ಮೈಸೂರು, ಮಾ. 28- ಮುಖ್ಯಮಂತ್ರಿ ಸಿದ್ದರಾಮಯ್ಯನವರು ಎಂದಿನಿಂದ ಭವಿಷ್ಯ ಹೇಳುವುದನ್ನು ಆರಂಭಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.ಕುಮಾರಸ್ವಾಮಿ ಅವರು ಇಂದು ಬೆಳಿಗ್ಗೆ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂಡ್ಯದಿಂದ ಲೋಕಸಭಾ ಚುನಾವಣೆಗೆ ಸ್ರ್ಪಧಿಸಿದರೆ ಸೋಲುತ್ತಾರೆ ಎಂದು ಸಿದ್ದರಾಮಯ್ಯನವರು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯನವರು ಎಂದಿನಿಂದ ಭವಿಷ್ಯ ಹೇಳುವುದನ್ನು ಕಲಿತುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಚುನಾವಣೆ ನಂತರ ಫಲಿತಾಂಶ ಬರಲಿ. ಯಾರು ಸೋಲುತ್ತಾರೆ, ಯಾರು ಗೆಲ್ಲುತ್ತಾರೆ ಎಂಬುದನ್ನು ನೋಡೋಣ ಎಂದು ಮಾರ್ಮಿಕವಾಗಿ ನುಡಿದರು. ಮೊದಲು ಇವರು ಮೂಲ ಕಾಂಗ್ರೆಸ್ಸಿಗರ ಎಂದು ಹೇಳಲಿ. ಮೂಲ ಕಾಂಗ್ರೆಸ್ಸಿಗರನ್ನೆಲ್ಲ ಕಸದ ಬುಟ್ಟಿಗೆ ಹಾಕಿದ್ದಾರೆ ಎಂದು ಟೀಕಿಸಿದರು.
ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಯಾವುದೇ ಗೊಂದಲವಿಲ್ಲ. 2014 ರಿಂದಲೂ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಒಂದರ್ಥದಲ್ಲಿ ಒಟ್ಟಿಗೆ ಕೆಲಸ ಮಾಡುತ್ತಿದ್ದಾರೆ. ಆದರೆ ಈ ಬಾರಿ ಲೋಕಸಭಾ ಚುನಾವಣೆಗೂ ಮುನ್ನವೇ ಮೈತ್ರಿ ಮಾಡಿಕೊಂಡಿರುವುದರಿಂದ ನಮ್ಮ ಹಾಗೂ ಬಿಜೆಪಿ ಕಾರ್ಯಕರ್ತರು ಒಟ್ಟಾಗಿ ಕೆಲಸ ನಿರ್ವಹಿಸುತ್ತಾರೆ ಎಂದು ಹೇಳಿದರು.
ಅಧಿಕಾರದಲ್ಲಿದ್ದಾಗಲೇ ಕುಮಾರಸ್ವಾಮಿ ತಮ್ಮ ಮಗನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ. ಈಗ ಗೆಲ್ಲುತ್ತಾರೆಯೇ ಎಂಬ ಕಾಂಗ್ರೆಸ್ ನಾಯಕರ ಪ್ರಶ್ನೆಗೆ ಉತ್ತರಿಸಿದ ಕುಮಾರಸ್ವಾಮಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿದ್ದಾಗಲೇ ಸೋತಿದ್ದಾರೆ ಅದನ್ನು ಅವರು ಮರೆತಿದ್ದಾರೆಯೇ ಎಂದು ವ್ಯಂಗ್ಯವಾಡಿದರು.