ಬೆಂಗಳೂರು, ಮೇ 8- ಪೆನ್‌ಡ್ರೈವ್ ಪ್ರಕರಣದಲ್ಲಿ ತೀರ್ಪು ನೀಡುವ ಮಾದರಿಯಲ್ಲಿ ಮಾತನಾಡುತ್ತಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನ್ಯಾಯಾಧೀಶರಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೆನ್‌ಡ್ರೈವ್ ಕುರಿತು ಕುಮಾರಸ್ವಾಮಿಯವರಿಗೆ ಸಂಪೂರ್ಣವಾಗಿ ಎಲ್ಲವೂ ಗೋತ್ತು. ವಕೀಲ ದೇವರಾಜೇಗೌಡ ಈಗ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿಗೆ ಪಾಪ ನನ್ನ ರಾಜೀನಾಮೆ ಬೇಕಂತೆ. ಒಕ್ಕಲಿಗರ ನಾಯಕತ್ವಕ್ಕೆ ಪೈಪೋಟಿಯಂತೆ. ರಾಜೀನಾಮೆ ಕೊಡೋಣ, ಒಬ್ಬರನ್ನೇ ಮುಗಿಸುವುದೇ ಅಲ್ಲವೇ ಅವರ ಕೆಲಸ. ಬ್ಲಾಕ್‌ಮೇಲ್ ಮಾಡುವುದೇ ಅವರ ವೃತ್ತಿ. ಕಿಂಗ್ ಆಫ್ ಬ್ಲಾಕ್‌ಮೇಲ್ ಎಂದು ಟೀಕಿಸಿದರು.
ಅಧಿಕಾರಿಗಳಿಗೆ, ರಾಜಕಾರಣಿಗಳಿಗೆ ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಮಾಡಲಿ, ಮುಂದೆ ಚರ್ಚೆ ಮಾಡಲು ಸಮಯ ಇದೆ. ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಲಿ. ಮೊದಲು ಕುಮಾರಸ್ವಾಮಿ ತಮ ಮಾತಿಗೆ ಬದ್ಧವಾಗಿರಲಿ. ಆರಂಭದಲ್ಲಿ ನನ್ನ ಮತ್ತು ದೇವೇಗೌಡರ ಹೆಸರು ತೆಗೆದುಕೊಳ್ಳಬೇಡಿ, ನಮ ಹಾಗೂ ರೇವಣ್ಣನವರ ಕುಟುಂಬಕ್ಕೆ ಸಂಬಂಧ ಇಲ್ಲ ಎಂದಿದ್ದರು.
ಕುಮಾರಸ್ವಾಮಿಯವರ ಪುತ್ರನೂ ಹೇಳಿದ್ದ. ಮತ್ಯಾಕೆ ಚಿಂತೆ ಮಾಡಿಕೊಳ್ಳುತ್ತಿದ್ದಾರೆ. ಉಪ್ಪು ತಿಂದವನು ನೀರು ಕುಡಿಯಬೇಕು, ಕಾನೂನು ಪ್ರಕಾರ ಕ್ರಮ ಕೈಗೊಳ್ಳಿ ಎಂದು ಹೇಳಿದವರು, ಈಗ ಯಾಕೆ ಮಾತನಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಇವರೇನು ವಕೀಲರೇ ಅಥವಾ ನ್ಯಾಯಾದೀಶರೇ ತೀರ್ಪು ನೀಡಲು. ಪಾಯಿಂಟ್ ಪಾಯಿಂಟ್ ಮಾತನಾಡುತ್ತಿದ್ದಾರೆ. ಹೋಗಿ ನ್ಯಾಯಾಲಯಕ್ಕೆ ವಾದ ಮಾಡಲಿ. ಎಸ್‌ಐಟಿಯನ್ನು ಶಿವಕುಮಾರ್ ತನಿಖಾ ದಳ, ಸಿದ್ದರಾಮಯ್ಯ ತನಿಖಾ ದಳ ಎಂದು ಆರೋಪಿಸುತ್ತಿದ್ದಾರೆ. ಪೆನ್‌ಡ್ರೈವ್ ಬಹಿರಂಗಗೊಳ್ಳುವ ವಿಚಾರದಲ್ಲಿ ಬಿಜೆಪಿಯವರ ಕಡೆಯಿಂದ ಏನು ಮಾಡಿಸಬೇಕೋ ಅದನ್ನು ಮಾಡಿಸಿದ್ದಾರೆ. ಕುಮಾರಸ್ವಾಮಿ ಏನು ಮಾಡಬೇಕೋ ಮಾಡಿದ್ದಾರೆ, ಮೊದಲು ಪ್ರಕರಣದ ತನಿಖೆಯಾಗಲಿ ಎಂದು ಹೇಳಿದರು.
ಸಂತ್ರಸ್ಥರಲ್ಲಿ ಅವರ ಪಕ್ಷದ ಕಾರ್ಯಕರ್ತರೂ ಇದ್ದಾರೆ. ಮಾನ ಮರ್ಯಾದೆ ಇದ್ದರೆ ಮೊದಲು ಅವರನ್ನು ಭೇಟಿ ಮಾಡಿ, ಮಕ್ಕಳಿಗೆ, ತಂದೆತಾಯಿಗಳಿಗೆ ಧೈರ್ಯ ಹೇಳಲಿ. ಈಗ ಮಾತನಾಡುವವರು ಮೊದಲು ಅಲ್ಲಿಗೆ ಹೋಗಿ ಧೈರ್ಯ ತುಂಬಲಿ ಎಂದು ಒತ್ತಾಯಿಸಿದರು.
ಜೆಡಿಎಸ್ ಪ್ರತಿಭಟನೆಯ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್, ನನ್ನ ಹೆಸರು ಹೇಳದಿದ್ದರೆ ಅವರ ಮಾರುಕಟ್ಟೆ ಓಡಲ್ಲ. ನನ್ನ ಹೆಸರು ಇಲ್ಲ ಎಂದರೆ ಅವರಿಗೆ ನಿದ್ದೆ ಇಲ್ಲ. ನನ್ನ ಹೆಸರು ಹೇಳದಿದ್ದರೆ ಮಾಧ್ಯಮಗಳಲ್ಲೂ ಅವರನ್ನು ತೋರಿಸುವುದಿಲ್ಲ. ಪ್ರಬಲವಾದಷ್ಟು ಶತ್ರುಗಳ ಸಂಖ್ಯೆ ಹೆಚ್ಚಾಗುತ್ತದೆ ಎಂದು ಲೇವಡಿ ಮಾಡಿದರು.
ಚುನಾವಣೆ ಮುಗಿದಿದೆ, ವಿಶ್ರಾಂತಿ ಬೇಕಿತ್ತು ಅದಕ್ಕಾಗಿ ಚಿಕ್ಕಮಗಳೂರಿಗೆ ಬಂದಿದ್ದೇನೆ. ನಮ ಸಿದ್ಧಾರ್ಥ ಮನೆ ಚಿಕ್ಕನಹಳ್ಳಿಗೆ ಬಹಳ ದಿನದಿಂದ ಬರಬೇಕು ಅಂದು ಕೊಂಡಿದ್ದೆ, ಸ್ವಲ್ಪ ವಿಶ್ರಾಂತಿ ಪಡೆಯಲು ಈಗ ಬಂದಿದ್ದೇನೆ. ಇವತ್ತು ಇಲ್ಲಿದ್ದು ನಂತರ ಬೇರೆ ಕಡೆ ಹೋಗುತ್ತೇನೆ ಎಂದು ತಿಳಿಸಿದರು.