಿ ಉಂಟು ಮಾಡಿದೆ.

ಲೋಕಸಭೆ ಚುನಾವಣೆಯಲ್ಲಿ ಗೆದ್ದಿರುವ ಮಾಜಿ ಸಚಿವರಾದ ವಿ.ಸೋಮಣ್ಣ, ಡಾ.ಸುಧಾಕರ್‌ ಹಾಗೂ ತೇಜಸ್ವೀ ಸೂರ್ಯ ಸೇರಿದಂತೆ ಕೆಲವರು ನೇರವಾಗಿ ಜೆಡಿಎಸ್‌‍ನ ಪ್ರಶ್ನಾತೀತ ನಾಯಕ, ಮಾಜಿ ಪ್ರಧಾನಿ ಎಚ್‌‍.ಡಿ.ದೇವೇಗೌಡರು ಹಾಗೂ ಕುಮಾರ ಸ್ವಾಮಿಯವರನ್ನು ಭೇಟಿ ಮಾಡಿ ಕೃತಜ್ಞತೆ ಸಲ್ಲಿಸಿದ್ದರು.

ಅದರಲ್ಲೂ ತುಮಕೂರು ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳಿಂದ ಗೆದ್ದಿರುವ ವಿ.ಸೊಮಣ್ಣ ಮತ್ತು ಡಾ.ಸುಧಾಕರ್‌ ತಮ ಗೆಲುವಿಗೆ ಜೆಡಿಎಸ್‌‍ ನಾಯಕತ್ವದ ಬೆಂಬಲವೇ ಪ್ರಮುಖ ಕಾರಣ ಎಂದು ಬಹಿರಂಗವಾಗೇ ಘೋಷಿಸಿರುವುದು ಮತ್ತು ಫಲಿತಾಂಶ ಘೋಷಣೆಯಾದ ಮರುಕ್ಷಣವೇ ಜೆಡಿಎಸ್‌‍ ನಾಯಕರನ್ನು ಭೇಟಿ ಮಾಡಿರುವುದು ಬಿಜೆಪಿಯ ವರಿಷ್ಠರಿಗೆ ಅಸಮಾಧಾನ ತಂದಿದೆ.

ವಿಶೇಷ ಎಂದರೆ ಈ ಇಬ್ಬರೂ ಮುಖಂಡರೂ ಬೇರೆ ಪಕ್ಷಗಳಿಂದ ಬಿಜೆಪಿಗೆ ವಲಸೆ ಬಂದವರು ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಧಿಕಾರ ಅನುಭವಿಸಿದವರು ಎಂಬುದು ಇಲ್ಲಿ ಗಮನಿಸಬೇಕಾದ ಅಂಶ. ಹಾಗೆಯೇ ಇತ್ತೀಚಿನ ದಿನಗಳಲ್ಲಿ ಸೋಮಣ್ಣ ಪಕ್ಷದ ಹಿರಿಯ ನಾಯಕ ಯಡಿಯೂರಪ್ಪ ಹಾಗೂ ಅವರ ಪುತ್ರ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ವಿರುದ್ಧ ನೇರವಾಗೇ ಸಮರ ಸಾರಿದ್ದರು.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮೈಸೂರಿನ ವರುಣಾ ಹಾಗೂ ಚಾಮರಾಜ ನಗರ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಸೋತ ಸೋಮಣ್ಣ ತಮ ಸೋಲಿಗೆ ಯಡಿಯೂರಪ್ಪ ಮತ್ತು ಅವರ ಪುತ್ರ ಹಾಗೂ ಅವರ ಬೆಂಬಲಿಗರೇ ಕಾರಣ ಎಂದು ವರಿಷ್ಠರಿಗೆ ದೂರಿದ್ದು ಈಗ ಗುಟ್ಟೇನಲ್ಲ ಎಂಬುದು ಬಿಜೆಪಿ ಪಾಳಯದಲ್ಲಿ ಕೇಳಿ ಬರುತ್ತಿರುವ ಮಾತು.

ಈಗ ಚುನಾವಣೆಯಲ್ಲಿ ಗೆದ್ದ ನಂತರ ಸೋಮಣ್ಣ ತಮ ಗೆಲುವಿಗೆ ಜೆಡಿಎಸ್‌‍ ನಾಯಕರು, ಕಾರ್ಯಕರ್ತರು ಹಾಗೂ ಬಿಜೆಪಿ ವರಿಷ್ಠರೇ ಕಾರಣ ಎಂದೂ ಹೇಳುತ್ತಿರುವುದನ್ನು ಸೂಕ್ಷ್ಮವಾಗಿ ಗಮನಿಸಿದರೆ ಅವರು ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರನ್ನು ಗುರಿಯಾಗಿಸಿಕೊಂಡಿರುವುದು ಕಾಣುತ್ತದೆ.

ಇದೇ ಮಾದರಿಯಲ್ಲಿ ಡಾ. ಸುಧಾಕರ್‌ ಕೂಡ ಪ್ರತಿಕ್ರಿಯಿಸಿದ್ದಾರೆ. ಅಲ್ಲಿಗೆ ಬಿಜೆಪಿಯ ದೆಹಲಿ ವರಿಷ್ಠರ ಪಗಡೆಯಾಟಕ್ಕೆ ರಾಜ್ಯದಲ್ಲಿ ಇಬ್ಬರು ಪ್ರಮುಖ ಮುಖಂಡರು ಸಿಕ್ಕಂತಾಗಿದೆ. ಈ ಅವಕಾಶವನ್ನು ಬಳಸಿಕೊಂಡು ಮುಂದಿನ ದಿನಗಳಲ್ಲಿ ಯಡಿಯೂರಪ್ಪ ಅವರನ್ನು ಮೂಲೆಗೊತ್ತುವ ಪ್ರಯತ್ನ ಶುರುವಾಗಿದೆ ಎಂಬುದನ್ನು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬಿಜೆಪಿ ಮುಖಂಡರು ಒಪ್ಪಿಕೊಳ್ಳುತ್ತಾರೆ.

ಬಿಜೆಪಿಯಲ್ಲಿನ ಈ ವಿದ್ಯಮಾನಗಳನ್ನು ಅರಿತಿರುವ ಕುಮಾರಸ್ವಾಮಿ ಯಡಿಯೂರಪ್ಪ ವಿರುದ್ಧ ಒಳಗೊಳಗೇ ಕುದಿಯುತ್ತಿರುವ ಪ್ರಮುಖ ಮುಖಂಡರುಗಳನ್ನು ತಾವಾಗೇ ಸಂಪರ್ಕಿಸಿ ವಿಶ್ವಾಸಕ್ಕೆ ತಗೆದುಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಈಗಿನ ಬೆಳವಣಿಗೆ.
ಒಂದಂತೂ ಸ್ಪಷ್ಟ.

ಲೋಕಸಭಾ ಚುನಾವಣೆಗೆ ಮುನ್ನ ಜೆಡಿಎಸ್‌‍ ಅಸ್ತಿತ್ವ ಮುಗಿದೇ ಹೋಯಿತು ಎಂದು ಟೀಕಿಸುತ್ತಿದ್ದವರಿಗೆ ಮಂಡ್ಯದಲ್ಲಿ ಕುಮಾರಸ್ವಾಮಿ ಹಾಗೂ ಕೋಲಾರದಲ್ಲಿ ಜೆಡಿಎಸ್‌‍ ಅಭ್ಯರ್ಥಿ ಮಲ್ಲೇಶ ಬಾಬು ಹಾಗೂ ಬೆಂಗಳೂರು ಗ್ರಾಮಾಂತರದಲ್ಲಿ ದೇವೇಗೌಡರ ಅಳಿಯ ಬಿಜೆಪಿ ಅಭ್ಯರ್ಥಿ ಡಾ.ಸಿ.ಎನ್‌.ಮಂಜುನಾಥ್‌ ಅವರ ಗೆಲವು ಮತ್ತೆ ಉತ್ಸಾಹ ಪುಟಿಯುವಂತೆ ಮಾಡಿದೆ.

ಅದರಲ್ಲೂ ಬೆಂಗಳೂರು ಗ್ರಾಮಾಂತರದಲ್ಲಿ ಕಾಂಗ್ರೆಸ್‌‍ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಸೋದರ ಡಿ.ಕೆ.ಸುರೇಶ್‌ ಅವರನ್ನು ಭಾರೀ ಮತಗಳ ಅಂತರದಿಂದ ಸೋಲಿಸಿದ್ದು ಕುಮಾರಸ್ವಾಮಿಯವರ ಗೆಲುವಿನ ಓಟದ ಹುಮಸ್ಸನ್ನು ಅಧಿಕಗೊಳಿಸಿದೆ.

ಕೇಂದ್ರ ಸಂಪುಟದಲ್ಲಿ ಕುಮಾರಸ್ವಾಮಿ ಸಚಿವರಾಗಿದ್ದು, ಈ ಅವಕಾಶವನ್ನು ಬಳಸಿಕೊಂಡು ರಾಜ್ಯದಲ್ಲಿ ಮತ್ತೆ ತಮ ಪಕ್ಷಕ್ಕೆ ಜೀವ ತುಂಬಲು ಕುಮಾರಸ್ವಾಮಿ ಸಿದ್ಧವಾಗುತ್ತಿದ್ದಾರೆ. ಬಿಜೆಪಿ ನಾಯಕತ್ವಕ್ಕೂ ಇದೇ ಬೇಕಾಗಿದೆ. ಕಾಂಗ್ರೆಸ್‌‍ನಲ್ಲಿ ಪ್ರಬಲರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ಪ್ರಾಬಲ್ಯ ಮಣಿಸಲು ಕುಮಾರಸ್ವಾಮಿ ಪ್ರಮುಖ ಅಸ್ತ್ರವಾಗುತ್ತಾರೆ ಎಂಬ ಅಚಲ ನಂಬಿಕೆ ಅವರಿಗಿದೆ. ಈ ಅವಶ್ಯಕತೆ ಪೂರೈಸುವವರೆಗೆ ಕುಮಾರಸ್ವಾಮಿ ಬಿಜೆಪಿ ದೆಹಲಿ ನಾಯಕರ ಪಾಲಿಗೆ ಆಪದ್ಭಾಂದವನಾಗಿರುತ್ತಾರೆ.

RELATED ARTICLES

Latest News