ಗುವಾಹಟಿ, ಜು.28- ಅಸ್ಸಾಂಗೆ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಹೊಸ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸ್ವಾಗತಿಸಿದ್ದಾರೆ. ನೂತನ ರಾಜ್ಯಪಾಲರ ಸಾಂಸ್ಥಿಕ ಮತ್ತು ಶಾಸಕಾಂಗ ಅನುಭವಗಳಿಂದ ರಾಜ್ಯಕ್ಕೆ ಪ್ರಯೋಜನವಾಗಲಿದೆ. ನಿರ್ಗಮಿತ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅಧಿಕಾರಾವಧಿಯಲ್ಲಿ ನೀಡಿದ ಕೊಡುಗೆಗಳಿಗಾಗಿಯೂ ಧನ್ಯವಾದ ತಿಳಿಸಿದ್ದಾರೆ.
ಛತ್ತೀಸ್ಗಢದ ರಾಜ್ಯಪಾಲರ ಹುದ್ದೆಗೆ ಅಸ್ಸಾಂನ ಮಾಜಿ ಸಂಸದ ರಾಮೆನ್ ದೇಕಾ ಅವರನ್ನು ಹೆಸರಿಸಿದ್ದಕ್ಕಾಗಿ ಬಿಸ್ವಾ ಅಭಿನಂದಿಸಿದ್ದಾರೆ. ಆಚಾರ್ಯ ಅವರನ್ನು ಮಣಿಪುರದ ಹೆಚ್ಚುವರಿ ಉಸ್ತುವಾರಿಯೊಂದಿಗೆ ಅಸ್ಸಾಂನ ರಾಜ್ಯಪಾಲರನ್ನಾಗಿ ಮಾಡಲಾಗಿದೆ.
ಬನ್ವಾರಿಲಾಲ್ ಪುರೋಹಿತ್ ಬದಲಿಗೆ ಕಟಾರಿಯಾ ಅವರನ್ನು ಪಂಜಾಬ್ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ ಎಂದು ರಾಷ್ಟ್ರಪತಿ ಭವನ ಪ್ರಕಟಿಸಿದೆ.ಚಂಡೀಗಢದ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗಿಯೂ ಕಟಾರಿಯಾ ಅವರನ್ನು ನೇಮಿಸಲಾಗಿದೆ.
ಲಕ್ಷ್ಮಣ್ ಆಚಾರ್ಯ ಜಿ ಅವರು ಬಡವರ ಸಬಲೀಕರಣಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಅವರು ಸಿಕ್ಕಿಂನ ರಾಜ್ಯಪಾಲರಾಗಿ ಅತ್ಯುತ್ತಮ ಅಧಿಕಾರಾವಧಿಯೊಂದಿಗೆ ಶ್ರೀಮಂತ ಸಾಂಸ್ಥಿಕ ಮತ್ತು ಶಾಸಕಾಂಗ ಅನುಭವವನ್ನು ಹೊಂದಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಶರ್ಮಾ ಬರೆದುಕೊಂಡಿದ್ದಾರೆ. ನಮ್ಮ ರಾಜ್ಯಕ್ಕೆ ಅವರು ಅತ್ಯುತ್ತಮ ರಾಜ್ಯಪಾಲರಾಗುತ್ತಾರೆ ಎಂಬ ವಿಶ್ವಾಸ ನನಗಿದೆ. ಅವರ ಹೊಸ ಹುದ್ದೆಗೆ ನನ್ನ ಶುಭಾಶಯಗಳು ಎಂದು ಅವರು ಹೇಳಿದ್ದಾರೆ.