Wednesday, January 15, 2025
Homeರಾಜ್ಯವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಆಚರಿಸಿದ ಕುಮಾರಸ್ವಾಮಿ

ವಿಕಲಚೇತನ ಉದ್ಯೋಗಿಗಳ ಜತೆ ಸಂಕ್ರಾಂತಿ ಆಚರಿಸಿದ ಕುಮಾರಸ್ವಾಮಿ

Kumaraswamy celebrated Sankranti with disabled employees

ಬೆಂಗಳೂರು, ಜ.14-ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೂರಾರು ವಿಕಲಚೇತನ ಉದ್ಯೋಗಿಗಳು ಕೇಂದ್ರ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರೊಂದಿಗೆ 6ನೇ ವರ್ಷದ ಸಂಕ್ರಾಂತಿ ಹಬ್ಬ ಆಚರಿಸಿದರು.

2019ರಿಂದಲೂ 600ಕ್ಕೂ ಹೆಚ್ಚು ವಿಕಲಚೇತನ ಉದ್ಯೋಗಿಗಳು ಕುಮಾರಸ್ವಾಮಿ ಅವರೊಂದಿಗೆ ಪ್ರತೀ ವರ್ಷ ತಪ್ಪದೇ ಸಂಕ್ರಾಂತಿ ಹಬ್ಬ ಆಚರಿಸಿಕೊಂಡು ಬರುತ್ತಿದ್ದಾರೆ. ತಮ್ಮ ಕುಟುಂಬ ಸಮೇತವಾಗಿ ಸಚಿವರ ಜೆ.ಪಿ.ನಗರದ ನಿವಾಸಕ್ಕೆ ಬಂದು ಹಬ್ಬ ಆಚರಿಸಿದರು.

ನಿಮ ಹಾರೈಕೆ ಪ್ರೀತಿಯೇ ನನಗೆ ಶ್ರೀರಕ್ಷೆ: ಈ ಸಂದರ್ಭದಲ್ಲಿ ಎಲ್ಲರಿಗೂ ಶುಭ ಕೋರಿದ ಕುಮಾರಸ್ವಾಮಿ, ನಿಮ ಪ್ರೀತಿ ವಿಶ್ವಾಸಕ್ಕೆ ನಾನು ಋಣಿ ಆಗಿದ್ದೇನೆ. ನಿಮ ಹೃದಯದಲಿ ಸ್ಥಾನ ಕೊಟ್ಟಿದ್ದಕ್ಕೆ ನಾನು ಆಭಾರಿ. ನಿಮ ಹಾರೈಕೆ ಪ್ರೀತಿಯೇ ನನಗೆ ಶ್ರೀರಕ್ಷೆ ಎಂದು ಭಾವುಕರಾದರು.

ಅವಕಾಶ ಸಿಕ್ಕಿದಾಗ ನನ್ನ ಕೈಲಾದಷ್ಟು ಸಹಾಯ ಮಾಡಿದ್ದೇನೆ. ವಿಕಲಚೇತನರಿಗೆ ಸಾಧ್ಯವಾದಷ್ಟು ನೆರವು ಕೊಟ್ಟಿದ್ದೇನೆ. ಪ್ರಾಮಾಣಿಕವಾಗಿ ಅಂತಹವರ ಒಳಿತಿಗಾಗಿ ಪ್ರಯತ್ನ ಮಾಡುತ್ತೇನೆ ಎಂದರು.

ಸಮಾಜದಲ್ಲಿ ಕೆಟ್ಟ ವಾತಾವರಣ ಸೃಷ್ಟಿ:
ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕೊಯ್ದ ಘಟನೆ ನಡೆದಿದೆ. ಆ ದೃಶ್ಯವನ್ನು ನಾನು ವಿದ್ಯುನಾನ ಮಾಧ್ಯಮಗಳಲ್ಲಿ ನೋಡಿ ತೀವ್ರ ಆಘಾತಕ್ಕೆ ಒಳಗಾದೆ. ಮನಸ್ಸಿಗೆ ಬಹಳ ನೋವಾಯಿತು. ಇಂಥ ಪರಿಸಿತಿಯಿಂದ ಸಮಾಜವನ್ನು ಹೊರಕ್ಕೆ ತರಬೇಕಿದೆ ಎಂದು ಕುಮಾರಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಸಚಿವ ಕುಮಾರಸ್ವಾಮಿ ಅವರಿಗೆ ಅಹವಾಲು ಸಲ್ಲಿಸಿದ ವಿಕಲಚೇತನ ಉದ್ಯೋಗಿಗಳು, ಮುಂದಿನ ವರ್ಷ ದೇಶದ ಎಲ್ಲೆಡೆಯಿಂದ ಬಂದು ನಿಮಗೆ ಶುಭ ಕೋರುವಂತಾಗಬೇಕು. ತಾವು ಹೆಚ್ಚು ಪ್ರಮಾಣದಲ್ಲಿ ದೇಶಾದ್ಯಂತ ಇರುವ ಕೇಂದ್ರ ಸರ್ಕಾರಿ ಸ್ವಾಮ್ಯದ ಕೈಗಾರಿಕೆಗಳಲ್ಲಿ ವಿಕಲಚೇತನರಿಗೆ ಉದ್ಯೋಗ ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

ಆರೋಗ್ಯ ವಿಮೆ ಮರು ಜಾರಿ ಮಾಡಿಸಿ: ಪ್ರಧಾನಿ ನರೇಂದ್ರ ಮೋದಿ ಅವರು 2015ರಲ್ಲಿ ವಿಕಲಚೇತನರಿಗಾಗಿಯೇ ಸ್ವಾವಲಂಬನ ಆರೋಗ್ಯ ವಿಮೆ ಯೋಜನೆಯನ್ನು ಜಾರಿಗೆ ತಂದಿದ್ದರು. ಆ ಯೋಜನೆ ಈಗ ನಿಂತು ಹೋಗಿದೆ. ಈ ಯೋಜನೆಯನ್ನು ಮತ್ತೆ ಆರಂಭ ಮಾಡಿಸಬೇಕು ಎಂದು ಅವರು ಮನವಿ ಮಾಡಿದರು. ಈ ಮನವಿಗೆ ಸ್ಪಂದಿಸಿದ ಸಚಿವರು, ವಿಮಾ ಯೋಜನೆ ಮರು ಜಾರಿ ಮಾಡುವುದಕ್ಕೆ ಸಂಬಂಧಪಟ್ಟ ಸಚಿವರ ಗಮನ ಸೆಳೆಯುತ್ತೇನೆ ಎಂದು ಅವರು ಭರವಸೆ ನೀಡಿದರು.

RELATED ARTICLES

Latest News