Friday, May 3, 2024
Homeಸಂಪಾದಕೀಯ-ಲೇಖನಗಳುನದಿ ಈಜಿದ ಬಾಲಕ ಪ್ರಧಾನಿ ಆಗಿದ್ದು ಹೇಗೆ..? ಬಹದ್ದೂರ್ ಶಾಸ್ತ್ರಿ ಕುರಿತ ವಿಶೇಷ ಲೇಖನ

ನದಿ ಈಜಿದ ಬಾಲಕ ಪ್ರಧಾನಿ ಆಗಿದ್ದು ಹೇಗೆ..? ಬಹದ್ದೂರ್ ಶಾಸ್ತ್ರಿ ಕುರಿತ ವಿಶೇಷ ಲೇಖನ

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಮಾತಿಗೆ ಅನ್ವರ್ಥರಾದವರು ಹಲವರು. ಶಿವಾಜಿಯದು ಎತ್ತರದ ನಿಲುವಲ್ಲ, ಆದರೆ ತನ್ನ ಧೈರ್ಯ, ಸಾಹಸಗಳಿಂದ ಸಾಮ್ರಾಜ್ಯ ಕಟ್ಟಿ ಜನರ ಮನಸಿನಾಳದಲ್ಲಿ ನೆಲೆಯಾದವನು. ನೆಪೊಲಿಯನ್ ಕುಳ್ಳ ಜಗತ್ತನ್ನೇ ನಡುಗಿಸಿದವನು. ಲಾಲ್ ಬಹದ್ದೂರ್ ಶಾಸ್ತ್ರಿರವರು ಇವರೆಲ್ಲರಿಗಿಂತ ಎತ್ತರದವರೂ ಅಲ್ಲ. ಆದರೆ ಸಾಹಸ, ಸಹನೆ, ಚಾತುರ್ಯ, ಬುದ್ಧಿವಂತಿಕೆ ಹಾಗೂ ಕೌಶಲ್ಯಗಳಿಗೆ ಇವರಾರಿಗೂ ಕಮ್ಮಿಯಿಲ್ಲ. ಈ ಎಲ್ಲಾ ಗುಣಗಳು ಒಂದೆರಡು ದಿನಗಳಲ್ಲಿ ಬೆಳೆಸಿಕೊಂಡಂತಹ ಗುಣಗಳಲ್ಲ.

ಅವರು ಬೆಳೆದು ಬಂದ ಪರಿಸರ ಹಾಗೂ ಪರಿಸ್ಥಿತಿಯ ಪರಿಣಾಮವಾಗಿ ಮೈಗೂಡಿಸಿಕೊಂಡ ಗುಣಗಳೇ ಕಾರಣ.
ಲಾಲ್ ಬಹದ್ದೂರ್‍ರವರಿಗಿನ್ನೂ ಒಂದು ವರ್ಷವಿದ್ದಾಗಲೇ ತಂದೆಯನ್ನು ಕಳೆದುಕೊಂಡರು. ಮುಂದೆ ಇವರ ಅಜ್ಜ ಜವಾಬ್ದಾರಿ ತೆಗೆದುಕೊಂಡರು. ಅಜ್ಜ ಇವರನ್ನು 6ನೇ ತರಗತಿಯವರೆಗೆ ಅವರ ಊರಿನಲ್ಲಿ ವಿದ್ಯಾಭ್ಯಾಸ ಕೊಡಿಸಿದರು. ಆಮೇಲೆ ಕಾಶಿಯಲ್ಲಿ ಓದಲು ವ್ಯವಸ್ಥೆ ಮಾಡಿದರು. ಅವರಲ್ಲಿದ್ದ ಧೈರ್ಯ, ಆತ್ಮಾಭಿಮಾನ ಬಾಲ್ಯದಿಂದಲೇ ಬಂದ ಗುಣಗಳು. ಬಾಲ್ಯದ ಘಟನೆಗಳು ಮಕ್ಕಳ ಮನಸ್ಸಿನ ಮೇಲೆ ಯಾವಾಗಲೂ ಅಳಿಸಲಾಗದ ಪರಿಣಾಮವನ್ನುಂಟು ಮಾಡುತ್ತವೆ.

ಮಾವಿನಮರ ಕಲಿಸಿದ ಪಾಠ:
ಲಾಲ್ ಬಹದ್ದೂರ್ ರವರ ಜೀವನದ ಮೇಲೆ ಪ್ರಭಾವ ಬೀರಿದ ಒಂದು ಘಟನೆ ಹೀಗಿದೆ ನೋಡಿ. ಒಂದಷ್ಟು ಹುಡುಗರು ಹಣ್ಣಿನತೋಟಕ್ಕೆ ನುಗ್ಗಿದರು. ಅವರಲ್ಲಿ ಸಣ್ಣ ಹುಡುಗ ಲಾಲ್ ಬಹಾದ್ದೂರ್. ಉಳಿದವರೆಲ್ಲಾ ಮರ ಹತ್ತಿ ಹಣ್ಣುಗಳನ್ನು ಕೊಯ್ದು ಗಲಾಟೆ ಮಾಡುತ್ತಿದ್ದರೆ ಈ ಪುಟ್ಟ ಬಾಲಕ ಪಕ್ಕದಲ್ಲಿದ್ದ ಹೂವನ್ನುಕೊಯ್ದು ಕೈಯಲ್ಲಿ ಹಿಡಿದುಕೊಂಡು ನೋಡುತ್ತಿದ್ದ. ಅದೇ ಹೊತ್ತಿಗೆ ತೋಟದ ಮಾಲಿ ಕೋಲು ಹಿಡಿದುಕೊಂಡು ಬಂದ. ಅವನನ್ನು ನೋಡಿ ದೊಡ್ಡ ಮಕ್ಕಳು ಓಡಿ ಹೋಗಿ ಪೆಟ್ಟಿನಿಂದ ತಪ್ಪಿಸಿಕೊಂಡರು. ಕೈಗೆ ಸಿಕ್ಕ ಹುಡುಗನಿಗೆ ಚೆನ್ನಾಗಿ ಬಾರಿಸಿದನು ಮಾಲಿ. ಹುಡುಗ ಅಳುತ್ತಾ ನಾನು ತಂದೆ ಇಲ್ಲದ ಹುಡುಗ ಹೊಡೆಯಬೇಡಿ ಎಂದು ಅಳಲಾರಂಭಿಸಿದ, ತಂದೆಯಿಲ್ಲದ ಹುಡುಗನಾದ್ದರಿಂದ ಒಳ್ಳೆಯ ಗುಣ, ನಡತೆ ಕಲಿಯ ಬೇಕಪ್ಪಾ ಎಂದ ಮಾಲಿಯ ಮಾತು ಗಾಢವಾದ ಪರಿಣಾಮವನ್ನು ಬೀರಿತು. ಇನ್ನು ಮುಂದೆ ಯಾವತ್ತೂ ಕೆಟ್ಟ ಕೆಲಸ ಮಾಡಲಾರೆ, ತಪ್ಪು ಹೆಜ್ಜೆ ಇಡಲಾರೆ ಎಂಬ ಧೃಡ ನಿರ್ಧಾರವನ್ನು ಆ ಸಂದರ್ಭದಲ್ಲಿಯೇ ತೆಗೆದುಕೊಂಡರು.

ಬಿಜೆಪಿ ಅಧಿಕಾರದಲ್ಲಿದ್ದಾಗ ಪೊಲೀಸ್ ಠಾಣೆಗೆ ಕೂಡ ರಕ್ಷಣೆ ಇರಲಿಲ್ಲ : ಸಚಿವ ಖರ್ಗೆ

ಈಜಿ ದಡ ದಾಟಿದ ನಾವಿಕ:
ಮತ್ತೊಂದು ದಿನ ಶಾಲೆ ಬಿಟ್ಟು ಸಂಜೆ ಮನೆಗೆ ಬರುವಾಗ ದೋಣಿಯಲ್ಲಿ ಹೋಗಲು ದುಡ್ಡಿಲ್ಲದೆ ಹೋದಾಗ, ಸಹಪಾಠಿಗಳು ಭಿಕ್ಷೆ ಬೇಡಿ ದುಡ್ಡು ಸಂಗ್ರಹಿಸಿ ದೋಣಿಯಲ್ಲಿ ದಡ ಮುಟ್ಟುತ್ತಾರೆ. ವಾಮನಮೂರ್ತಿ ಲಾಲ್‍ಬಹದ್ದೂರ್ ಬೇರೆಯವರ ಬಳಿ ಹಣಕ್ಕಾಗಿ ಕೈ ಚಾಚದೆ, ಪುಸ್ತಕ ಚೀಲವನ್ನು ತಲೆಯ ಮೇಲಿಟ್ಟುಕೊಂಡು ನದಿಯನ್ನೇ ಈಜಿ ದಡ ಸೇರಿದ ಅವರ ಬಾಲ್ಯದ ನಿಷ್ಠೆ ಇಂದಿನ ಭ್ರಷ್ಟರಿಗೆ ಪಾಠವೇ ಸರಿ.

ಸ್ವಂತಕ್ಕಾಗಿ ಮನೆಯನ್ನೂ ಬಯಸದ ವ್ಯಕ್ತಿ. ಗೃಹವಿಲ್ಲದಗೃಹಮಂತ್ರಿ ಎಂದೇ ಖ್ಯಾತರಾದವರು. ತೀವ್ರ ಸ್ವರೂಪದ ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗುತ್ತಿದ್ದ ಬಹದ್ದೂರ್, ಒಟ್ಟು ಏಳು ಬಾರಿ ಜೈಲು ಶಿಕ್ಷೆ ಅನುಭವಿಸಿದರು. ಮಗಳ ಅಸೌಖ್ಯ ಮಗನ ಕಾಯಿಲೆ ಯಾವುದಕ್ಕೂ ಜೈಲು ಶಿಕ್ಷೆಯಲ್ಲಿ ರಿಯಾಯಿತಿ ಇರಲಿಲ್ಲ.
ಮಗಳಿಗೆ ಹುಷಾರಿಲ್ಲವೆಂದು ರಜೆ ಕೇಳಿ, ಅದು ಸಿಕ್ಕಿ ಮನೆಗೆ ಬಂದಾಗ ಮಗಳು ಇಹಲೋಕ ತ್ಯಜಿಸಿಯಾಗಿತ್ತು.

ಇನ್ನು ಮಗನ ಆರೋಗ್ಯ ಸುಧಾರಣೆ ಯಾಗುವುದರೊಳಗೆ ಜೈಲಿಗೆ ಮತ್ತೆ ಹೋಗಬೇಕಾಯಿತು. ವೈಯಕ್ತಿಕ ವಿಷಯಗಳನ್ನೆಲ್ಲಾ ಬದಿಗಿಟ್ಟು ದೇಶವೇ ಮುಖ್ಯವಾಗಿತ್ತು. ಲಾಲ್ ಬಹದ್ದೂರ್‍ವರಿಗೆ. ದೇಶದ ನಾಯಕನಿಗೆ ಇರಲೇ ಬೇಕಾದ ಗುಣಗಳು ನಿಷ್ಠೆ ಮತ್ತು ದಕ್ಷತೆ. ಎಂತಹ ಕಠಿಣ ಸಮಯದಲ್ಲೂ ಕೂಡ ತಮ್ಮ ಗುರಿಯನ್ನು ಬಿಟ್ಟುಕೊಡದ ನಿಶ್ಚಲತೆ ಲಾಲ್ ಬಹದ್ದೂರ್‍ಶಾಸ್ತ್ರಿರವರದ್ದು.

ರಾಜಕೀಯ ಜೀವನದಲ್ಲಿ ಮುಂದೆ ಮಂತ್ರಿಯಾದಾಗ, ಆಮೇಲೆ ಭಾರತದ ಪ್ರಧಾನ ಮಂತ್ರಿಯಾದಾಗಲೂ ವೈಭವದ ಜೀವನಕ್ಕೆ ಮನಸೋಲಲಿಲ್ಲ. ದೇಶದ ಆರ್ಥಿಕ ವ್ಯವಸ್ಥೆ ಹೀನಾಯ ಸ್ಥಿತಿಗೆ ತಲುಪಿದಾಗ ವಾರದ ಒಂದು ಹೊತ್ತು ಉಪವಾಸ ಮಾಡುವ ನಿರ್ಧಾರ ಕೈಗೊಂಡರು, ಅಲ್ಲದೇ ದೇಶವಾಸಿಗಳಲ್ಲೂ ಮನವಿ ಮಾಡಿದರು. ಅದಕ್ಕೆ ದೇಶದ ಜನತೆ ಸ್ಪಂದಿಸಿದರು. ಪ್ರತಿ ಸೋಮವಾರದಂದು ಉಪವಾಸ ಮಾಡಲು ಇಡೀ ದೇಶವೇ ಕೈ ಜೋಡಿಸಿತು.

ಭಾರತ-ಪಾಕ್, ಭಾರತ-ಚೈನಾ ಯುದ್ಧಗಳ ನಿರ್ಣಾಯಕ ಸಂಧರ್ಭದಲ್ಲಿ ಯಾವುದೇ ಅಂಜಿಕೆ ಅಳುಕಿಲ್ಲದೆ ದೃಢ ನಿರ್ಧಾರ ತೆಗೆದುಕೊಂಡು ಸಫಲನಾದ ನಾಯಕ. ಯುದ್ಧದ ಸಂದರ್ಭದಲ್ಲಿ ವಿಶ್ವಸಂಸ್ಥೆಯ ಕದತಟ್ಟದೆ, ಅಂತಾರಾಷ್ಟ್ರೀಯ ಬೆದರಿಕೆಗಳಿಗೆ ಬಗ್ಗದೆ ತಕ್ಷಣ ಸೈನ್ಯಗಳಿಗೆ ಮಾರ್ಗದರ್ಶನ ಮಾಡಿದವರು. ಜೈಜವಾನ್‍ಜೈಕಿಸಾನ್ ಎಂಬ ಧ್ಯೇಯ ವಾಕ್ಯದಂತೆ ನಡೆದವರು.

ಗೋದಾಮಿನಲ್ಲಿ ಬೆಂಕಿ : ಅಪಾರ ಪ್ರಮಾಣದ ಸುಗಂಧದ್ರವ್ಯಗಳು ನಾಶ

ಮಾತು, ಮನಸ್ಸು ಹಾಗೂ ಕೆಲಸ ಮೂರನ್ನು ಶುದ್ಧವಾಗಿಟ್ಟುಕೊಂಡ ನಾಯಕ ಕೇವಲ 19 ತಿಂಗಳು ಪ್ರಧಾನಮಂತ್ರಿ ಪಟ್ಟದಲ್ಲಿದ್ದರು. ಯಾರಿಂದಲೂ ಮಾಡಲಾಗದ ಸಾಧನೆಗಳನ್ನು ಮಾಡಿ ಇತಿಹಾಸದ ಪುಟದಲ್ಲಿ ಅಚ್ಚಳಿಯದ ನೆನಪಾಗಿ ಕಾಡುವವರು ನಮ್ಮ ನೆಚ್ಚಿನ ಆದರ್ಶ ನಾಯಕ ಲಾಲ್ ಬಹದ್ದೂರ್ ಶಾಸ್ತ್ರಿರವರು. ಅವರಿಗೆ ಅವರ ಬಾಲ್ಯದ ಮಹತ್ವ ಘಟನೆಗಳೇ ಅವರನ್ನು ಇಂತಹದೊಂದು ಮಹಾನ್‍ಕಾರ್ಯ ಮಾಡಲು ದಾರಿ ತೋರಿಸಿತೆಂದರೆ ತಪ್ಪಾಗದು. ದೇಶದ ಏಳಿಗೆಗಾಗಿ ಒಬ್ಬವ್ಯಕ್ತಿ ಎಷ್ಟೆಲ್ಲಾ ತ್ಯಾಗ ಮಾಡಬಹುದೋ ಅದೆಲ್ಲವನ್ನೂ ಮಾಡಿದವರು ಲಾಲ್ ಬಹದ್ದೂರ್ ಶಾಸ್ತ್ರಿಯವರು.

-ಡಾ. ಡಿ.ಸಿ.ರಾಮಚಂದ್ರ
ಶ್ರೀಕ್ಷೇತ್ರಆದಿಚುಂಚನಗಿರಿ

RELATED ARTICLES

Latest News