ಬೆಂಗಳೂರು,ಜು.28- ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಾರ್ವಜನಿಕ ಉದ್ದಿಮೆಗಳನ್ನು ಪುನಶ್ಚೇತನಗೊಳಿಸಲು ಕಾರ್ಯಯೋಜನೆ ರೂಪಿಸಲಾಗುತ್ತಿದ್ದು, ಬಂಡವಾಳ ಹಿಂತೆಗೆತ ಎಂಬ ನಿರ್ಧಾರವನ್ನು ಹಿಂಪಡೆದು ಮರು ಹೂಡಿಕೆ ಎಂಬ ಪರಿಸ್ಥಿತಿ ನಿರ್ಮಾಣವಾಗಬೇಕಿದೆ. ಇದಕ್ಕಾಗಿ ಸತತ ಪ್ರಯತ್ನ ನಡೆಸಲಾಗುತ್ತಿದೆ ಎಂದು ಕೇಂದ್ರ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ಕೇಂದ್ರ ಸರ್ಕಾರ ಬಂಡವಾಳ ಹಿಂತೆಗೆತ ಎಂಬ ನಿರ್ಧಾರ ತೆಗೆದುಕೊಳ್ಳಲಾಗಿದೆ. ಬಹಳಷ್ಟು ಕಂಪನಿಗಳು ಮುಚ್ಚಿ ಹೋಗಿವೆ. ಎಚ್‌ಎಂಟಿ ಒಂದು ಕಾಲದಲ್ಲಿ ಕೈಗಡಿಯಾರದ ಮಾರುಕಟ್ಟೆಯ ಶೇ.90 ರಷ್ಟು ಪಾಲು ಹೊಂದಿತ್ತು. 1975 ರಲ್ಲಿ 279 ಕೋಟಿ ರೂ. ಲಾಭ ಗಳಿಸಿತ್ತು. ಇಂದು ಅದರ ಮಾರುಕಟ್ಟೆ ಮೌಲ್ಯ 27 ಸಾವಿರ ಕೋಟಿಯಷ್ಟಾಗಬಹುದು. ಅಷ್ಟು ವೈಭವವಾಗಿ ನಡೆಯುತ್ತಿದ್ದ ಕಾರ್ಖಾನೆಯನ್ನು ಇಂದು ಅಧೋಗತಿಗೆ ತಂದಿಟ್ಟವರ್ಯಾರು ಎಂದು ಪ್ರಶ್ನಿಸಿದರು.
1983-84 ರಲ್ಲಿ ಎಚ್‌ಎಂಟಿಯಲ್ಲಿದ್ದ 350 ತಜ್ಞ ಎಂಜಿನಿಯರ್‌ಗಳನ್ನು ಟೈಟಾನ್ ಮತ್ತು ಟಾಟಾ ಕಂಪನಿಯವರು ಒಂದೇ ರಾತ್ರಿ ಕರೆದುಕೊಂಡು ಹೋದರು. ಕಾರ್ಖಾನೆ ಇಂದು ಮುಚ್ಚುವ ಸ್ಥಿತಿಗೆ ಬಂದಿದೆ. ನಾನು ಒಂದು ಘಟಕಕ್ಕೆ ಭೇಟಿ ನೀಡಿದ ತಕ್ಷಣ 47 ರೂ. ಇದ್ದ ಷೇರು ಮೌಲ್ಯ 92 ರೂ.ಗೆ ಹೆಚ್ಚಾಗಿದೆ. ಸಾರ್ವಜನಿಕ ಉದ್ದಿಮೆಗಳನ್ನು ಮತ್ತೆ ಪುನಶ್ಚೇತನಗೊಳಿಸಬೇಕಿದೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಕೇಂದ್ರ ವಾಣಿಜ್ಯ, ಹಣಕಾಸು ಹಾಗೂ ಇತರ ಇಲಾಖೆಗಳ ಮನವೊಲಿಕೆ ಮಾಡಿ ಬಂಡವಾಳ ಹಿಂತೆಗೆತ ಎಂಬ ನಿರ್ಧಾರವನ್ನು ಬದಲಾವಣೆ ಮಾಡಿ ಬಂಡವಾಳ ಮರು ಹೂಡಿಕೆ ಎಂಬ ತೀರ್ಮಾನ ಮಾಡಬೇಕಿದೆ. ನನಗೆ ಆರು ತಿಂಗಳ ಕಾಲ ಸಮಯಾವಕಾಶ ಕೊಡಿ. ನಷ್ಟದಲ್ಲಿರುವ ಒಂದು ಉದ್ದಿಮೆಯನ್ನು ಲಾಭದಾಯಕವನ್ನಾಗಿ ಮಾಡಿ ಕೇಂದ್ರದ ಪ್ರಮುಖರ ಮನವೊಲಿಸಿ ಮರಳಿ ಮರುಹೂಡಿಕೆಯ ನಿರ್ಧಾರ ಮಾಡುತ್ತೇನೆ ಎಂದು ಹೇಳಿದರು.
ರಾಜ್ಯದ ಭದ್ರಾವತಿಯ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ 15 ಸಾವಿರ ಜನ ಕೆಲಸ ಮಾಡುತ್ತಿದ್ದರು. ಅದು ತುಕ್ಕು ಹಿಡಿದಿದೆ. ಅದೇ ರೀತಿ ಹಲವು ಉದ್ದಿಮೆಗಳು ಮುಚ್ಚಿ ಹೋಗಿವೆ. ಇವುಗಳ ಪುನಶ್ಚೇತನಕ್ಕೆ ದಿನಕ್ಕೆ 15 ಸಭೆ ನಡೆಸುತ್ತಿದ್ದೇನೆ ಎಂದು ಹೇಳಿದರು.
ಕಾವೇರಿ ನೀರನ್ನು ರಾಜ್ಯಕ್ಕೆ ಉಳಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದಾಗ ಕೈ ಜೋಡಿಸಿ ಮನವಿ ಮಾಡಿದ್ದಾರೆ. ಕೇಂದ್ರ ಜಲಶಕ್ತಿ ಸಚಿವರನ್ನೂ ಭೇಟಿ ಮಾಡಿ ಮನವಿ ಮಾಡಿದ್ದು, ಶೀಘ್ರವೇ ಕಾವೇರಿ ವಿಚಾರವಾಗಿ ಸಭೆ ಕರೆಯುವುದಾಗಿ ಭರವಸೆ ದೊರೆತಿದೆ.
ಸೋಮವಾರ ರಾಜ್ಯಸಭೆಯಲ್ಲಿ ದೇವೇಗೌಡರು ಯೋಜನೆಯ ಬಗ್ಗೆ ಪ್ರಸ್ತಾಪ ಮಾಡಲಿದ್ದಾರೆ. ನಾನು ಅಲ್ಲಿ ಇರಬೇಕು. ಇಲ್ಲವಾದರೆ ತಮಿಳುನಾಡಿನ 10 ಮಂದಿ ಸಂಸದರು ಎದ್ದುನಿಂತು ಗಲಾಟೆ ಮಾಡುತ್ತಾರೆ ಎಂದು ಹೇಳಿದರು.
ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಎಂದಾದರೂ ಕಾವೇರಿಯ ಬಗ್ಗೆ ಪ್ರಸ್ತಾಪ ಮಾಡಿದ್ದಾರೆಯೇ?, ಹಿರಿಯರಾದರೂ ದೇವೇಗೌಡರು ಮೇಜು ಹಿಡಿದುಕೊಂಡು ಎದ್ದುನಿಂತು ಮಾತನಾಡುತ್ತಾರೆ. ಕಾಂಗ್ರೆಸ್ ನಾಯಕರು ಏಕೆ ಬಾಯಿ ಬಿಡುತ್ತಿಲ್ಲ? ಎಂದರು.
ಕಾವೇರಿ ನೀರು ನಿರ್ವಹಣೆ ಪ್ರಾಧಿಕಾರ ಆದೇಶ ಮಾಡಿದ್ದಕ್ಕಿಂತಲೂ ಹೆಚ್ಚಿನ ನೀರನ್ನು ತಮಿಳುನಾಡಿಗೆ ಈಗಾಗಲೇ ಹರಿಯಬಿಡಲಾಗಿದೆ. ನೀರು ಬಿಡುವ ನಿರ್ಧಾರ ತೆಗೆದುಕೊಂಡು ಬಳಿಕ ಸರ್ವಪಕ್ಷ ಸಭೆ ಕರೆದಿದ್ದರು. ಇಂಡಿಯಾ ರಾಜಕೀಯ ಮಿತ್ರಕೂಟದ ಪಾಲುದಾರ ಪಕ್ಷವಾಗಿರುವ ಡಿಎಂಕೆಯ ಎಂ.ಕೆ.ಸ್ಟಾಲಿನ್ ಅವರನ್ನು ರಾಜ್ಯದ ಮುಖ್ಯಮಂತ್ರಿಗಳು ಎಂದಾದರೂ ಭೇಟಿ ಮಾಡಿ ಪ್ರಾಮಾಣಿಕವಾದ ಚರ್ಚೆ ನಡೆಸಿದ್ದಾರೆಯೇ ಎಂದು ಪ್ರಶ್ನಿಸಿದರು.
ಮುಡಾ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕುಮಾರಸ್ವಾಮಿ, ದೇಸಾಯಿ ಅವರ ಏಕಸದಸ್ಯ ನ್ಯಾಯಾಂಗ ಆಯೋಗ ಮಾಡಿರುವುದೇ ಹಗರಣದಿಂದ ಬಚಾವಾಗಲು. ವಿಧಾನಸಭೆಯಲ್ಲಿ 21 ಹಗರಣವನ್ನು ಪ್ರಸ್ತಾಪಿಸಿ 1,500 ಕೋಟಿ ರೂ. ಹಗರಣವಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಮುಖ್ಯಮಂತ್ರಿಯಾಗಿ ಒಂದೂವರೆ ವರ್ಷವಾಗಿದೆ. ಈವರೆಗೂ ಹಗರಣಗಳ ವಿಚಾರದಲ್ಲಿ ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.
ಮುಡಾದಿಂದ ನೀಡಲಾದ ನಿವೇಶನಕ್ಕಾಗಿ ನಾನು 1984ರಲ್ಲೇ 37 ಸಾವಿರ ರೂ. ಪಾವತಿ ಮಾಡಿದ್ದೆ. ಆದರೆ ಈವರೆಗೂ ನನಗೆ ನಿವೇಶನ ಸಿಕ್ಕಿಲ್ಲ. ಬದಲಿ ನಿವೇಶನ ನೀಡುವಂತೆ ಹಲವು ಬಾರಿ ಪತ್ರ ಬರೆದಿದ್ದೇನೆ. ಯಾವುದೇ ಪ್ರಯೋಜನವಾಗಿಲ್ಲ. ನಿವೇಶನ ಪಡೆಯದೇ ಇದ್ದರೂ ನನ್ನ ವಿರುದ್ಧ ಆರೋಪ ಮಾಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರಿಗೆ ಪರಿಶಿಷ್ಟ ಜಾತಿಯ ಜನರ ಜಾಗವೇ ಬೇಕಿತ್ತೇ?, ಬೇರೆ ಎಲ್ಲೂ ಸ್ಥಳ ಸಿಗಲಿಲ್ಲವೇ?, ಅಧಿಕಾರಿಗಳು ಕಣ್ಣು ಮುಚ್ಚಿಕೊಂಡು ಜಾಗವನ್ನು ಪರಿವರ್ತನೆ ಮಾಡಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಉಪಮುಖ್ಯಮಂತ್ರಿ ಹಾಗೂ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ ಸಿದ್ದರಾಮಯ್ಯ ಅವರು ಭಾವಮೈದುನನಿಂದ ದಾನಪತ್ರ ಪಡೆದುಕೊಳ್ಳಬೇಕಿತ್ತೇ ಎಂದು ಪ್ರಶ್ನಿಸಿದ ಕುಮಾರಸ್ವಾಮಿ, 62 ಕೋಟಿ ರೂ. ಪರಿಹಾರ ನೀಡಬೇಕು ಎಂದು ಕೇಳುತ್ತಿದ್ದಾರೆ. ಯಾರಪ್ಪನ ದುಡ್ಡು ಎಂದು ಕೊಡಬೇಕು? ಎಂದು ಕಿಡಿಕಾರಿದರು.