ಬೆಂಗಳೂರು,ಆ.20-ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಹತ್ತುತ್ತಿದ್ದಂತೆ ಬಸ್ ಚಲಿಸಿದ ಪರಿಣಾಮ ಕೆಳಗೆ ಬಿದ್ದ ಕೂಲಿ ಕಾರ್ಮಿಕನ ಮೇಲೆ ಬಸ್ ಹರಿದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಜಯನಗರ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.
ಜಯನಗರ 9ನೇ ಬ್ಲಾಕ್‌ನ ಕಾರ್ಪೋರೇಷನ್ ಕಾಲೋನಿ ನಿವಾಸಿ ಸಂಪಂಗಿ (64) ಮೃತಪಟ್ಟ ದುರ್ದೈವಿ. ಇವರು ಸಿಟಿ ಮಾರ್ಕೆಟ್‌ನಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು.ಸಂಪಂಗಿ ಅವರು ಇಂದು ಬೆಳಗ್ಗೆ 9.30 ರ ಸುಮಾರಿನಲ್ಲಿ ಜಯನಗರ 4ನೇ ಬ್ಲಾಕ್ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ. ಆ ವೇಳೆ ಸಿಟಿ ಮಾರ್ಕೆಟ್ ಕಡೆಗೆ ಹೋಗುವ ಬಸ್ ನೋಡಿ ಹಿಂದಿನ ಡೋರ್‌ನಲ್ಲಿ ಹತ್ತಲು ಮುಂದಾಗುತ್ತಿದ್ದಂತೆ ಚಾಲಕ ಡೋರ್ ಮುಚ್ಚಿದ್ದಾನೆ.
ತಕ್ಷಣ ಅವರು ಮುಂದಿನ ಡೋರ್ ಹತ್ತಲು ಹೋದಾಗ ಆ ಬಾಗಿಲು ಮುಚ್ಚಿಕೊಳ್ಳುತ್ತಿದ್ದಾಗ ಸಂಪಂಗಿ ಅವರ ಕೈ ಸಿಕ್ಕಿಕೊಂಡು ಕೆಳಗೆ ಬಿದ್ದಿದ್ದಾರೆ. ಅದೇ ವೇಳೆಗೆ ಇವರ ಮೇಲೆ ಬಸ್ ಚಲಿಸಿದ್ದರಿಂದ ಅವರು ಮೃತಪಟ್ಟಿದ್ದಾರೆ.
ಬಸ್ ಚಾಲಕನ ಬೇಜವಾಬ್ದಾರಿಯಿಂದ ಈ ಘಟನೆ ಸಂಭವಿಸಿರುವುದು ಕಂಡು ಬಂದಿದೆ.
ಸುದ್ದಿ ತಿಳಿದು ಜಯನಗರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪರಿಶೀಲಿಸಿ ಮೃತದೇಹವನ್ನು ಕೆಂಪೇಗೌಡ ಆಸ್ಪತ್ರೆಗೆ ರವಾನಿಸಿದ್ದಾರೆ.ಬಸ್ ಚಾಲಕನನ್ನು ವಶಕ್ಕೆ ಪಡೆದಿರುವ ಜಯನಗರ ಸಂಚಾರಿ ಠಾಣೆ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.