ಬೆಳಗಾವಿ,ಏ.14- ಸಾರ್ವಜನಿಕ ಸಭೆ ಸಮಾರಂಭಗಳಲ್ಲಿ ಮಾತನಾಡುವಾಗ ಬಿಜೆಪಿ ನಾಯಕರ ನಾಲಿಗೆ ಬಿಗಿ ಹಿಡಿತದಲ್ಲಿರಬೇಕು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಸಿದ್ದಾರೆ. ಬಿಜೆಪಿಯ ಮಾಜಿ ಶಾಸಕ ಸಂಜಯ್ ಪಾಟೀಲ್ ನನ್ನ ವಿರುದ್ಧ ನೀಡಿರುವ ಹೇಳಿಕೆ ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಎಂದರು.
ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ ನಿಮಿತ್ತ ಬೆಳಗಾವಿಯಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. ಸಂಜಯ್ ಪಾಟೀಲ್ ನನ್ನ ವಿರುದ್ಧ ಮಾತನಾಡುವಾಗ ವೇದಿಕೆಯಲ್ಲಿದ್ದ ಹಿರಿಯ ನಾಯಕರು ಅದನ್ನು ತಡೆಯಬಹುದಿತ್ತು. ರಾಜ್ಯದ ಮಹಿಳೆಯರನ್ನು ನಾನು ಪ್ರತಿನಿಧಿಸುತ್ತೇನೆ. ನನ್ನ ವಿರುದ್ಧ ಹೇಳಿಕೆಯನ್ನು ಬಿಜೆಪಿಯವರು ಸಂಜಯ್ ಪಾಟೀಲ್ ಮೂಲಕ ಹೇಳಿದ್ದಾರೆ ಎನಿಸುತ್ತಿದೆ ಎಂದರು. ಇದು ನನಗೆ ಮಾಡಿದ ಅಪಮಾನ ಅಲ್ಲ, ಇಡೀ ಸ್ತ್ರೀ ಕುಲಕ್ಕೆ ಮಾಡಿದ ಅವಮಾನ ಎಂದು ಸಚಿವರು ಕಿಡಿ ಕಾರಿದರು.
ಇದು ಇಡೀ ಸಮಾಜಕ್ಕೆ ಮಾಡಿದ ಅವಮರ್ಯಾದೆ. ಇದರಿಂದ ಮಹಿಳೆಯರ ಆತ್ಮಗೌರವಕ್ಕೆ ಧಕ್ಕೆಯಾಗಿದೆ. ಅವರ ಹೇಳಿಕೆಯನ್ನು ಇಡೀ ರಾಜ್ಯದ ಮಹಿಳೆಯರು ಧಿಕ್ಕರಿಸಲು ಕರೆ ಕೊಡುವೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ಇಡೀ ಸಮಾಜ ನನ್ನ ಜೊತೆಗೆ ಇದೆ. ಇಡೀ ಕಾಂಗ್ರೆಸ್ ಪಕ್ಷದ ನಾಯಕರು ನನ್ನ ಜೊತೆಗೆ ಇದ್ದಾರೆ ಎಂದು ಹೇಳಿದರು.
ಬಿಜೆಪಿಗರು ಮಹಿಳಾ ಸಬಲೀಕರಣದ ವಿರೋಧಿಗಳು :
ಬಿಜೆಪಿಗರು ಮಹಿಳಾ ಅಭಿವೃದ್ಧಿ, ಸಬಲೀಕರಣದ ವಿರೋಧಿಗಳು. ಇದಕ್ಕಾಗಿಯೇ ಹೋದಲ್ಲೆಲ್ಲಾ ನಮ್ಮ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತುಂಬಾ ಹಿರಿಯರು, ಗ್ಯಾರಂಟಿ ಯೋಜನೆಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ. ಎಸಿ ರೂಂನಲ್ಲಿ ಕುಳಿತಿರುವ ನಿಮಗೆ ಕಷ್ಟ ಸುಖದ ಬಗ್ಗೆ ಅರಿವಿಲ್ಲ. ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುವ ಮೂಲಕ ಸ್ತ್ರೀ ವಿರೋಧಿಗಳು ಎಂದು ಬಿಜೆಪಿಯವರು ನಿರೂಪಿಸಿದ್ದಾರೆ ಎಂದು ಕಿಡಿಕಾರಿದರು.
ಗ್ಯಾರಂಟಿ ಯೋಜನೆಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪುತ್ತಿದ್ದಾರೆ ಎಂಬ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ಕುಮಾರಸ್ವಾಮಿ ಹಿರಿಯರು. ಯಾವ ಹಳ್ಳಿಯ ಮಹಿಳೆ ದಾರಿ ತಪ್ಪಿದ್ದಾರೆ ಎಂದು ಸ್ಪಷ್ಟವಾಗಿ ಹೇಳಲಿ. ಹಳ್ಳಿಯ ಹೆಣ್ಣು ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಿ ಎಂದರು. ಕಾಂಗ್ರೆಸ್ ಯಾವುದೇ ಸ್ವಾರ್ಥಕ್ಕಾಗಿ ಯೋಜನೆಗಳನ್ನು ಮಾಡಿಲ್ಲ. ಬಿಜೆಪಿಯ ಮನಃಸ್ಥಿತಿ ಬಗ್ಗೆ ಜನರಿಗೆ ಗೊತ್ತಾಗಿದೆ. ಬರೀ ಸುಳ್ಳು ಹೇಳುವುದು ಬಿಜೆಪಿಯ ಅಜೆಂಡಾ ಆಗಿದೆ ಎಂದು ಸಚಿವರು ಟೀಕಿಸಿದರು.
ಚಿಕ್ಕೋಡಿ, ಬೆಳಗಾವಿ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಶತಸ್ಸಿದ್ಧ. ಲೋಕಸಭಾ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಬೀಳುತ್ತೆ ಎಂದು ಕೆಲವರು ಹಗಲು ಕನಸು ಕಾಣುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ 135 ಸ್ಥಾನಗಳಲ್ಲಿ ಗೆದ್ದಿದೆ. ಅಂತಹದರಲ್ಲೂ ಕೆಲವರು ಸರ್ಕಾರ ಬೀಳುತ್ತೆ ಅಂತ ಹೇಳುತ್ತಿದ್ದಾರೆ. ಇದು ಬರೀ ಹಗಲುಗನಸು ಎಂದು ಟೀಕಿಸಿದರು. ಚುನಾವಣೆ ಮುಗಿದ ಬಳಿಕ ಮಾಜಿ ಸಚಿವ ಮುರುಗೇಶ್ ನಿರಾಣಿ ಬಗ್ಗೆ ಮಾತನಾಡುತ್ತೇನೆ. ಸಮಾಜ ಪ್ರತಿಕ್ರಿಯೆ ಕೊಟ್ಟಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ಸಚಿವರ ವಿರುದ್ಧದ ಹೇಳಿಕೆಗೆ ಖಂಡನೆ :
ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧದ ಹೇಳಿಕೆಗೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್ ಕಿಡಿಕಾರಿದ್ದಾರೆ. ಇಂಥ ಹೇಳಿಕೆಗಳನ್ನು ಯಾಕೆ ಬಿಜೆಪಿಯವರು ಖಂಡಿಸುವುದಿಲ್ಲ? ರಾಷ್ಟ್ರೀಯ ಮಹಿಳಾ ಆಯೋಗ ಏನು ಮಾಡುತ್ತಿದೆ? ಎಂದು ಪ್ರಶ್ನಿಸಿದರು. ಬೆಳಗಾವಿ ಜಿಲ್ಲೆಯ ಎರಡೂ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಬಿಜೆಪಿಯವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಶಾಸಕರು ಹೇಳಿದರು.
ಈ ವೇಳೆ ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ರಾಜು ಸೇಠ್, ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ, ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಮತ್ತಿತರರು ಉಪಸ್ಥಿತರಿದ್ದರು.