ದುಬೈ,ಏ.27- ವಿಶ್ವ ಒಕ್ಕಲಿಗರ ಸಂಘದ ವತಿಯಿಂದ ದುಬೈನಲ್ಲಿ ವಿಶ್ವ ಒಕ್ಕಲಿಗರ ವೈಭವ ಮತ್ತು ಕುವೆಂಪು ಜಯಂತೋತ್ಸವ ಕಾರ್ಯಕ್ರಮವು ಪರಮಪೂಜ್ಯ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ದಿವ್ಯಸಾನ್ನಿಧ್ಯ ಮತ್ತು ಆಶೀರ್ವಚನದೊಂದಿಗೆ ಅದ್ಧೂರಿಯಾಗಿ ನೆರವೇರಿತು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ, ಮಂಡ್ಯ ಶಾಸಕ ರವಿಕುಮಾರ್‌ಗೌಡ, ಮಡಿಕೇರಿ ಶಾಸಕ ಮಂಥರ್‌ಗೌಡ, ಕುವೆಂಪು ಪುತ್ರಿ ತಾರಿಣಿ, ಅಳಿಯ ಚಿದಾನಂದಗೌಡ, ನ್ಯಾಯಮೂರ್ತಿ ಸಂದೇಶ್ ಹೆಚ್.ಪಿ., ಚಿತ್ರ ನಿರ್ಮಾಪಕ ನಾಗತಿಹಳ್ಳಿ ಚಂದ್ರಶೇಖರ್, ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಭಗವಾನ್, ಸಚಿನ್ ಚೆಲುವರಾಯಸ್ವಾಮಿ, ಯುನೈಟೆಡ್ ಅರಬ್ ಎಮಿರೇಟ್‌್ಸನ ರಾಷ್ಟ್ರೀಯ ಮುಖಂಡರಾದ ಡಾ.ಬು.ಅಬ್ದುಲ್ಲಾ, ಡಾ. ಯಾಕೂಬ್ ಅಲಿ, ಡಾ.ಅಬ್ದುಲ್ಲಾ, ದುಬೈ ಉದ್ಯಮಿ ಪ್ರವೀಣ್‌ಶೆಟ್ಟಿ, ನಟಿಯರಾದ ದೀಪಿಕಾದಾಸ್, ಶರ್ಮಿಳಾ ಮಾಂಡ್ರೆ, ವಿಶ್ವ ಒಕ್ಕಲಿಗರ ಡೈರೆಕ್ಟರಿಯ ಸಂಪಾದಕ ಡಾ. ಕೆ.ಟಿ.ಚಂದ್ರು ಪಾಲ್ಗೊಂಡಿದ್ದರು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಿಗೆ ಅವರ ವೃತ್ತಿಯಾನುಸಾರ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಡಾ. ಭಗವಾನ್‌ರವರಿಗೆ ವೈದ್ಯಕೀಯ ಪ್ರಶಸ್ತಿ ಕೃಷ್ಣೇಗೌಡ ಕೀಲಾರ ಅವರಿಗೆ ರೈತ ಪ್ರಶಸ್ತಿ, ಕ್ಯಾಪ್ಟನ್ ಸಂತೋಷ್ ಅವರಿಗೆ ವೀರ ಕೇಸರಿ ಪ್ರಶಸ್ತಿ ನೀಡಲಾಯಿತು. ಡಾ.ಕೆ.ಟಿ.ಚಂದ್ರು ಅವರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ವಿವಿಧ ಜಾಗತಿಕ ಕಲಾತಂಡಗಳ ಪ್ರದರ್ಶನ, ದುಬೈ ಒಕ್ಕಲಿಗರ ಕಲೆ, ನೃತ್ಯ, ಗಾಯನ ಇತ್ಯಾದಿಗಳು ಪ್ರೇಕ್ಷಕರ ಮನಸೂರೆಗೊಂಡವು. ಸಂಘದ ಅಧ್ಯಕ್ಷೆ ಡಾ.ರಶಿ ಮತ್ತು ಅವರ ಕಾರ್ಯಕಾರಿ ಸಮಿತಿ ಸದಸ್ಯರನ್ನು ಈ ಅದ್ಧೂರಿ ಕಾರ್ಯಕ್ರಮ ಆಯೋಜನೆಗಾಗಿ ಶ್ಲಾಘಿಸಲಾಯಿತು. ಸಮಾರಂಭಕ್ಕೆ ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಆಗಮಿಸಿದ್ದರು.