ಬೆಂಗಳೂರು,ಮೇ7-ಹಾಸನದ ಅಶ್ಲೀಲ ವಿಡಿಯೋವುಳ್ಳ ಪೆನ್‌ಡ್ರೈವ್ ಸೋರಿಕೆ ಹಿಂದೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇದ್ದಾರೆ ಎಂಬ ಆರೋಪ ಬಂದಿರುವ ಹಿನ್ನಲೆಯಲ್ಲಿ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪೆನ್‌ಡ್ರೈವ್ ಪ್ರಕರಣದ ಬಗ್ಗೆ ವಿಶೇಷ ತನಿಖಾ ದಳ ನಿಷ್ಪಕ್ಷಪಾತ ಹಾಗೂ ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಇದನ್ನು ಸಿಬಿಐ ತನಿಖೆಗೆ ವಹಿಸಬೇಕು ಇಲ್ಲವೇ ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನೈತಿಕತೆ ಇದ್ದರೆ ಆರೋಪ ಕೇಳಿಬಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಸಂಪುಟದಿಂದ ಕೈಬಿಡಬೇಕೆಂದು ಆಗ್ರಹಿಸಿದರು. ಅನ್ಯಾಯವಾಗಿರುವ ಹೆಣ್ಣುಮಕ್ಕಳಿಗೆ ನ್ಯಾಯ ದೊರಕಬೇಕಾದರೆ ಸಿಬಿಐ ತನಿಖೆಗೆ ವಹಿಸಬೇಕು ಎಂದ ಅವರು, ಈ ಪ್ರಕರಣದಲ್ಲಿ ಕಾಂಗ್ರೆಸ್‌ಗೆ ಪ್ರಚಾರ ಪಡೆಯುವ ಉದ್ದೇಶವೇ ಹೊರತು ಪಾರದರ್ಶಕ ತನಿಖೆ ನಡೆಸುವುದಲ್ಲ ಎಂದು ಹೇಳಿದರು.
ಎಸ್‌ಐಟಿಯು ನಿಷ್ಪಕ್ಷಪಾತವಾಗಿ ಪಾರದರ್ಶಕವಾಗಿ ತನಿಖೆ ನಡೆಸುತ್ತಿಲ್ಲ. ಸಿದ್ದರಾಮಯ್ಯ ಇನ್ವೆಸ್ಟಿಗೇಷನ್ ಟೀಂ ಶಿವಕುಮಾರ್ ಇನ್ವೆಸ್ಟಿಗೇಷನ್ ಟೀಂ ಆಗಿದೆ ಎಂದು ಆರೋಪಿಸಿದರು.ಹಾಸನದ ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಅವರ ಚುನಾವಣಾ ಏಜೆಂಟ್ ಪೂರ್ಣಚಂದ್ರ ತೇಜಸ್ವಿ ಅವರು ನೀಡಿದ ದೂರಿನ ಮೇಲೆ ಯಾವುದೇ ಕ್ರಮ ಕೈಗೊಂಡಿಲ್ಲ.
ಏ.21ರ ರಾತ್ರಿ ಅಶ್ಲೀಲ ವಿಡಿಯೋ ಬಿಡುಗಡೆಗೆ ಕ್ಷಣಗಣನೆ ಎಂದು ಪೋಸ್‌್ಟ ಹಾಕಿದ್ದ ವ್ಯಕ್ತಿಯ ಮೇಲೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೆನ್‌ಡ್ರೈವ್‌ನ್ನು ಹಂಚಿಕೆ ಮಾಡಿದವರು ಯಾರು ಎಂದು ಪತ್ತೆಹಚ್ಚಿಲ್ಲ. ಕೇವಲ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತು ಸಂಸದ ಪ್ರಜ್ವಲ್ ರೇವಣ್ಣ ಅವರ ಬಗ್ಗೆ ಮಾತ್ರ ಎಸ್‌ಐಟಿ ತನಿಖೆ ಮಾಡುತ್ತಿದೆ. ಇವರಿಬ್ಬರಿಗೆ ಲುಕೌಟ್ ನೋಟಿಸ್ ಹೊರಡಿಸಿದ್ದಾರೆ.
ಆದರೆ 25 ಸಾವಿರ ಪೆನ್‌ಡ್ರೈವ್ ಹಂಚಿಕೆ ಮಾಡಲಾಗಿದೆ ಎಂದು ವರದಿಯಾಗಿದೆ. ಹಂಚಿಕೆ ಮಾಡಿದವರ ಬಗ್ಗೆ ಲುಕೌಟ್ ನೋಟಿಸ್ ಎಸ್‌ಐಟಿ ಹೊರಡಿಸಿಲ್ಲ. ಪೆನ್‌ಡ್ರೈವ್‌ನಲ್ಲಿ ಹಿಂದೆ ಯಾರ್ಯಾರ ಪಾತ್ರವಿದೆ ಎಂಬ ಸತ್ಯಾಂಶ ಹೊರಬರಬೇಕೆಂದು ಆಗ್ರಹಿಸಿದರು.
ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರು ಮುಖ್ಯಮಂತ್ರಿಗೆ ಪತ್ರ ಬರೆದು, ಅಶ್ಲೀಲ ವಿಡಿಯೋ ಚಿತ್ರೀಕರಣದ ಮಾಡಿದ ಹಾಗೂ ಅದನ್ನು ಬಹಿರಂಗಗೊಳಿಸಿದವರನ್ನು ಪತ್ತೆಹಚ್ಚಬೇಕು ಹಾಗೂ ಪ್ರಭಾವಿ ರಾಜಕಾರಣಿಗಳು ಇದ್ದಾರೆ ಎಂದು ಉಲ್ಲೇಖಿಸಿದ್ದಾರೆ.
ಅದರಲ್ಲಿ ರೇವಣ್ಣ ಹೆಸರಾಗಲಿ, ಪ್ರಜ್ವಲ್ ರೇವಣ್ಣ ಅವರ ಹೆಸರಾಗಲಿ ಇಲ್ಲ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎಕ್‌್ಸನಲ್ಲಿ ಪೋಸ್‌್ಟ ಮಾಡಿ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣವನ್ನು ಎಸ್‌ಐಟಿಗೆ ವಹಿಸಿರುವುದಾಗಿ ಪೋಸ್‌್ಟ ಮಾಡಿದ್ದಾರೆ. ಇದು ಸಂಚು ನಡೆದಿರುವುದಕ್ಕೆ ನಿದರ್ಶನ ಎಂದು ಆರೋಪಿಸಿದರು.
ಸಂಭಾಷಣೆಯ ರೆಕಾರ್ಡ್ ಕೇಳಿಸಿದ ಕುಮಾರಸ್ವಾಮಿ:
ಹಾಸನದ ಪೆನ್‌ಡ್ರೈವ್ ಕುರಿತಂತೆ ನಡೆದಿದೆ ಎನ್ನಲಾದ ಸಂಭಾಷಣೆಯೊಂದನ್ನು ಪತ್ರಿಕಾಗೋಷ್ಠಿಯಲ್ಲಿ ಕೇಳಿಸಿದರು. ಅದರಲ್ಲಿ 700 ಪೆನ್‌ಡ್ರೈವ್‌ಗಳನ್ನು ಆನಗೋಳದಲ್ಲಿ ಹಂಚಿಕೆ ಮಾಡಿರುವುದಾಗಿ ಸಂಭಾಷಣೆಯಲ್ಲಿ ವ್ಯಕ್ತವಾಗಿದೆ.
ಅಪಹರಣವಾಗಿದ್ದಾರೆ ಎನ್ನಲಾದ ಮಹಿಳೆ ಪತ್ತೆಯಾಗಿ ಎರಡು ದಿನವಾದರೂ ಇನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿಲ್ಲ. ಆ ಪೆನ್‌ಡ್ರೈವ್ ಸೋರಿಕೆ ಮಾಡಿದವರಿಗೆ ಯಾವ ನೋಟಿಸ್ ಕೊಟ್ಟಿದ್ದೀರಿ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರನ್ನು ಪ್ರಶ್ನಿಸಿದರು.
ಈ ಘಟನೆಯ ನಂತರ ನಾನು ಲೋಕಸಭೆಗೆ ಹೋಗಬೇಕೋ ಅಥವಾ ಇಲ್ಲಿಯೇ ಉಳಿಯಬೇಕೋ ಎಂಬ ಚಿಂತನೆಯಲ್ಲಿದ್ದೇನೆ ಎಂದರು.
ಅಶ್ಲೀಲ ದೃಶ ನೋಡಿಲ್ಲ. ಅದರ ಬಗ್ಗೆ ಆಸಕ್ತಿ ಇಲ್ಲ ಇದೇ ಸಂದರ್ಭದಲ್ಲಿ ಅವರು ಹೇಳಿದರು.ಚುನಾವಣೆ ಮೇಲೆ ಪ್ರಭಾವವಿಲ್ಲ: ಪೆನ್‌ಡ್ರೈವ್ ಪ್ರಕರಣ ಲೋಕಸಭೆ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಈ ವಿಚಾರ ಬಹಿರಂಗವಾದ ನಂತರ ಶಿವಮೊಗ್ಗ, ರಾಯಚೂರು, ಕೊಪ್ಪಳ, ಕಲಬುರಗಿಯಲ್ಲಿ ಮೈತ್ರಿ ಅಭ್ಯರ್ಥಿ ಪರವಾಗಿ ಪ್ರಚಾರದಲ್ಲಿ ಭಾಗಿಯಾಗಿದ್ದೆ. ಜನರು ಇದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಮಾಧ್ಯಮಗಳಲ್ಲಿ ಮಾತ್ರ ವಿಜೃಂಭಿಸಲಾಗುತ್ತಿದೆ. ಇಂತಹ ಆರೋಪ ಹಲವರ ಮೇಲೂ ಕೇಳಿಬಂದಿತ್ತು. ಅವರೆಲ್ಲ ಚುನಾವಣೆಯಲ್ಲಿ ಗೆದ್ದಿದ್ದಾಎ ಎಂದರು.
ಬಿಜೆಪಿ ರಾಷ್ಟ್ರೀಯ ಪಕ್ಷವಾಗಿದ್ದು, ಮೈತ್ರಿ ಮುಂದುವರಿಕೆ ಬಗ್ಗೆ ಏನು ತೀರ್ಮಾನ ಮಾಡುತ್ತಾರೋ ಗೊತ್ತಿಲ್ಲ. ಮುಂದುವರೆಸುತ್ತಾರೋ ಇಲ್ಲವೋ ಎಂಬ ಚಿಂತೆ ನನಗೂ ಇಲ್ಲ. ಪೆನ್‌ಡ್ರೈವ್ ಪ್ರಕರಣ ತಾರ್ಕಿಕ ಅಂತ್ಯವಾಗಬೇಕು ಎಂಬುದಷ್ಟೇ ಎಂದು ಹೇಳಿದರು.
ವಿಧಾನಪರಿಷತ್‌ನ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16ರವರೆಗೆ ಅವಕಾಶವಿದೆ.
ದೀರ್ಘಾವಧಿ ಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಬಿಜೆಪಿಯವರು ಯಾವ ತೀರ್ಮಾನ ಕೈಗೊಳ್ಳುತ್ತಾರೋ ಗೊತ್ತಿಲ್ಲ. ಗ್ಯಾರಂಟಿಯಿಂದ ಬೀಗುತ್ತಿದ್ದ ಕಾಂಗ್ರೆಸ್‌ಗೆ ಬಿಜೆಪಿ ಜೆಡಿಎಸ್ ಮೈತ್ರಿ ನಿದ್ದೆಗೆಡಿಸಿದೆ. ಚುನಾವಣಾ ಫಲಿತಾಂಶವು ಮುಂದಿನ ಅವರ ಭವಿಷ್ಯದ ಫಲಿತಾಂಶದ ತಳಮಳ ಶುರುವಾಗಿದೆ ಎಂದು ವ್ಯಂಗ್ಯವಾಡಿದರು.ಸುದಿಗೋಷ್ಠಿಯಲ್ಲಿ ವಿಧಾನಪರಿಷತ್ ಸದಸ್ಯ ಟಿ.ಎ.ಶರವಣ, ಮಾಜಿ ಸದಸ್ಯರಾದ ಚೌಡರೆಡ್ಡಿ, ರಮೇಶ್ ಗೌಡ, ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ, ಪಕ್ಷದ ಮುಖಂಡ ಆರ್.ಪ್ರಕಾಶ್ ಮತ್ತಿತರರು ಉಪಸ್ಥಿತರಿದ್ದರು.